ADVERTISEMENT

ಕರ್ನಾಟಕ: ಕೋವಿಡ್ ಲಸಿಕೆ ಮೊದಲ ಡೋಸ್‌ಗಿಂತ ಎರಡನೆ ಡೋಸ್‌ ಅಧಿಕ

ಲಸಿಕೆಯ ಗುರಿ ಸಾಧನೆಯಲ್ಲಿ ಕೆಲವೆಡೆ ವ್ಯತ್ಯಾಸ l ಉದ್ಯೋಗ, ಶಿಕ್ಷಣ ಸೇರಿ ವಿವಿಧ ಕಾರಣದಿಂದ ಸ್ಥಳ ಬದಲಾವಣೆ

ವರುಣ ಹೆಗಡೆ
Published 14 ಜುಲೈ 2022, 20:30 IST
Last Updated 14 ಜುಲೈ 2022, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೊದಲ ಡೋಸ್‌ ಲಸಿಕೆ ಪಡೆದವರ ಸಂಖ್ಯೆಗಿಂತ ಎರಡನೇ ಡೋಸ್ ಲಸಿಕೆ ಪಡೆದವರ ಸಂಖ್ಯೆಯೇ ಅಧಿಕವಿದೆ.

ಕೋವಿಡ್ ನಿಯಂತ್ರಣದ ಬಳಿಕಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ವಲಸಿಗರ ಸಂಖ್ಯೆ ಹೆಚ್ಚಿದೆ.ಅನ್ಯರಾಜ್ಯದವರೂ ಇಲ್ಲಿಗೆ ಬರಲಾರಂಭಿಸಿದ್ದಾರೆ. ಹೊರರಾಜ್ಯದಲ್ಲಿ ಮೊದಲ ಡೋಸ್‌ ಪಡೆದವರು ಇಲ್ಲಿ ಎರಡನೇ ಡೋಸ್‌ ಪಡೆಯುತ್ತಿರುವುದರಿಂದ ಈ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ, ಕೋಲಾರ, ಬೀದರ್, ಮಂಡ್ಯ ಸೇರಿದಂತೆ13 ಜಿಲ್ಲೆಗಳಲ್ಲಿ ಮೊದಲ ಡೋಸ್‌ ಲಸಿಕೆಗೆ ಹೋಲಿಸಿದರೆ, ಎರಡನೇ ಡೋಸ್ ಅಧಿಕ ಮಂದಿಗೆ ವಿತರಣೆ ಮಾಡಲಾಗಿದೆ. ಅವಧಿಗೂ ಮುನ್ನ ಶೇಕಡವಾರು ಗುರಿ ಸಾಧನೆಯೂ ಸಾಧ್ಯವಾಗಿದೆ.

ರಾಜ್ಯದಲ್ಲಿ 2021 ಜ.16ರಂದು ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ದೊರೆತಿದೆ.ಕೋಲಾರದಲ್ಲಿ 13.33 ಲಕ್ಷ ಮಂದಿ ಮೊದಲ ಡೋಸ್ ಪಡೆದರೆ, 13.54 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಮಂಡ್ಯದಲ್ಲಿ 14.64 ಲಕ್ಷ ಮೊದಲ ಡೋಸ್ ಹಾಗೂ15 ಲಕ್ಷ ಎರಡನೇ ಡೋಸ್ ನೀಡಲಾಗಿದೆ. ಬೆಳಗಾವಿಯಲ್ಲಿ 40.57 ಲಕ್ಷ,ಬೀದರ್‌ನಲ್ಲಿ 14.20 ಲಕ್ಷ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 9.16 ಲಕ್ಷ ಮಂದಿ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಜಿಲ್ಲೆಗಳಲ್ಲಿ ಎರಡನೇ ಡೋಸ್ ಹಾಕಿಸಿಕೊಂಡವರ ಸಂಖ್ಯೆ ಕ್ರಮವಾಗಿ40.91 ಲಕ್ಷ,14.39 ಲಕ್ಷ ಹಾಗೂ9.24 ಲಕ್ಷವಿದೆ.

ADVERTISEMENT

ಪ್ರಮಾಣದಲ್ಲಿ ವ್ಯತ್ಯಾಸ:ಗದಗ, ಕೊಡಗು, ಕಲಬುರಗಿ, ಹಾಸನ, ಹಾವೇರಿ, ಯಾದಗಿರಿ, ದಾವಣಗೆರೆ ಹಾಗೂ ರಾಮನಗರ ಜಿಲ್ಲೆಯಲ್ಲಿಯೂ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ವಿತರಣೆಯ ಒಟ್ಟಾರೆ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿದೆ. ಎರಡನೇ ಡೋಸ್ ಸಾಧನೆ ಪ್ರಮಾಣ ಅಧಿಕವಾಗುತ್ತಿದೆ.

