ADVERTISEMENT

ಕೋವಿಡ್: ಹಾಸಿಗೆಯಿದ್ದರೂ ಆಕ್ಸಿಜನ್ ಇಲ್ಲ!

ನಗರದ ಖಾಸಗಿ ಆಸ್ಪತ್ರೆಗಳ ವೈದ್ಯರ ಅಳಲು l ರೋಗಿಗಳಿಗೆ ತಪ್ಪದ ಆಸ್ಪತ್ರೆ ಅಲೆದಾಟ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 18:50 IST
Last Updated 20 ಏಪ್ರಿಲ್ 2021, 18:50 IST
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಆಕ್ಸಿಪ್ಲಾಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನಲ್ಲಿ ಆಮ್ಲಜನಕ ಸಿದ್ಧವಾಗುತ್ತಿರುವುದು  - ಪ್ರಜಾವಾಣಿ ಚಿತ್ರ
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಆಕ್ಸಿಪ್ಲಾಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನಲ್ಲಿ ಆಮ್ಲಜನಕ ಸಿದ್ಧವಾಗುತ್ತಿರುವುದು  - ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್ ತೀವ್ರತೆ ಯಿಂದಾಗಿ ನಗರದಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ, ಬಹುತೇಕ ಖಾಸಗಿ ಆಸ್ಪತ್ರೆಗಳು ಹಾಸಿಗೆ ಯಿದ್ದರೂ ವೈದ್ಯಕೀಯ ಆಮ್ಲಜನಕ (ಆಕ್ಸಿಜನ್) ಇಲ್ಲ ಎಂಬ ಕಾರಣ ನೀಡಿ ಸೋಂಕಿತರನ್ನು ದಾಖಲಿಸಿಕೊಳ್ಳಲು ನಿರಾಕರಿಸುತ್ತಿವೆ.

ಕೋವಿಡ್ ಎರಡನೇ ಅಲೆಯಲ್ಲಿ ವೇಗವಾಗಿ ಸೋಂಕು ವ್ಯಾಪಿಸಿಕೊಳ್ಳು
ತ್ತಿದೆ. ಕೆಲ ದಿನಗಳಿಂದ ಕೋವಿಡ್‌ಗೆ ಸಾವಿಗೀಡಾಗುವವರ ಸಂಖ್ಯೆ ಕೂಡ ಏರಿಕೆ ಕಂಡಿದೆ. ಈ ತಿಂಗಳಲ್ಲಿ 20 ದಿನಗಳಲ್ಲಿ (ಏ.20ರವರೆಗೆ) 601 ಮಂದಿ ಸಾವಿಗೀಡಾಗಿದ್ದಾರೆ. ದಿನ ವೊಂದಕ್ಕೆ ದೃಢಪಡುತ್ತಿರುವ ಮರಣ ಪ್ರಕರಣಗಳ ಸಂಖ್ಯೆ ನೂರರ ಗಡಿ ಆಸುಪಾಸಿಗೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಲಕ್ಷದ ಗಡಿ ದಾಟಿದೆ.

ಕೋವಿಡ್‌ ಪೀಡಿತರಲ್ಲಿ ಶೇ 90ರಷ್ಟು ಮನೆ ಆರೈಕೆಗೆ ಒಳಗಾಗಿದ್ದಾರೆ. ಸಮಸ್ಯೆ ಗಂಭೀರ ಸ್ವರೂಪ ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದಾಗಿ ಹೆಚ್ಚಿನವರಿಗೆ ಆಮ್ಲಜನಕದ ಸಂಪರ್ಕ ಒದಗಿಸಬೇಕಿದೆ. ನಗರದಲ್ಲಿ ಇರುವ 500ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳಲ್ಲಿ ಅಪೋಲೊ, ಮಣಿಪಾಲ್, ಕೊಲಂಬಿಯಾ ಏಷ್ಯಾ ಸೇರಿದಂತೆ ಪ್ರಮುಖ 8ರಿಂದ 10 ಆಸ್ಪತ್ರೆಗಳು ಮಾತ್ರ ಆಮ್ಲಜನಕ ಘಟಕಗಳನ್ನು ಹೊಂದಿವೆ. ಉಳಿದವು ದೈನಂದಿನ ಪೂರೈಕೆಯನ್ನೇ ಅವಲಂಬಿಸಿವೆ.

