ADVERTISEMENT

ಕೋವಿಡ್‌–19| ಜನರಿಗೆ ಉಚಿತ ಚಿಕಿತ್ಸೆ ಒದಗಿಸಲು ಸಿದ್ದರಾಮಯ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 15:22 IST
Last Updated 23 ಜೂನ್ 2020, 15:22 IST
   

ಬೆಂಗಳೂರು : ಕೊರೊನಾ ರೋಗಿಗಳಿಗೆ ಎಲ್ಲ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಬೇಕು. ಜೊತೆಗೆ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಜಾರಿಗೆ ತರಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಜಾರಿಯಾಗುತ್ತಿರುವ ಬಗ್ಗೆ ನಿಗಾ ವಹಿಸಲು ಸಮಿತಿಯೊಂದನ್ನು ರಚನೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ದರ ನಿಗದಿ ಮಾಡಿ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಈ ಒತ್ತಾಯ ಮಾಡಿದ್ದಾರೆ.

ADVERTISEMENT

ಸಿದ್ದರಾಮಯ್ಯ ಅವರ ಹೇಳೀಕೆಯ ವಿವರ ಹೀಗಿದೆ...

ಕೇಂದ್ರ-ರಾಜ್ಯ ಸರ್ಕಾರಗಳ ಸರಣಿ ವೈಫಲ್ಯಗಳಿಂದಾಗಿ ಕೊರೊನಾ ತೀವ್ರವಾಗಿ ಹರಡುತ್ತಿದೆ. ಪ್ರಧಾನಮಂತ್ರಿಗಳು ಸಾಕಷ್ಟು ಪೂರ್ವ ಸಿದ್ಧತೆಗಳಿಲ್ಲದೆ ಮಾರ್ಚ್ 24, 2020 ರಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿ ಮಧ್ಯರಾತ್ರಿ 12 ಗಂಟೆಗೆ ಲಾಕ್‍ಡೌನ್ ಜಾರಿಗೆ ಬರುವುದಾಗಿ ಘೋಷಣೆ ಮಾಡಿದರು. ಆ ನಂತರ ದೇಶದುದ್ದಗಲಕ್ಕೂ ನಡೆದದ್ದು ಗೊತ್ತೇ ಇದೆ. ಮಾರ್ಚ್ ತಿಂಗಳಲ್ಲಿ ಲಾಕ್‍ಡೌನ್ ಅಗತ್ಯವಿರಲಿಲ್ಲ. ಅವಿವೇಕಿತನದ ತೀರ್ಮಾನದಿಂದಾಗಿ ಕೋಟ್ಯಾಂತರ ಕಾರ್ಮಿಕರು, ಕುಶಲಕರ್ಮಿ ಸಮುದಾಯಗಳು, ರೈತಾಪಿ ಸಮುದಾಯಗಳು ಪಡಬಾರದ ಕಷ್ಟಪಟ್ಟರು. ನೋಟ್‍ಬ್ಯಾನ್ ಮತ್ತು ಜಿ.ಎಸ್.ಟಿಗಳ ಅಸಮರ್ಪಕ ಅನುಷ್ಠಾನಗಳಿಂದಾಗಿ ಲಕ್ವಾ ಹೊಡೆದಂತಾಗಿದ್ದ ದೇಶದ ಆರ್ಥಿಕತೆಗೆ ಲಾಕ್‍ಡೌನ್‍ನಿಂದಾಗಿ ಉತ್ಪಾದಕ ವಲಯಗಳು ಇದ್ಧ ಬದ್ಧ ಚೈತನ್ಯವನ್ನು ಕಳೆದುಕೊಂಡಿವೆ.

