ADVERTISEMENT

ಮತ್ತೊಮ್ಮೆ ಸಕ್ರಿಯ ರಾಜಕಾರಣಕ್ಕೆ ಅವಕಾಶ ದೊರೆತಿದೆ: ಸಿ.ಪಿ. ಯೋಗೇಶ್ವರ್‌

ಚನ್ನಪಟ್ಟಣದ ಮುಖಂಡನಿಗೆ ಅವಕಾಶ ನೀಡಿದ ಬಿಜೆಪಿ ಹೈಕಮಾಂಡ್

ಆರ್.ಜಿತೇಂದ್ರ
Published 22 ಜುಲೈ 2020, 13:33 IST
Last Updated 22 ಜುಲೈ 2020, 13:33 IST
ಸಿ.ಪಿ. ಯೋಗೇಶ್ವರ್‌
ಸಿ.ಪಿ. ಯೋಗೇಶ್ವರ್‌   

ರಾಮನಗರ: ಜಿಲ್ಲೆಯ ಪ್ರಭಾವಿ ರಾಜಕೀಯ ಮುಖಂಡರಲ್ಲಿ ಒಬ್ಬರಾದ ಸಿ.ಪಿ. ಯೋಗೇಶ್ವರ್‌ಗೆ ಕಡೆಗೂ ವಿಧಾನ ಪರಿಷತ್‌ ಸದಸ್ಯತ್ವ ಒದಗಿ ಬಂದಿದೆ. ಈ ಮೂಲಕ ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರಿಗೆ ಅವಕಾಶ ದೊರೆತಂತೆ ಆಗಿದೆ.

ಜೆಡಿಎಸ್‌-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಯೋಗೇಶ್ವರ್‌ ಪ್ರಮುಖ ಪಾತ್ರ ವಹಿಸಿದ್ದರು. ಈ ಕಾರಣಕ್ಕೆ ಅವರಿಗೆ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ ಎರಡು ಬಾರಿ ಕಡೆಯ ಗಳಿಗೆಯಲ್ಲಿ ಅವರು ಅವಕಾಶಗಳಿಂದ ವಂಚಿತ ಆಗಿದ್ದರು. ಈ ಬಾರಿ ಸಚಿವ ಸ್ಥಾನ ಅಲ್ಲದಿದ್ದರೂ ನಾಮನಿರ್ದೇಶನದ ಮೂಲಕ ಪರಿಷತ್ ಸ್ಥಾನ ಖಾತ್ರಿಯಾಗಿದೆ.

ಜಿಲ್ಲೆಯವರೇ ಆದ ಡಿ.ಕೆ. ಶಿವಕುಮಾರ್‍ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಮತ್ತೊಂದೆಡೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣವನ್ನು ಪ್ರತಿನಿಧಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಜಿಲ್ಲೆಯಲ್ಲಿ ಬಿಜೆಪಿಗೆ ಒಂದು ರಾಜಕೀಯ ಪ್ರಾತಿನಿಧ್ಯ ಬೇಕಿತ್ತು. ಸಿಪಿವೈ ಆಯ್ಕೆ ಮೂಲಕ ಅದು ಈಡೇರಿದೆ. ಇದರಿಂದ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ಅನುಕೂಲ ಆಗಲಿದೆ ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.

ಹಲವು ಬಾರಿ ನಿರಾಸೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಎದುರು ಚನ್ನಪಟ್ಟಣದಲ್ಲಿ ಯೋಗೇಶ್ವರ್‌ ಪರಾಭವಗೊಂಡಿದ್ದರು. ನಂತರ ಕೆಲವು ತಿಂಗಳು ರಾಜಕೀಯ ಅಜ್ಞಾತವಾಸ ಅನುಭವಿಸಿದ್ದ ಅವರು ಹುಣಸೂರು ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ವಿಶ್ವನಾಥ್ ಕಣಕ್ಕಿಳಿಯುವುದು ಖಾತ್ರಿಯಾದ ಕಾರಣ ಆ ಪ್ರಯತ್ನದಿಂದ ಹಿಂದೆ ಸರಿದಿದ್ದರು.

ಇದಾದ ನಂತರ ಅವರನ್ನು ವಿಧಾನ ಪರಿಷತ್‍ಗೆ ಆಯ್ಕೆಮಾಡಿ ಸಚಿವರನ್ನಾಗಿ ಮಾಡಲಾಗುತ್ತದೆ ಎನ್ನಲಾಗಿತ್ತು. ಸಂಪುಟ ವಿಸ್ತರಣೆ ವೇಳೆ ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕೇಬಿಟ್ಟಿತು ಎಂದು ಅವರ ಬೆಂಬಲಿಗರು ಚನ್ನಪಟ್ಟಣದ ತುಂಬೆಲ್ಲ ಫ್ಲೆಕ್ಸ್‌ಗಳನ್ನು ಹಾಕಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅಂತಿಮ ಹಂತದಲ್ಲಿ ಅವರಿಗೆ ಮಂತ್ರಿ ಸ್ಥಾನ ಕೈ ತಪ್ಪಿತ್ತು. ಇದರಿಂದಾಗಿ ತೀವ್ರವಾಗಿ ಬೇಸರಗೊಂಡಿದ್ದ ಯೋಗೇಶ್ವರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.