ADVERTISEMENT

ಇದರಿಂದಾಗಿ ಬಹುತೇಕ ಆಸ್ಪ‍ತ್ರೆಗಳು ಆಕ್ಸಿಜನ್ ಸಮಸ್ಯೆ ಎದುರಿಸುತ್ತಿವೆ. ನಗರದ ಖಾಸಗಿ ಆಸ್ಪತ್ರೆಗಳಿಗೆ ಪ್ರತಿದಿನ ವೈದ್ಯಕೀಯ ಬಳಕೆಗೆ 300 ಟನ್ ಆಕ್ಸಿಜನ್ ಅಗತ್ಯವಿದೆ.

ಸರ್ಕಾರದ ವಿರುದ್ಧ ಆಕ್ರೋಶ

ಆಮ್ಲಜನಕ ಸಂಪರ್ಕ ಹೊಂದಿರುವ ಹಾಸಿಗೆಗಾಗಿ ಕೋವಿಡ್‌ ಪೀಡಿತರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಲಾರಂಭಿಸಿದ್ದಾರೆ. ಈಗಾಗಲೇ ದಾಖಲಾಗಿರುವ ರೋಗಿಗಳಿಗೆ ಆಮ್ಲಜನಕ ಪೂರೈಸಲು ಸಾಧ್ಯವಾಗದ ಕಾರಣ ರೋಗಿಗಳು ಬೇರೆಡೆಗೆ ತೆರಳಲು ಇಚ್ಛಿಸಿದಲ್ಲಿ ಬಿಡುಗಡೆ ಮಾಡುವುದಾಗಿ ಆತ್ರೇಯಾ ಸೇರಿದಂತೆ ಕೆಲ ಆಸ್ಪತ್ರೆಗಳು ಹೇಳುತ್ತಿವೆ. ಇದರಿಂದಾಗಿ ಕೋವಿಡ್ ಪೀಡಿತರು ಹಾಗೂ ಅವರ ಕುಟುಂಬದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಟೀಕೆ ವ್ಯಕ್ತವಾಗಿದೆ.

‘ನಮಗೆ ಕೃತಕ ಆಮ್ಲಜನಕ ಒದಗಿಸುತ್ತಿಲ್ಲ. ತುಂಬಾ ಸುಸ್ತಾಗುತ್ತಿದ್ದು, ಸರಿಯಾದ ಚಿಕಿತ್ಸೆಯೂ ಸಿಗುತ್ತಿಲ್ಲ. ಇದರಿಂದಾಗಿಯೇ ಜನಗಳು ಸಾಯುತ್ತಾ ಇದ್ದಾರೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತೆಯೊಬ್ಬರು ಅಳಲು ತೋಡಿ ಕೊಂಡಿದ್ದಾರೆ.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲ ಜನಕದ ಕೊರತೆಯಿಲ್ಲ. ಖಾಸಗಿ ಆಸ್ಪತ್ರೆ ಗಳು ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ ಇಟ್ಟುಕೊಳ್ಳದೆಯೇ ಈಗ ಆಕ್ಸಿಜನ್‌ ಇಲ್ಲ ಎಂದು ಕೈಚೆಲ್ಲುತ್ತಿವೆ. ಕೆಲ ಆಸ್ಪತ್ರೆಗಳು ಒಟ್ಟಾಗಿ ಸಾರಿಗೆ ವ್ಯವಸ್ಥೆ ಮಾಡಿಕೊಂಡು, ಸಿಲಿಂಡರ್ ತರಿಸಿಕೊಂಡಲ್ಲಿ ಸಮಸ್ಯೆ ಯಾಗದು’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದರು.

