ADVERTISEMENT

ಕೋವಿಡ್: ವಿಮಾನ ನಿಲ್ದಾಣದಲ್ಲಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 21:15 IST
Last Updated 24 ಆಗಸ್ಟ್ 2021, 21:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಲಂಡನ್, ಯುರೋಪ್ ಮತ್ತು ಮಧ್ಯ ಪೂರ್ವ ರಾಷ್ಟ್ರಗಳಿಂದ ಇಲ್ಲಿಗೆ ಬರುವ ಪ್ರಯಾಣಿಕರು ಕೋವಿಡ್‌ ಆರ್‌ಟಿ–ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ಸಡಿಲಿಸಲಾಗಿದೆ. ಆದರೆ, ವಿಮಾನ ನಿಲ್ದಾಣದಲ್ಲಿಯೇ ಪರೀಕ್ಷೆಗೆ ಗಂಟಲ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ.

ಈ ಬಗ್ಗೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ಪರಿಷ್ಕೃತ ಸುತ್ತೋಲೆ ಹೊರಡಿಸಿದ್ದಾರೆ.

ವಿದೇಶಗಳಲ್ಲಿ ರೂಪಾಂತರಿ ವೈರಾಣುಗಳು ಕಾಣಿಸಿಕೊಂಡ ಕಾರಣ ಆರ್‌ಟಿ–ಪಿಸಿಆರ್‌ ಪರೀಕ್ಷಾ ವರದಿಯನ್ನು ವಿಮಾನ ಏರುವಾಗಲೇ ಕಡ್ಡಾಯವಾಗಿ ಹೊಂದಿರಬೇಕೆಂದು ಸೂಚಿಸಲಾಗಿತ್ತು. ಸದ್ಯದ ಪರಿಸ್ಥಿತಿ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಿಸಿನ ಅನುಸಾರ ನಿಯಮವನ್ನು ಪರಿಷ್ಕರಿಸಲಾಗಿದೆ.ಲಂಡನ್, ಯುರೋಪ್ ಮತ್ತು ಮಧ್ಯ ಪೂರ್ವ ರಾಷ್ಟ್ರಗಳಿಂದ ಇಲ್ಲಿಗೆ ಬರುವವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ರಾಜ್ಯದ ಇತರ ವಿಮಾನ ನಿಲ್ದಾಣದಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಮಾದರಿ ನೀಡಿ, ತೆರಳಬೇಕು. ವರದಿಗಾಗಿ ಕಾಯುವ ಅಗತ್ಯತೆ ಇಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಿಂದ ಬರುವವರು ವಿಮಾನ ನಿಲ್ದಾಣದಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಮಾದರಿ ನೀಡುವ ಜೊತೆಗೆ ಪರೀಕ್ಷೆಯ ವರದಿ ಬರುವವರೆಗೂ ಕಾಯಬೇಕು. ಸೋಂಕಿತರಾಗಿಲ್ಲ ಎನ್ನುವುದು ದೃಢಪಟ್ಟ ಬಳಿಕ ತೆರಳಬೇಕು. ಪ್ರಮಾಣಿತ ಕಾರ್ಯಚರಣಾ ವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.