ADVERTISEMENT

ಉಡುಪಿ: ಕೆಎಂಸಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 16 ಮೇ 2020, 13:44 IST
Last Updated 16 ಮೇ 2020, 13:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಮಣಿಪಾಲದ ಕಸ್ತೂರ ಬಾ (ಕೆಎಂಸಿ) ಆಸ್ಪತ್ರೆಯಲ್ಲಿ ಮೇ 14ರಂದು ಮೃತಪಟ್ಟ ವ್ಯಕ್ತಿಗೆ ಕೋವಿಡ್–19 ಸೋಂಕು ಇರುವುದು ದೃಢಪಟ್ಟಿದೆ. ಶನಿವಾರ ಬಂದ ಮೃತ ವ್ಯಕ್ತಿಯ ಪರೀಕ್ಷಾ ವರದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಮೃತ 54 ವರ್ಷದ ವ್ಯಕ್ತಿ ಕುಂದಾಪುರ ತಾಲ್ಲೂಕಿನವರಾಗಿದ್ದು, ಈಚೆಗೆ ಮಹಾರಾಷ್ಟ್ರದಿಂದ ಬಂದಿದ್ದರು. ಮೇ 13ರಂದು ಸಂಜೆ ಅವರಿಗೆ ಹೃದಯಾಘಾತವಾಗಿದ್ದು, ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೇ 14ರಂದು ಸಂಜೆ ವ್ಯಕ್ತಿ ಮೃತಪಟ್ಟಿದ್ದರು ಎಂದು ಡಾ.ಅವಿನಾಶ್ ಶೆಟ್ಟಿ ಮಾಹಿತಿ ನೀಡಿದರು.

ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಕೂಡಲೇ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಶನಿವಾರ ವರದಿಯಲ್ಲಿ ಕೋವಿಡ್‌ ಸೋಂಕು ಇರುವುದು ಖಚಿತವಾಗಿದೆ ಎಂದು ತಿಳಿಸಿದರು.

ADVERTISEMENT

ವೈದ್ಯರು ಸಿಬ್ಬಂದಿ ಕ್ವಾರಂಟೈನ್‌:

ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಬಳಿಕ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಚಿಕಿತ್ಸೆ ನೀಡಲಾಗಿದೆ. ಸೋಂಕಿತನಿಗೆ ಚಿಕಿತ್ಸೆ ನೀಡಿದ ತಂಡದಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಅಧೀಕ್ಷಕರು ಹೇಳಿದರು.

ಆಸ್ಪತ್ರೆ ಸೇವೆ ಅಬಾಧಿತ:

ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಹೊರ ರೋಗಿ ವಿಭಾಗಗಳು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1ರವರೆಗೆ ತೆರೆದಿರಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.