‘ಅಸಹಾಯಕರಾಗಿದ್ದೇವೆ’

‘ಗಂಭೀರವಾಗಿ ಅಸ್ವಸ್ಥಗೊಂಡ ಐವರು ಸೋಂಕಿತರಿಗೆ ನಿರಂತರ ಆಮ್ಲಜನಕ ಸಂಪರ್ಕ ಒದಗಿಸಬೇಕಿದೆ. ದಿನಕ್ಕೆ 20 ಸಿಲಿಂಡರ್‌ ಬೇಕಿದೆ. ಆದರೆ, 5 ಸಿಲಿಂಡರ್ ಮಾತ್ರ ಸಿಗುತ್ತಿದೆ. ಇದರಿಂದಾಗಿ ನಾವು ಅಸಹಾಯಕರಾಗಿ
ದ್ದೇವೆ. ಆಕ್ಸಿಜನ್ ಸಿಕ್ಕರೆ ಮಾತ್ರ ರೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯ.
ಸುತ್ತಮುತ್ತಲಿನ ಎಲ್ಲ ಆಸ್ಪತ್ರೆಗಳು ಸೇರಿ ಆಕ್ಸಿಜನ್ ಸಿಲಿಂಡರ್‌ ತರಲು ಪೀಣ್ಯಕ್ಕೆ ವಾಹನ ಕಳುಹಿಸಿವೆ. ಸಿಲಿಂಡರ್ ಸಿಗದಿದ್ದಲ್ಲಿ ಸೋಂಕಿತರ ಜೀವಕ್ಕೆ ಅಪಾಯವಾಗಲಿದೆ’ ಎಂದು ಆತ್ರೇಯಾ ಆಸ್ಪತ್ರೆಯ ಡಾ. ನಾರಾಯಣ ಸ್ವಾಮಿ ತಿಳಿಸಿದರು.

‘ಅಧಿಕಾರಿಗಳ ತಂಡ ಆಸ್ಪತ್ರೆಗೆ ಬಂದು ಪರಿಶೀಲಿಸಿದರೂ ಸಮಸ್ಯೆ ಪರಿಹಾರ ವಾಗಿಲ್ಲ. ರೋಗಿಗಳು ನರಳಾಟ ನಡೆಸುತ್ತಿದ್ದಾರೆ. ನಮ್ಮಲ್ಲಿ 74 ಹಾಸಿಗೆಗಳಿವೆ. ಅದರಲ್ಲಿ 34 ಹಾಸಿಗೆಗಳು ಭರ್ತಿಯಾಗಿವೆ. ಸರ್ಕಾರಿ ಕೋಟಾದ 37 ಹಾಸಿಗೆಗಳು ಖಾಲಿಯಿವೆ. ಆಕ್ಸಿಜನ್ ನೀಡಿದ ಬಳಿಕವೇ ರೋಗಿಗಳನ್ನು ಕಳುಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ‘ರೆಮ್‌ಡಿಸಿವಿರ್’ ಔಷಧ ಕೂಡ ಸಿಗುತ್ತಿಲ್ಲ. ಸಂಬಂಧಿಸಿದವರು ದೂರವಾಣಿ ಕರೆಗೆ ಸ್ಪಂದಿಸುತ್ತಿಲ್ಲ’ ಎಂದು ಬೇಸರ
ವ್ಯಕ್ತಪಡಿಸಿದರು.

