ADVERTISEMENT

ರಾಜ್ಯಕ್ಕೆ ತಲುಪಿದ 6.48 ಲಕ್ಷ ಡೋಸ್ ‘ಕೋವಿಶೀಲ್ಡ್‌’ ಲಸಿಕೆ

ಬೆಳಗಾವಿಗೆ 1.40 ಲಕ್ಷ ಡೋಸ್ ಲಸಿಕೆ ಇಂದು

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 18:57 IST
Last Updated 12 ಜನವರಿ 2021, 18:57 IST
' ಕೋವಿಶೀಲ್ಡ್ ' ಲಸಿಕೆ
' ಕೋವಿಶೀಲ್ಡ್ ' ಲಸಿಕೆ   

ಬೆಂಗಳೂರು: ಇದೇ 16ರಿಂದ ಕೋವಿಡ್ ಲಸಿಕೆ ವಿತರಣೆ ಆರಂಭವಾಗಲಿದ್ದು, ರಾಜ್ಯಕ್ಕೆ ಮೊದಲ ಹಂತದಲ್ಲಿ 6.48 ಲಕ್ಷ ಡೋಸ್ ‘ಕೋವಿಶೀಲ್ಡ್’ ಲಸಿಕೆ ಪುಣೆಯಿಂದ ಬಂದಿದೆ. 1.40 ಲಕ್ಷ ಡೋಸ್ ಲಸಿಕೆ ಬುಧವಾರ ಬೆಳಗಾವಿ ತಲುಪಲಿದೆ.

ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸಂಸ್ಥೆಯಿಂದ ಲಸಿಕೆ ಇರುವ 54 ಬಾಕ್ಸ್‌ಗಳು ಬಂದಿದ್ದು, ಅವನ್ನು ಆನಂದರಾವ್ ವೃತ್ತದಲ್ಲಿರುವ ದಾಸ್ತಾನು ಕೇಂದ್ರದಲ್ಲಿ ಇಡಲಾಗಿದೆ.

ಈ ಲಸಿಕೆಗಳನ್ನು 2020 ನ.3ರಂದು ತಯಾರಿಸಲಾಗಿದ್ದು, ಮೇ 1ರವರೆಗೆ ಬಳಸಬಹುದು. ಪ್ರತಿ ಬಾಟಲಿಯಲ್ಲಿ 10 ಡೋಸ್ ಲಸಿಕೆಯಿದ್ದು, ಒಂದು ಬಾಕ್ಸ್‌ನಲ್ಲಿ 1,200 ಬಾಟಲ್‌ಗಳನ್ನು ಜೋಡಿಸಲಾಗಿದೆ. ಪ್ರತಿ ಡೋಸ್‌ನಲ್ಲಿ 0.5 ಎಂ.ಎಲ್‌ ಲಸಿಕೆ ಇರಲಿದ್ದು, ಒಂದು ಬಾಟಲಿಯಲ್ಲಿನ ಲಸಿಕೆಯನ್ನು 10 ಮಂದಿಗೆ ನೀಡಬಹುದಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ADVERTISEMENT

2 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ: ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘2 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯು ಲಸಿಕೆ ವಿತರಿಸಲಿದ್ದು, ಅವರಿಗೆ ತರಬೇತಿ ನೀಡಲಾಗಿದೆ’ ಎಂದರು.

‘ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ಪಡೆಯಬೇಕು. ಲಸಿಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಲಸಿಕೆ ಪಡೆದ ಬಳಿಕ ಅವರ ಮೇಲೆ ಕೆಲ ಸಮಯದವರೆಗೆ ಸೂಕ್ಷ್ಮವಾಗಿ ನಿಗಾ ಇರಿಸಲಾಗುತ್ತದೆ’ ಎಂದು ವಿವರಿಸಿದರು.

‘ಕೋವಿಶೀಲ್ಡ್‌ ಲಸಿಕೆಗೆ ₹ 210’

‘ಲಸಿಕೆಯನ್ನು ಉತ್ತಮವಾಗಿ ಪ್ಯಾಕೇಜ್ ಮಾಡಿ ತರಲಾಗಿದ್ದು, ನಿರ್ದಿಷ್ಟ ತಾಪಮಾನದಲ್ಲಿ ಇರಿಸಲಾಗಿದೆ. ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು ಕಂಪನಿಗಳಿಗೆ ಸಹಕಾರ ನೀಡಿದ ಪರಿಣಾಮ ಕೇವಲ ₹ 210ಕ್ಕೆ ಲಸಿಕೆ ದೊರೆಯುತ್ತಿದೆ. ಇದರಲ್ಲಿ ಜಿಎಸ್‌ಟಿ ಕೂಡ ಸೇರಿದೆ.

ವಿಶ್ವದಲ್ಲಿಯೇ ಅಗ್ಗದ ದರದಲ್ಲಿ ಪೂರೈಕೆ ಮಾಡಿದ ಲಸಿಕೆ ಇದಾಗಿದೆ. ಇನ್ನೂ ನಾಲ್ಕು ಕಂಪನಿಗಳು ಲಸಿಕೆ ತಯಾರಿಸುತ್ತಿವೆ. ಅದು ಬಂದ ಬಳಿಕ ಹೆಚ್ಚು ಜನರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತದೆ’ ಎಂದು ಡಾ.ಕೆ ಸುಧಾಕರ್ ತಿಳಿಸಿದರು.

‘ಲಸಿಕೆಗಳನ್ನು ಸುರಕ್ಷಿತವಾಗಿ ತಂದು, ದಾಸ್ತಾನು ಮಾಡುವ ಅನುಭವ ನಮ್ಮ ಸಿಬ್ಬಂದಿಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯಕ್ಷಮತೆ ಮೇಲೆ ಯಾರಿಗೂ ಅಪನಂಬಿಕೆ ಬೇಡ. ಎಲ್ಲ ಪ್ರಕ್ರಿಯೆಗಳು ನಿಯಮದಂತೆ ನಡೆಯುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.