ಪ್ರಸ್ತುತ ಕೊರೋನಾ ಸೋಂಕು ಸಮುದಾಯದ ಸೋಂಕಾಗಿ ವ್ಯಾಪಿಸಿಕೊಂಡಿದೆ. ಸರಿಯಾದ ತಪಾಸಣೆಗಳು ನಡೆಯುತ್ತಿಲ್ಲ. ಬಹುಶ: ರಾಜ್ಯದಲ್ಲೇ ಅಸಂಖ್ಯಾತ ಪ್ರಕರಣಗಳಿರಬಹುದು. ಬೆಂಗಳೂರು ಸೇರಿದಂತೆ ರಾಜ್ಯದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಜನರ ದುಡಿಮೆಯ ಅವಕಾಶಗಳೆಲ್ಲ ಮುಚ್ಚಿ ಹೋಗಿವೆ. ಅಸಂಖ್ಯಾತ ಕಾರ್ಮಿಕರು/ನೌಕರರನ್ನು ಕಾರ್ಖಾನೆ ಮತ್ತು ಕಂಪೆನಿಗಳು ಕೆಲಸದಿಂದ ತೆಗೆದು ಹಾಕಿವೆ. ಜನರ ಬಳಿ ಹಣವಿಲ್ಲ.

ಇಂತಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಕೊರೋನಾ ಚಿಕಿತ್ಸೆಗಾಗಿ ದರಗಳನ್ನು ನಿಗಧಿಪಡಿಸಿದೆ. ಪ್ರಸ್ತುತ ದರಗಳನ್ನು ನೋಡಿದರೆ ಮೇಲ್ಮಧ್ಯಮ ವರ್ಗಗಳಿಗೇ ಆಘಾತ ತರುವಂತಿದೆ. ಕೊರೋನಾ ಸೋಂಕು ಕುಟುಂಬದೊಳಕ್ಕೆ ವ್ಯಾಪಿಸಿದರೆ ಸಾಮಾನ್ಯವಾಗಿ ಕುಟುಂಬದ ಸದಸ್ಯರೆಲ್ಲರನ್ನು ಬಾಧಿಸುತ್ತದೆ. ಇಂತಹ ಪರಿಸ್ಥಿಯಲ್ಲಿ ಸರ್ಕಾರ ದಿನಾಂಕ: 23-06-2020 ರಂದು ಈ ಕೆಳಗಿನಂತೆ ಆಸ್ಪತ್ರೆಗೆ ದರಗಳನ್ನು ನಿಗಧಿಪಡಿಸಿದೆ.

ಸರ್ಕಾರ ದಿನವೊಂದಕ್ಕೆ ನಿಗದಿ ಮಾಡಿರುವ ಈ ದರಗಳನ್ನು ಜನತೆ ಎಲ್ಲಿಂದ ನೀಡಲು ಸಾಧ್ಯ? ಈ ದರಗಳನ್ನು ನೋಡಿದರೆ ಸಾಕು ಜನರಿಗೆ ಹೃದಯಾಘಾತವಾಗುವಂತಿದೆ. ಇದನ್ನು ಗಮನಿಸಿದರೆ ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯಗಳು ಜೀವಂತವಾಗಿವೆಯೇ ಎಂಬ ಪ್ರಶ್ನೆ ಬರುತ್ತದೆ. ಜನರ ಬಗ್ಗೆ ಕಾಳಜಿ ಇರುವ ಸರ್ಕಾರವೊಂದು ಮಾಡುವ ಕೆಲಸವೇ ಇದು? ಒಂದು ಕುಟುಂಬದ ನಾಲ್ಕೈದು ಜನ ಸದಸ್ಯರು ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಉಂಟಾದರೆ ಎಲ್ಲಿಂದ 10-12 ಲಕ್ಷಕ್ಕೂ ಅಧಿಕ ಮೊತ್ತದ ಹಣ ತುಂಬಲು ಸಾಧ್ಯ?

ಇದಿಷ್ಟೆ ಅಲ್ಲದೆ ಸರ್ಕಾರದ ಅಧಿಸೂಚನೆ ಪ್ರಕಾರ

1)ಇಬ್ಬರು-ಮೂರು ಜನ ವಾರ್ಡ್‍ಗಳನ್ನು ಹಂಚಿಕೊಂಡು ಚಿಕಿತ್ಸೆ ಪಡೆದರೆ ಅವರಿಗೆ ಮೇಲಿನ ದರಗಳ ಜೊತೆಗೆ ಶೇ.25 ರವರೆಗೆ ಹೆಚ್ಚಿನ ದರಗಳನ್ನು ನಿಗಧಿಪಡಿಸಬಹುದು.