ದಾಖಲಾತಿ ನಿರಾಕರಣೆ ಅನಿವಾರ್ಯ

‘ವೈದ್ಯಕೀಯ ಆಮ್ಲಜನಕ ಕೊರತೆ ಮುಂದುವರಿದಿದೆ. ನಮಗೇ ಆಮ್ಲಜನಕ ದೊರೆಯುತ್ತಿಲ್ಲ ಎಂದು ಪೂರೈಕೆದಾರರು ಹೇಳುತ್ತಿದ್ದಾರೆ. ಸರ್ಕಾರವು ಇದಕ್ಕೆ ಪರಿಹಾರ ಒದಗಿಸಬೇಕು. ಔಷಧವು ಸಿಗದಿದ್ದಲ್ಲಿ ಪರ್ಯಾಯ ಔಷಧ ನೀಡಬಹುದು. ಆದರೆ,
ಆಕ್ಸಿಜನ್‌ಗೆ ಬೇರೆ ಆಯ್ಕೆಗಳಿಲ್ಲ. ಆಮ್ಲಜನಕ ಸಿಗದಿದ್ದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಬಿಡುಗಡೆಮಾಡಿ, ಸರ್ಕಾರಿ ಆಸ್ಪತ್ರೆಗೆ ಕಳುಹಿಸಬೇಕಾಗುತ್ತದೆ. ವಾರ್‌
ರೂಮ್‌ಗೆ ಕರೆ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ. ಪ್ರಸನ್ನ
ಎಚ್‌.ಎಂ. ತಿಳಿಸಿದರು.

‘ಆಕ್ಸಿಜನ್ ಇರದ ಕಾರಣ ಬಹುತೇಕ ಆಸ್ಪತ್ರೆಗಳು ಹೊಸದಾಗಿ ಕೋವಿಡ್ ಪೀಡಿತರನ್ನು ದಾಖಲಿಸಿಕೊಳ್ಳು
ತ್ತಿಲ್ಲ. ಎರಡರಿಂದ ಮೂರು ದಿನಕ್ಕೆ ಸಾಕಾಗುವಷ್ಟು ಆಕ್ಸಿಜನ್ ಇರುವ ಆಸ್ಪತ್ರೆಗಳು ಮಾತ್ರ ಸೋಂಕಿತರನ್ನು ದಾಖಲಿಸಿಕೊಳ್ಳುತ್ತಿವೆ. ಆಮ್ಲಜನಕ ಇಲ್ಲದೆಯೇ ದಾಖಲಿಸಿಕೊಂಡು, ರೋಗಿಗೆ ಸಮಸ್ಯೆಯಾದಲ್ಲಿ ಸಾರ್ವಜನಿಕರು ಆಸ್ಪತ್ರೆಯನ್ನು ಆರೋಪಿಯನ್ನಾಗಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬೇಡಿಕೆ– ಪೂರೈಕೆ ನಡುವೆ ಅಂತರ’

‘ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾದವರು ಕನಿಷ್ಠ ನಾಲ್ಕು ದಿನಗಳು ಆಸ್ಪತ್ರೆಗಳಲ್ಲಿ ಇರುತ್ತಾರೆ. ಹಾಗಾಗಿ, ಸಾಮಾನ್ಯ ವಾರ್ಡ್‌ಗಳನ್ನೇ ಐಸಿಯು ವಾರ್ಡ್‌ ಆಗಿ ಪರಿವರ್ತಿಸಲಾಗುತ್ತಿದೆ. ಶೇ 50ರಷ್ಟು ಸಿಲಿಂಡರ್‌ಗಳು ಖಾಲಿಯಾಗುತ್ತಿದ್ದಂತೆ ಇನ್ನುಳಿದ ಸಿಲಿಂಡರ್‌ಗಳನ್ನು ತುಂಬಿಸಿಕೊಂಡು ಬರಲಾಗುತ್ತಿದೆ. ಆದರೂ ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರ ಹೆಚ್ಚಿದೆ. ಒಂದು ತಿಂಗಳಿಗೆ 30 ಆಕ್ಸಿಜನ್ ಸಿಲಿಂಡರ್‌ ಬೇಕಾಗುತ್ತಿತ್ತು. ಈಗ ದಿನಕ್ಕೇ 40 ಸಿಲಿಂಡರ್‌ಗಳು ಬೇಕಾಗುತ್ತಿವೆ’ ಎಂದು ಎಸಿಇ ಸುಹಾಸ್‌ ಆಸ್ಪತ್ರೆಯ ಜಗದೀಶ್‌ ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.