ADVERTISEMENT

ವಾರಾಂತ್ಯ ಕರ್ಫ್ಯೂ: ಮೆಜೆಸ್ಟಿಕ್‌ ಖಾಲಿ ಖಾಲಿ, ರೈಲು ನಿಲ್ದಾಣದಲ್ಲಿ ಜನ ಜಂಗುಳಿ

ವಾರಾಂತ್ಯ ಕರ್ಫ್ಯೂ ವೇಳೆ ಅನಗತ್ಯವಾಗಿ ರಸ್ತೆಗೆ ಇಳಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 20:41 IST
Last Updated 8 ಜನವರಿ 2022, 20:41 IST
ವಾರಾಂತ್ಯ ಕರ್ಫ್ಯೂ ಜಾರಿಯಾಗಿದ್ದರಿಂದ ಬ್ರಿಗೇಡ್‌ ರಸ್ತೆ ಜನರಿಲ್ಲದೆ ಬಿಕೊ ಎನ್ನುತ್ತಿತ್ತು– ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ವಾರಾಂತ್ಯ ಕರ್ಫ್ಯೂ ಜಾರಿಯಾಗಿದ್ದರಿಂದ ಬ್ರಿಗೇಡ್‌ ರಸ್ತೆ ಜನರಿಲ್ಲದೆ ಬಿಕೊ ಎನ್ನುತ್ತಿತ್ತು– ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಕೋವಿಡ್‌ ನಿಯಂತ್ರಿಸಲು ಶನಿವಾರ ವಾರಾಂತ್ಯ ಕರ್ಫ್ಯೂಜಾರಿಗೊಳಿಸಲಾಗಿದ್ದರೂ ನಗರದ ಹಲವೆಡೆ ಜನರು ರಸ್ತೆಯಲ್ಲಿ ಸಂಚರಿಸುತ್ತಿದ್ದುದು ಕಂಡುಬಂತು. ಪ್ರಮುಖ ರಸ್ತೆಗಳಲ್ಲಿ ಹೋಟೆಲ್‌ಗಳು, ಔಷಧದ ಅಂಗಡಿಗಳು ಹೊರತುಪಡಿಸಿ ಬಹುತೇಕ ಅಂಗಡಿ– ಮಳಿಗೆಗಳು ಮುಚ್ಚಿದ್ದವು.

ಕೆ.ಆರ್‌.ಮಾರುಕಟ್ಟೆ, ಕಾರ್ಪೊರೇಷನ್‌ ವೃತ್ತ, ಮೆಜೆಸ್ಟಿಕ್‌, ಮಲ್ಲೇಶ್ವರ, ಯಶವಂತಪುರ, ವಿಜಯನಗರ ಹೀಗೆ ಪ್ರಮುಖ ಸ್ಥಳಗಳಲ್ಲಿ ಮುಂಜಾನೆಯಿಂದಲೇ ಪೊಲೀಸರು, ವಾಹನಗಳನ್ನು ತಡೆದು ತಪಾಸಣೆ ನಡೆಸಿದರು. ಅನಗತ್ಯವಾಗಿ ರಸ್ತೆಗಿಳಿದಿದ್ದ ವಾಹನಗಳನ್ನು ಜಪ್ತಿ ಮಾಡಿದರು. ಕೆ.ಆರ್‌.ಮಾರುಕಟ್ಟೆ ಬಳಿ ಕಾರುಗಳನ್ನು ಜಪ್ತಿ ಮಾಡುವ ಜೊತೆಗೆ ಚಾಲಕರನ್ನು ಸ್ಥಳದಲ್ಲೇ ಕೋವಿಡ್‌ ಪರೀಕ್ಷೆಗೂ ಒಳಪಡಿಸಿದರು.

ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳ ಸಂಚಾರ ವಿರಳವಾಗಿತ್ತು. ಮೆಜೆಸ್ಟಿಕ್‌ ನಿಲ್ದಾಣ ಬಿಕೊ ಎನ್ನುತ್ತಿತ್ತು. ಬೇರೆ ಊರುಗಳಿಂದ ಬಂದಿದ್ದವರು ಬಸ್‌ಗಳಿಗಾಗಿ ಗಂಟೆ ಗಟ್ಟಲೆ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಲುಕಿದ್ದರು.

ADVERTISEMENT

ನಗರದಿಂದ ಬೇರೆ ಬೇರೆ ಊರುಗಳಿಗೆ ಹೋಗುವವರು ಬೆಳಿಗ್ಗೆಯೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದತ್ತ ದೌಡಾಯಿಸಿದ್ದರು. ಹೀಗಾಗಿ ರೈಲು ನಿಲ್ದಾಣದ ಮುಂಭಾಗದಲ್ಲಿ ಜನದಟ್ಟಣೆ ಏರ್ಪಟ್ಟಿತು. ಫ್ಲ್ಯಾಟ್‌ಫಾರ್ಮ್‌ಗಳೂ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದವು.ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಜನದಟ್ಟಣೆ ಕಂಡುಬಂತು.