2)ಸರ್ಕಾರ ನಿಗಧಿಪಡಿಸಿರುವ ದರಗಳು ವಿಮಾ ಪ್ಯಾಕೇಜುಗಳಿಗೆ ಅನ್ವಯಿಸುವುದಿಲ್ಲವೆಂದು ಹೇಳಲಾಗಿದೆ.

3)ಸೂಟ್‍ಗಳನ್ನು ಪಡೆದರೆ ಅದಕ್ಕೆ ಮಿತಿ ಇಲ್ಲದಷ್ಟು ವೆಚ್ಚ ವಸೂಲಿ ಮಾಡಬಹುದಾಗಿ ತಿಳಿಸಲಾಗಿದೆ.

ಜನತೆಗೆ ಒಂದು ಕಡೆ ಹಣ ಹೊಂದಿಸುವ ಸಮಸ್ಯೆ ಆದರೆ ಮತ್ತೊಂದು ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಚಿಕಿತ್ಸೆ ನೀಡಲು ಜಾಗವೇ ಇಲ್ಲದೆ ತುಂಬಿ ಹೋಗಿವೆ ಎಂಬ ಮಾಹಿತಿ ಬರುತ್ತಿದೆ. ಸುಮಾರು 35,000 ವೆಂಟಿಲೇಟರ್‍ಗಳನ್ನು ಸರಬರಾಜು ಮಾಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಿದರೆ, ಕೇಂದ್ರವು ಕೇವಲ 90 ವೆಂಟಿಲೇಟರ್‍ಗಳನ್ನು ಮಾತ್ರ ನೀಡಿದೆಯೆಂದು ಮಾಹಿತಿ ಇದೆ. ರಾಜ್ಯ ಸರ್ಕಾರವು ವೆಂಟಿಲೇಟರ್ ಉತ್ಪಾದಿಸಿಕೊಡುವಂತೆ ಕಂಪೆನಿಗಳನ್ನು ಇತ್ತೀಚೆಗೆ ಕೋರಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಮನಗರ ಮತ್ತು ಗುಲ್ಬರ್ಗ ಜಿಲ್ಲೆಗಳಿಗೆ ಸರಬರಾಜು ಮಾಡಲಾಗಿದ್ದ ಔಷಧಿ ಕಳಪೆ ಗುಣಮಟ್ಟದ್ದಾಗಿವೆ ಎಂದು ವರದಿಯಾಗಿದೆ. ಪಿ.ಪಿ.ಇ ಕಿಟ್ ಮತ್ತು ಇನ್ನಿತರೆ ವೈದ್ಯಕೀಯ ಸಲಕರಣೆಗಳ ಕುರಿತು ವೈದ್ಯರೆ ಅನೇಕ ಕಡೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಚಿಕಿತ್ಸೆಯ ಅವ್ಯವಸ್ಥೆ ಕುರಿತಂತೆ ರೋಗಿಯೊಬ್ಬರು ಮಾಡಿರುವ ವರದಿ ಗಾಬರಿ ಹುಟ್ಟಿಸುವಂತಿದೆ. ಇದನ್ನೆಲ್ಲ ನೋಡಿದರೆ ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಪರಿಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ವಿಷಮಿಸುತ್ತಿದೆ.

