ಬೆಂಗಳೂರು: ಹೃದಯಾಘಾತ, ಹೃದಯಸ್ತಂಭನದಿಂದ ಹಠಾತ್ ಸಾವು ಸಂಭವಿಸುವಲ್ಲಿ ಕೊರೊನಾ ಸೋಂಕು, ಕೋವಿಡ್ ಮತ್ತು ಕೋವಿಡ್ ಲಸಿಕೆಗಳ ಅಡ್ಡಪರಿಣಾಮ ಕಾರಣವೇ ಎಂಬುದರ ಬಗ್ಗೆ ವಿಸ್ತೃತ ಅಧ್ಯಯನದ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.
ರಾಜ್ಯದ ಯುವಕರು ಹಠಾತ್ ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದ ಬೆನ್ನಲ್ಲೇ, ಈ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿತ್ತು. ಅದಕ್ಕಾಗಿ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನೂ ರಚಿಸಿತ್ತು. ಈ ಸಮಿತಿಯ ವರದಿ ಸಿದ್ಧವಾಗಿದ್ದು, ಅದರ ಪ್ರಮುಖಾಂಶಗಳಲ್ಲಿ ಹೀಗೆ ಪ್ರತಿಪಾದಿಸಲಾಗಿದೆ.
‘ಹೃದಯ ಸಂಬಂಧಿ ಕಾಯಿಲೆಗಳಿಂದ ವರದಿಯಾಗುತ್ತಿರುವ ಹಠಾತ್ ಮರಣ ಪ್ರಕರಣಗಳಿಗೆ ‘ದೀರ್ಘಕಾಲದ ಕೋವಿಡ್’ ಕಾರಣ ಎಂಬ ಪ್ರತಿಪಾದನೆಯನ್ನು ಬೆಂಬಲಿಸುವ ದತ್ತಾಂಶಗಳು ನಮ್ಮ ಎದುರು ಇಲ್ಲ’ ಎಂದಿದೆ.
‘ಆದರೆ, ಕೊರೊನಾ ಸೋಂಕು ಮತ್ತು ಲಸಿಕೆಯ ದೀರ್ಘಕಾಲಿನ ಅಡ್ಡ ಪರಿಣಾಮಗಳ ಬಗ್ಗೆ ದೊಡ್ಡ ಮಟ್ಟದ ಸಂಶೋಧನೆಯ ಅಗತ್ಯವಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನಂತಹ (ಐಸಿಎಂಆರ್) ಸಂಸ್ಥೆಗಳು ಈ ವಿಚಾರ ಕುರಿತು ಬಹುಶಿಸ್ತೀಯ ಅಧ್ಯಯನ ನಡೆಸಬೇಕು’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಯುವಜನರ ಹಠಾತ್ ಸಾವು ಪ್ರಕರಣಗಳ ಶವಪರೀಕ್ಷೆ ವರದಿ ಆಧಾರಿತ ನೋಂದಣಿ ಆರಂಭಿಸಬೇಕು
ಶಾಲಾ ಹಂತದಲ್ಲಿಯೇ ಹೃದಯ ತಪಾಸಣೆ, ಜನ್ಮಜಾತ ಹೃದಯ ಕಾಯಿಲೆಗಳಿಗೆ ಸಂಬಂಧಿಸಿದಂತೆ ವಿವರವಾದ ವೈದ್ಯಕೀಯಪರೀಕ್ಷೆ ನಡೆಸಬೇಕು. ಇದರಿಂದ ಅಧಿಕ ತೂಕ, ಬೊಜ್ಜು, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ಗುರುತಿಸಬಹುದಾಗಿದೆ
ಹೃದಯ ರಕ್ತನಾಳದ ಕಾಯಿಲೆಗಳು, ಅವುಗಳ ಕಾರಣಗಳು, ಅಪಾಯಕಾರಿ ಅಂಶಗಳು, ಆರಂಭಿಕ ಹಂತದಲ್ಲೇ ಪತ್ತೆ ಮತ್ತು ತಡೆಗಟ್ಟುವ ಬಗ್ಗೆ ಸಾರ್ವಜನಿಕ ಆರೋಗ್ಯ ಅಭಿಯಾನಗಳ ಮೂಲಕ ಅರಿವು ಮೂಡಿಸಬೇಕು
ಆರೋಗ್ಯಕರ ಆಹಾರ ಸೇವನೆ ಮತ್ತು ಉತ್ತಮ ಜೀವನಶೈಲಿ ಅಳವಡಿಕೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಆಹಾರದಲ್ಲಿ ಸಕ್ಕರೆ ಮತ್ತು ಉಪ್ಪಿನ ಅಂಶವನ್ನು ಕಡಿಮೆ ಮಾಡಬೇಕು
‘ಕಳವಳಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ’
‘ಪ್ರೀತಿಪಾತ್ರರನ್ನು ಅನಿರೀಕ್ಷಿತವಾಗಿ ಕಳೆದುಕೊಂಡ ಜನರ ನಿಜವಾದ ಕಳವಳಗಳಿಗೆ ಸ್ಪಂದಿಸುವ ಕರ್ತವ್ಯ ನನ್ನ ಮೇಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಪ್ರತಿಕ್ರಿಯಿಸಿದ್ದಾರೆ.
‘ಹೃದಯಾಘಾತ ಹೆಚ್ಚುತ್ತಿರುವುದಕ್ಕೆ ಕೋವಿಡ್ ಲಸಿಕೆ ಕಾರಣ ಇರಬಹುದು’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿದ್ದ ಬಯೋಕಾನ್ ಕಂಪನಿ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ‘ಇದು ವಾಸ್ತವಕ್ಕೆ ವಿರುದ್ಧವಾಗಿದ್ದು, ದಾರಿ ತಪ್ಪಿಸುವಂತಿದೆ’ ಎಂದು ‘ಎಕ್ಸ್’ ವೇದಿಕೆಯಲ್ಲಿ ಹೇಳಿದ್ದರು.
ಕಿರಣ್ ಮಜುಂದಾರ್ ಶಾ ಅವರ ಈ ಹೇಳಿಕೆಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ತಿರುಗೇಟು ನೀಡಿರುವ ಮುಖ್ಯಮಂತ್ರಿ, ‘ಪೋಷಕರು ತಮ್ಮ ಚಿಕ್ಕ ಮಕ್ಕಳನ್ನು ಅಥವಾ ಕುಟುಂಬಗಳು ತಮ್ಮ ಅನ್ನದಾತರನ್ನು ಕಳೆದುಕೊಂಡಾಗ ಸ್ಪಷ್ಟತೆಯನ್ನು ಹುಡುಕುವುದು ತಪ್ಪು ಮಾಹಿತಿಯಲ್ಲ. ಅದು ಸಹಾನುಭೂತಿಯಲ್ಲಿ ಬೇರೂರಿರುವ ಆಡಳಿತದ ಕ್ರಿಯೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.