ಬಿಕೊ ಎನ್ನುತ್ತಿದ್ದ ಲಾಲ್‌ಬಾಗ್‌: ವಾಯು ವಿಹಾರಿಗಳು ಹಾಗೂಸಾರ್ವಜನಿಕರಿಂದ ಸದಾ ಗಿಜಿಗುಡುತ್ತಿದ್ದ ಲಾಲ್‌ಬಾಗ್‌ ಸಸ್ಯತೋಟ ಹಾಗೂ ಕಬ್ಬನ್‌ ಉದ್ಯಾನಗಳ ಎಲ್ಲಾ ದ್ವಾರಗಳಿಗೂ ಬೀಗ ಹಾಕಲಾಗಿತ್ತು. ವಾರಾಂತ್ಯ ಕರ್ಫ್ಯೂ ಇರುವುದರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೂ ವಾಯು ವಿಹಾರಿಗಳು ಹಾಗೂ ಸಾರ್ವಜನಿಕರು ಒಳಗೆ ಪ್ರವೇಶಿಸುವಂತಿಲ್ಲ ಎಂಬ ಫಲಕವನ್ನು ದ್ವಾರಗಳಲ್ಲಿ ಅಳವಡಿಸಲಾಗಿತ್ತು.ನಗರದ ವಿವಿಧೆಡೆಯ ಉದ್ಯಾನಗಳಿಗೂ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಕೆ.ಆರ್‌.ಮಾರುಕಟ್ಟೆ ಬಳಿ ಬೀದಿ ಬದಿ ವ್ಯಾಪಾರ ನಿರ್ಬಂಧಿಸಲಾಗಿತ್ತು. ಮಾರುಕಟ್ಟೆಯ ಒಳಭಾಗದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟಕ್ಕೆ ಬೆಳಿಗ್ಗೆ 10 ಗಂಟೆಯವರೆಗೂ ಅವಕಾಶ ಕಲ್ಪಿಸಲಾಗಿತ್ತು. ಎಂದಿನಷ್ಟು ವಹಿವಾಟು ನಡೆದಿಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

ರಾಜಾಜಿನಗರದ ಶನೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ಆರು ಗಂಟೆಗೇ ಬಾಗಿಲು ತೆರೆಯಲಾಗಿತ್ತು. ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಎಂದಿನಂತೆ ನಡೆಯಿತು.

ಹಾಡಿನ ಮೂಲಕ ಅರಿವು ಮೂಡಿಸಿದ ನಿರ್ವಾಹಕ

ಬಿಎಂಟಿಸಿಯ 31ನೇ ಘಟಕದಲ್ಲಿ ಕಾರ್ಯನಿರ್ವಹಿಸುವ ನಿರ್ವಾಹಕ ಮುನಿಕೃಷ್ಣ‘ಬಂದಿದೆ ಕೊರೊನಾ, ಜಾಗ್ರತೆ ವಹಿಸೋಣ’ ಎಂಬ ಗೀತೆಯ ಮೂಲಕ ಪ್ರಯಾಣಿಕರಿಗೆ ಕೋವಿಡ್‌ ಬಗ್ಗೆ ಅರಿವು ಮೂಡಿಸುತ್ತಿದ್ದದ್ದು ಗಮನ ಸೆಳೆಯಿತು.

‘ಬಸ್‌ ಪ್ರಯಾಣಿಕರ ಪೈಕಿ ಹಲವರು ಮುಖಗವಸು ಧರಿಸುವುದಿಲ್ಲ. ಹೀಗಾಗಿ ಹಾಡಿನ ಮೂಲಕ ಜಾಗೃತಿ ಮೂಡಿಸುತ್ತಿದ್ದೇನೆ’ ಎಂದು ಅವರು ಹೇಳಿದರು.

ಒಂದೇ ದಿನ 798 ವಾಹನ ಜಪ್ತಿ

ವಾರಾಂತ್ಯ ಕರ್ಫ್ಯೂ ವೇಳೆ ಅನಗತ್ಯವಾಗಿ ರಸ್ತೆಗೆ ಇಳಿದಿದ್ದ ಒಟ್ಟು 798 ವಾಹನಗಳನ್ನು ಪೊಲೀಸರು ಶನಿವಾರ ಜಪ್ತಿ ಮಾಡಿದ್ದಾರೆ.

‘ಪಶ್ಚಿಮ (359), ದಕ್ಷಿಣ (151) ಹಾಗೂ ಉತ್ತರ (108) ವಿಭಾಗಗಳಲ್ಲೇ ಗರಿಷ್ಠ ವಾಹನಗಳನ್ನು ಜಪ್ತಿ ಮಾಡಲಾಗಿದೆ. 729 ದ್ವಿಚಕ್ರ, 25 ತ್ರಿಚಕ್ರ ಮತ್ತು 44 ಕಾರುಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.