ADVERTISEMENT

ಕೋವಿಡ್ ಲಸಿಕೆ: ಶೇ 47ರಷ್ಟು ಹಾಜರಾತಿ -ಡಾ.ಕೆ. ಸುಧಾಕರ್‌ 

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 17:30 IST
Last Updated 19 ಜನವರಿ 2021, 17:30 IST
ಡಾ.ಕೆ. ಸುಧಾಕರ್‌ 
ಡಾ.ಕೆ. ಸುಧಾಕರ್‌    

ಬೆಂಗಳೂರು: ಕೋವಿಡ್ ಲಸಿಕೆ ಪಡೆಯುವಿಕೆಗೆ ಮಂಗಳವಾರ ನಿಗದಿಪಡಿಸಲಾಗಿದ್ದ ಫಲಾನುಭವಿಗಳಲ್ಲಿ ಶೇ 47 ರಷ್ಟು ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಉಳಿದವರು ಹಿಂಜರಿಕೆ, ಅನಾರೋಗ್ಯ ಸೇರಿದಂತೆ ನಾನಾ ಕಾರಣಗಳಿಂದ ಗೈರಾಗಿದ್ದಾರೆ.

ಲಸಿಕೆ ವಿತರಣೆಗೆ 356 ಕೇಂದ್ರಗಳನ್ನು ಗುರುತಿಸಲಾಗಿತ್ತು. ಅದರಲ್ಲಿ 346 ಕೇಂದ್ರಗಳಲ್ಲಿ ಲಸಿಕೆ ವಿತರಣೆ ನಡೆದಿದೆ. 32,166 ಫಲಾನುಭವಿಗಳಲ್ಲಿ 15,235 ಮಂದಿ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ. ಉತ್ತರ ಕನ್ನಡ, ಕೋಲಾರ, ವಿಜಯಪುರ, ಮೈಸೂರು, ಚಿಕ್ಕಬಳ್ಳಾಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಲಸಿಕೆ ವಿತರಣೆ ನಡೆದಿಲ್ಲ. ತುಮಕೂರು (ಶೇ 84) ಮತ್ತು ಚಿಕ್ಕಮಗಳೂರು (ಶೇ 70) ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲಬುರ್ಗಿ ಮತ್ತು ಧಾರವಾಡದಲ್ಲಿ ಶೇ 20ರಷ್ಟು ಮಂದಿ ಮಾತ್ರ ಲಸಿಕೆ ಪಡೆಯಲು ಹಾಜರಾಗಿದ್ದರು.

ಮಣಿಪಾಲ್, ಫೋರ್ಟಿಸ್, ಕೊಲಂಬಿಯಾ ಏಷ್ಯಾ, ನಾರಾಯಣ ಹೆಲ್ತ್‌ ಸೇರಿದಂತೆ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಅಲ್ಲಿನ ವೈದ್ಯರು ಕೂಡ ಲಸಿಕೆ ಪಡೆದು ಜಾಗೃತಿ ಮೂಡಿಸಿದರು. ಅದೇ ರೀತಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಹ ವೈದ್ಯಾಧಿಕಾರಿಗಳು ಹಾಗೂ ವೈದ್ಯರು ಲಸಿಕೆ ಪಡೆಯುವ ಮೂಲಕ ಆರೋಗ್ಯ ಕಾರ್ಯಕರ್ತರನ್ನು ಲಸಿಕೆ ಪಡೆಯುವಂತೆ ಪ್ರೇರೇಪಿಸಿದರು.

ADVERTISEMENT

ಮುಂಚೂಣಿಯಲ್ಲಿ ರಾಜ್ಯ: ನಾಲ್ಕು ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 1.41 ಲಕ್ಷ ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಅದರಲ್ಲಿ 82,784 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಅತೀ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಿಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಆಂಧ್ರಪ್ರದೇಶ ಮತ್ತು ಒಡಿಶಾ ನಂತರದ ಸ್ಥಾನಗಳಲ್ಲಿವೆ.

ಅಭಿಯಾನದ ಮೊದಲ ದಿನ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಿಗದಿಪಡಿಸಿದ ಫಲಾನುಭವಿಗಳಲ್ಲಿ ಶೇ 63ರಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದರು. ಎರಡನೇ ದಿನ ಕೇವಲ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಿಸಲಾಗಿತ್ತು. ಮೂರನೇ ದಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಒಳಗೊಂಡಂತೆ 1,017 ಕೇಂದ್ರಗಳಿಂದ 38,242 ಮಂದಿ ಲಸಿಕೆ ಹಾಕಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.