ADVERTISEMENT

ಬಿಮ್ಸ್‌ ಕೋವಿಡ್ ವಾರ್ಡ್‌ನಲ್ಲಿ ಬೆತ್ತಲೆಯಾಗಿ ನೆಲದ ಮೇಲೆ ಒದ್ದಾಡಿ ವೃದ್ಧನ ನರಳಾಟ

ಬಿಮ್ಸ್‌ ಕೋವಿಡ್ ವಾರ್ಡಲ್ಲಿ ಅವ್ಯವಸ್ಥೆ: ಆರೋಪ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 9:17 IST
Last Updated 17 ಜುಲೈ 2020, 9:17 IST
BIMS
BIMS   

ಬೆಳಗಾವಿ: ಇಲ್ಲಿನ ಬಿಮ್ಸ್‌ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ವೃದ್ಧರೊಬ್ಬರು ಹೊಟ್ಟೆ ನೋವು ತಾಳಲಾರದೆ ಬೆತ್ತಲೆಯಾಗಿ ನೆಲದ ಮೇಲೆ ಒದ್ದಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ವೈರಲ್ ಆಗಿದೆ.

ವೈದ್ಯರಿಂದ ಸಕಾಲಕ್ಕೆ ಚಿಕಿತ್ಸೆ ಸಿಗದೇ ಅವರು ಯಾತನೆ ಅನುಭವಿಸಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

‘ಅಥಣಿ ತಾಲ್ಲೂಕಿನ ಹಳ್ಳಿಯೊಂದರ 65 ವರ್ಷದ ಅವರನ್ನು ಕೆಲವು ದಿನಗಳ ಹಿಂದೆ ಹೊಟ್ಟೆನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿತ್ತು. ಅವರಿಗೆ ಕೋವಿಡ್–19 ಸೋಂಕು ದೃಢಪಟ್ಟಿತ್ತು. ಆದರೆ, ಕೋವಿಡ್ ವಾರ್ಡ್‌ನಲ್ಲಿ ಬೆಡ್‌ ಕೊರತೆಯಿಂದಾಗಿ ನೆಲದ ಮೇಲೆಯೇ ಹಾಸಿಗೆ ಹಾಕಿ ಮಲಗಿಸಲಾಗಿತ್ತು. ನರಳಾಡುತ್ತಿದ್ದ ಅವರಿಗೆ ಸಮರ್ಪಕ ಚಿಕಿತ್ಸೆ ಸಿಕ್ಕಿರಲಿಲ್ಲ. ಇದರಿಂದಾಗಿ ಅವರು ನರಳಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮನಕಲಕುವ ಈ ವಿಡಿಯೊ ವೈರಲ್ ಆದ ನಂತರ ಎಚ್ಚೆತ್ತುಕೊಂಡ ಸಿಬ್ಬಂದಿ, ವೃದ್ಧರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಮತ್ತೊಂದು ಪ್ರಕರಣದಲ್ಲಿ, ಸಾಮಾನ್ಯ ರೋಗಿಯನ್ನು ಕೋವಿಡ್ ವಾರ್ಡ್‌ಗೆ ದಾಖಲಿಸಿದ ಘಟನೆಯೂ ನಡೆದಿದೆ. ರೋಗಿಯ ಸಂಬಂಧಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಸಿಬ್ಬಂದಿ ತಪ್ಪು ತಿದ್ದಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

‘ವಾರ್ಡ್‌ನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುತ್ತಿಲ್ಲ. ಸಕಾಲಕ್ಕೆ ಸ್ಪಂದನೆ ದೊರೆಯುತ್ತಿಲ್ಲ. ಕಿಟಕಿಗಳ ಮೂಲಕ ಮಳೆ ನೀರು ಬೀಳುತ್ತಿದ್ದರೂ ಗಮನಿಸುವವರಿಲ್ಲ. ನಾವೇ ಕಿಟಕಿಗೆ ಬಟ್ಟೆ ಕಟ್ಟಿದ್ದೇವೆ. ಶೌಚಾಲಯದಲ್ಲಿ ವ್ಯವಸ್ಥೆ ಸರಿ ಇಲ್ಲ. 30 ಮಂದಿಗೆ ಒಂದೇ ಶೌಚಾಲಯವಿದೆ. ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ’ ಎಂದು ಸೋಂಕಿತರು ದೂರಿದ್ದಾರೆ. ‘ಬೀದಿನಾಯಿಯೊಂದು ಬಂದು ಮಲ ವಿಸರ್ಜನೆ ಮಾಡಿತ್ತು. ಅದನ್ನು ಕೂಡ ಸ್ವಚ್ಛಗೊಳಿಸಿಲ್ಲ. ಇದರಿಂದ ವಾತಾವರಣವೇ ಹಾಳಾಗಿದೆ. ಸಿಬ್ಬಂದಿ ಈ ಬಗ್ಗೆ ತಲೆಕಡಿಸಿಕೊಳ್ಳುತ್ತಿಲ್ಲ’ ಎಂದು ಆರೋಪಿಸಿದ್ದಾರೆ. ಈ ಕುರಿತ ವಿಡಿಯೊ ತುಣಕುಗಳು ಕೂಡ ಹರಿದಾಡುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಮ್ಸ್‌ ವೈದ್ಯಕೀಯ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ, ‘ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ನಾನು ವಾರದಿಂದ ಕ್ವಾರಂಟೈನ್‌ನಲ್ಲಿದ್ದೆ. ಇಂದು ಕರ್ತವ್ಯಕ್ಕೆ ಹಾಜರಾಗಿದ್ದೇನೆ. ವೃದ್ಧ ಬೆತ್ತಲೆಯಾಗಿ ಒದ್ದಾಡಿದ ವಿಡಿಯೊ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.