‘ಜಿಲ್ಲೆಯಲ್ಲಿ ವಲಸಿಗರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ನೆರೆಯ ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಕಾರ್ಮಿಕರು ಬರುತ್ತಾರೆ. ಹೀಗಾಗಿ, ಲಸಿಕೆ ವಿತರಣೆಯಲ್ಲಿ ಮೊದಲ ಡೋಸ್‌ಗಿಂತ ಎರಡನೇ ಡೋಸ್ ವಿತರಣೆ ಅಧಿಕವಿದೆ’ ಎಂದು ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ತಿಳಿಸಿದರು.

‘ಮೊದಲ ಹಾಗೂ ಎರಡನೇ ಡೋಸ್ ವಿತರಣೆಯಲ್ಲಿ ಈಗಾಗಲೇ ನಿಗದಿತ ಗುರಿ ಸಾಧಿಸಲಾಗಿದೆ. ವಲಸೆ ಸೇರಿದಂತೆ ವಿವಿಧ ಕಾರಣಗಳಿಂದ ಕೆಲ ಜಿಲ್ಲೆಗಳಲ್ಲಿ ಮೊದಲ ಡೋಸ್‌ ಪಡೆದವರ ಸಂಖ್ಯೆಗಿಂತ ಎರಡನೇ ಡೋಸ್ ಪಡೆದವರ ಸಂಖ್ಯೆ ಅಧಿಕವಿದೆ. ತಾಂತ್ರಿಕ ಕಾರಣದಿಂದಲೂ ಕೆಲವು ಬಾರಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.

ಮುನ್ನೆಚ್ಚರಿಕೆ ಡೋಸ್‌ಗೆ ಸಿಗದ ವೇಗ

ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗೆ ರಾಜ್ಯದಲ್ಲಿ ವೇಗ ದೊರೆತಿಲ್ಲ.35.91 ಲಕ್ಷ ಮಂದಿ ಈವರೆಗೆ ಮತ್ತೊಂದು ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.2022ರ ಜ.10ರಂದು ಮುನ್ನೆಚ್ಚರಿಕೆ ಡೋಸ್ಲಸಿಕೆ ವಿತರಣೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗಿತ್ತು.ಆರೋಗ್ಯ ಕಾರ್ಯಕರ್ತರಲ್ಲಿ 7.62 ಲಕ್ಷ,ಕೋವಿಡ್ಮುಂಚೂಣಿ ಯೋಧರಲ್ಲಿ 9.45 ಲಕ್ಷ ಮಂದಿ ಎರಡನೇ ಡೋಸ್ಲಸಿಕೆಪಡೆದಿದ್ದಾರೆ. ಇವರಲ್ಲಿ ಕ್ರಮವಾಗಿ 4.77 ಲಕ್ಷ ಹಾಗೂ 4.67 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್ ಹಾಕಿಸಿಕೊಂಡಿದ್ದಾರೆ.

12ರಿಂದ 14 ವರ್ಷದವರಲ್ಲಿ16.44 ಲಕ್ಷ, 15ರಿಂದ 17 ವರ್ಷದವರಲ್ಲಿ 24.85 ಲಕ್ಷ ಹಾಗೂ 18ರಿಂದ 44 ವರ್ಷದವರಲ್ಲಿ 2.91 ಕೋಟಿ ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. 45 ವರ್ಷ ಮೇಲ್ಪಟ್ಟವರಲ್ಲಿ 1.90 ಕೋಟಿ ಮಂದಿಗೆ ಎರಡು ಡೋಸ್ಲಸಿಕೆನೀಡಲಾಗಿದೆ.18ರಿಂದ 60 ವರ್ಷದವರಲ್ಲಿ 3.63 ಲಕ್ಷ ಹಾಗೂ 60 ವರ್ಷಗಳು ಮೇಲ್ಪಟ್ಟವರಲ್ಲಿ 24.47 ಲಕ್ಷ ಮಂದಿ ಮಾತ್ರ ಮುನ್ನೆಚ್ಚರಿಕೆ ಡೋಸ್ಲಸಿಕೆಪಡೆದುಕೊಂಡಿದ್ದಾರೆ.

ಅಂಕಿ–ಅಂಶಗಳು

11.26 ಕೋಟಿ – ಲಸಿಕೆಯ ಒಟ್ಟು ಡೋಸ್‌ಗಳು

5.48 ಕೋಟಿ – ಮೊದಲ ಡೋಸ್ ಪಡೆದವರು

5.40 ಕೋಟಿ – ಎರಡನೇ ಡೋಸ್ ಪಡೆದವರು

37.59 ಲಕ್ಷ – ಮುನ್ನೆಚ್ಚರಿಕೆ ಡೋಸ್ ಪಡೆದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.