ಸಂಕಷ್ಟದಿಂದ ಕಂಗೆಟ್ಟ ಜನ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಅರಾಜಕ ವಾತಾವರಣ ನಿರ್ಮಾಣವಾಗುವುದರ ಬದಲು ಸರ್ಕಾರ ತನ್ನ ಪುಕ್ಕಲುತನದ ನೀತಿಯನ್ನು ಮತ್ತು ಖಾಸಗಿ ಆಸ್ಪತ್ರೆಗಳ ಲಾಬಿಯನ್ನು ಮೆಟ್ಟಿ ನಿಂತು ಪರಿಸ್ಥಿಯನ್ನು ನಿಗ್ರಹಿಸಬೇಕಾಗಿದೆ.
ಇಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಚಿಕಿತ್ಸೆ ಕುರಿತಂತೆ ಯಾವುದೇ ನಿರ್ದಿಷ್ಟ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಗಳಿಲ್ಲ.

ಹಾಗಾಗಿ ವಿರೋಧ ಪಕ್ಷದ ನಾಯಕನಾಗಿ ನಾನು ಈ ಕೆಳಕಂಡಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ.

1)ಕೇಂದ್ರ-ರಾಜ್ಯ ಸರ್ಕಾರ ವೈಫಲ್ಯಗಳಿಂದಾಗಿ ಕೊರೋನಾ ಹರಡಿರುವುದರಿಂದ, ಕೊರೋನಾ ಸಂಬಂಧಿತ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕು.

2)ಎಲ್ಲಾ ಆಸ್ಪತ್ರೆಗಳಿಗೆ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಅನ್ನು ಮೊದಲು ನಿಗದಿಪಡಿಸಬೇಕು..
ಚಿಕಿತ್ಸೆಗೆ ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಯಾಕೆ ಬೇಕೆಂದರೆ ಹಣ ಇರುವವರು ಮಾತ್ರ ವೆಂಟಿಲೇಟರ್ ಸೌಲಭ್ಯ ಪಡೆಯುತ್ತಾರೆ. ಬದುಕುವ ಶಕ್ತಿ ಇದ್ದು ಹಣ ಇಲ್ಲದೇ ವೆಂಟಿಲೇಟರ್ ಸೌಲಭ್ಯ ಪಡೆಯಲಾಗದೆ ಬಡ, ಮಧ್ಯಮ ವರ್ಗದ ರೋಗಿಗಳು ಮರಣ ಹೊಂದಿದರೆ ಸರ್ಕಾರ ಕೊಲೆಗಡುಕನ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಕೊರೋನಾದ ಭೀತಿಯನ್ನು ಇನ್ನಷ್ಟು ಹೆಚ್ಚಿಸಿ ಹಣದ ದಂಧೆಗೆ ಅನೇಕರು ಇಳಿಯಬಹುದು.

ಈ ಎಲ್ಲಾ ಸಮಸ್ಯೆಗಳು ತಪ್ಪಬೇಕೆಂದರೆ ಸರ್ಕಾರ ತುರ್ತಾಗಿ ಉಚಿತ ಚಿಕಿತ್ಸೆಯನ್ನು ನೀಡುವ ಬಗ್ಗೆ ಘೋಷಿಸಬೇಕು ಮತ್ತು ಚಿಕಿತ್ಸೆ ನೀಡಲು ಸ್ಟಾಂಡರ್ಡ್ ಟ್ರೀಟ್‍ಮೆಂಟ್ ಪ್ರೊಟೊಕಾಲ್ ಅನ್ನು ಕೂಡಲೇ ನಿಗಧಿಪಡಿಸಬೇಕು.

ಚಿಕಿತ್ಸೆಯ ಶಿಷ್ಠಾಚಾರ ಸರಿಯಾಗಿ ಪಾಲನೆಯಗುತ್ತಿದೆಯೇ ಎಂಬುದನ್ನು ನಿರಂತರವಾಗಿ ಪರಿಶೀಲಿಸಲು ಸರ್ಕಾರ ತಜ್ಞರ ಸಮಿತಿಯನ್ನು ನೇಮಿಸಬೇಕು ಹಾಗೂ ಜನ ಸಾಮಾನ್ಯರು ಆತಂಕವಿಲ್ಲದೆ ಚಿಕಿತ್ಸೆ ತಡೆಯುವಂಥ ನಿರ್ಭೀತ ವಾತಾವರಣ ಸೃಷ್ಟಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.