ಚನ್ನಪಟ್ಟಣದಲ್ಲಿ ಕಾರ್ಯಕರ್ತರ ಸಂಭ್ರಮ
ಸಿಪಿವೈ ಪರಿಷತ್‌ಗೆ ನಾಮನಿರ್ದೇಶನಗೊಂಡಿರುವುದು ಖಾತ್ರಿಯಾಗುತ್ತಿದ್ದಂತೆ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಸಮಾವೇಶಗೊಂಡ ಕಾರ್ಯಕರ್ತರು, ಸಿಪಿವೈ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪ್ರಧಾನಿ ಮೋದಿ, ಅಮಿತ್‌ ಶಾ, ಜೆ.ಪಿ. ನಡ್ಡಾ, ಬಿ.ಎಸ್. ಯಡಿಯೂರಪ್ಪ, ನಳಿನ್‌ಕುಮಾರ್‍ ಕಟೀಲ್‌ ಪರವಾಗಿ ಘೋಷಣೆ ಕೂಗಿದರು.

‘ಜಿಲ್ಲೆಯಲ್ಲಿ ಡಿಕೆಶಿ, ಎಚ್‌ಡಿಕೆಗೆ ಸರಿಸಮನಾಗಿ ಯೋಗೇಶ್ವರ್‌ ಬೆಳೆಯುತ್ತಿದ್ದಾರೆ. ಅವರಿಗೆ ಈ ಅವಕಾಶ ಸಿಕ್ಕಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನವನ್ನೂ ನೀಡಬೇಕು’ ಎಂದು ಚನ್ನಪಟ್ಟಣದ ಬಿಜೆಪಿ ಮುಖಂಡರು ಆಗ್ರಹಿಸಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಜಯರಾಮು, ನಗರ ಘಟಕದ ಅಧ್ಯಕ್ಷ ಶಿವಕುಮಾರ್‍, ಮುಖಂಡರಾದ ಆನಂದಸ್ವಾಮಿ, ವಿಷಕಂಠಯ್ಯ ಮೊದಲಾದವರು ಇದ್ದರು.

ಸಿಗುತ್ತ ಸಚಿವ ಸ್ಥಾನ?
ರಾಜ್ಯ ಬಿಜೆಪಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಬೇಕೆಂದು ಆರಂಭದ ದಿನಗಳಿಂದಲೂ ಸಿಪಿವೈ ಪ್ರಯತ್ನಿಸುತ್ತಲೇ ಬಂದಿದ್ದಾರೆ. ಅದಕ್ಕಾಗಿ ಗಣವೇಷಧಾರಿಯಾಗಿ ಆರ್‌ಎಸ್‌ಎಸ್ ಮುಖಂಡರ ಒಲವು ಗಳಿಸುವಂತಹ ಪ್ರಯತ್ನಗಳನ್ನೂ ಅವರು ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಸೇರಿದಂತೆ ಹಲವರು ಸಹ ಬಹಿರಂಗವಾಗಿ ಸಿಪಿವೈ ಪರ ಹೇಳಿಕೆಯನ್ನು ಸಹ ನೀಡಿದ್ದರು. ಪರಿಷತ್‌ಗೆ ನಾಮಕರಣ ಸಚಿವ ಸ್ಥಾನದ ಮೊದಲ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕೇ ಸಿಗಲಿದೆ ಎನ್ನುವ ಆಶಾವಾದದಲ್ಲಿ ಯೋಗೇಶ್ವರ್‌ ಇದ್ದಾರೆ.

ಜನರ ಸೇವೆಗೆ ಅವಕಾಶ: ಸಿಪಿವೈ
‘ನಾವು ಜನರ ಮಧ್ಯೆ ಇರುವವರು. ಮತ್ತೆ ಜನಸೇವೆಗೆ ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ನಾಯಕರಿಗೆ ಧನ್ಯವಾದ’ ಎಂದು ಸಿ.ಪಿ. ಯೋಗೇಶ್ವರ್‌ ಹೇಳಿದರು.

ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು ‘ಮತ್ತೊಮ್ಮೆ ಸಕ್ರಿಯ ರಾಜಕಾರಣಕ್ಕೆ ಅವಕಾಶ ದೊರೆತಿದೆ. ಇದಕ್ಕಾಗಿ ಸರ್ಕಾರ, ಪಕ್ಷದ ಹೈಕಮಾಂಡ್‌ ಹಾಗೂ ಎಂಎಲ್‌ಸಿ ಆಗಲಿ ಎಂದು ಬಯಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.