ADVERTISEMENT

ಕೋವಿಡ್: ನಾಲ್ಕು ಕೋಟಿ ದಾಟಿದ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 17:11 IST
Last Updated 10 ಆಗಸ್ಟ್ 2021, 17:11 IST

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 1.26 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಈವರೆಗೆ ನಡೆಸಲಾದ ಒಟ್ಟು ಪರೀಕ್ಷೆಗಳ ಸಂಖ್ಯೆ 4 ಕೋಟಿ ಗಡಿ (4.01 ಕೋಟಿ) ದಾಟಿದೆ.

ಕಳೆದ ವರ್ಷ 1.41 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ವರ್ಷ 7 ತಿಂಗಳು 10 ದಿನಗಳಲ್ಲಿ 2.59 ಕೋಟಿ ಪರೀಕ್ಷೆಗಳನ್ನು ಮಾಡಲಾಗಿದೆ. ಇದರಲ್ಲಿ 2.21 ಕೋಟಿ ಪರೀಕ್ಷೆಗಳನ್ನು ಆರ್‌ಟಿ–ಪಿಸಿಆರ್ ವಿಧಾನದ ಮೂಲಕ ನಡೆಸಲಾಗಿದೆ. 37 ಲಕ್ಷ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳನ್ನು ಮಾಡಲಾಗಿದೆ. ಕೋವಿಡ್ ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹೀಗಾಗಿ, ಮೂರು ತಿಂಗಳಿನಿಂದ ಪ್ರತಿನಿತ್ಯ ಸರಾಸರಿ 1.50 ಲಕ್ಷ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

ರಾಜ್ಯದಲ್ಲಿ ಮಂಗಳವಾರ 1,338 ಮಂದಿ ಕೊರೊನಾ ಸೋಂಕಿತರಾಗಿರುವುದು ದೃಢಪಟ್ಟಿದೆ. ಶೇ 1.05 ರಷ್ಟು ಸೋಂಕು ದೃಢ ಪ್ರಮಾಣ ವರದಿಯಾಗಿದೆ. 15 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ, 11 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ. ಯಾದಗಿರಿ ಹಾಗೂ ಗದಗದಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ.

ADVERTISEMENT

ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡದಲ್ಲಿ 378, ಮೈಸೂರಿನಲ್ಲಿ 71 ಹಾಗೂ ಕೊಡಗಿನಲ್ಲಿ 50 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 315 ಮಂದಿ ಸೋಂಕಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ‍ಪ್ರಕರಣಗಳು 100 ರ ಗಡಿಯೊಳಗೆ ವರದಿಯಾಗಿವೆ. ಈವರೆಗೆ ವರದಿಯಾದ ಕೋವಿಡ್‌ ಪ್ರಕರಣಗಳ ಒಟ್ಟು ಸಂಖ್ಯೆ 29.21 ಲಕ್ಷ ದಾಟಿದೆ.

ಕೋವಿಡ್ ಪೀಡಿತರಲ್ಲಿ 31 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 15 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡದಲ್ಲಿ 8, ಉತ್ತರ ಕನ್ನಡದಲ್ಲಿ 4, ಹಾಸನ ಹಾಗೂ ಬೆಂಗಳೂರಿನಲ್ಲಿ ತಲಾ 3, ಕೋಲಾರ ಹಾಗೂ ಮೈಸೂರಿನಲ್ಲಿ ತಲಾ ಇಬ್ಬರು ಸಾವಿಗೀಡಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮರಣ ಪ್ರಮಾಣ ದರವು ಶೇ 2.31 ರಷ್ಟು ವರದಿಯಾಗಿದೆ. ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 36,848ಕ್ಕೆ ಏರಿದೆ.

ಸೋಂಕಿತರಲ್ಲಿ 1,947 ಮಂದಿ ಚೇತರಿಸಿಕೊಂಡಿದ್ದಾರೆ. ಗುಣಮುಖರಾದವರ ಸಂಖ್ಯೆ 28.61 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 22,676ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.