ADVERTISEMENT

ರಾಜ್ಯದ ಆರು ನಗರಗಳಲ್ಲಿ ಹೆಲಿ ಟೂರಿಸಂ ಆರಂಭ: ಸಚಿವ ಸಿ.‍‍ಪಿ. ಯೋಗೇಶ್ವರ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 22:16 IST
Last Updated 9 ಏಪ್ರಿಲ್ 2021, 22:16 IST
ಯೋಗೇಶ್ವರ್‌
ಯೋಗೇಶ್ವರ್‌   

ಬೆಂಗಳೂರು: ಪ್ರವಾಸೋದ್ಯಮ ಉತ್ತೇಜಿಸುವ ಉದ್ದೇಶದಿಂದ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಮೊದಲ ಹಂತದಲ್ಲಿ ಆರು ಪ್ರಮುಖ ನಗರಗಳಲ್ಲಿ ಹೆಲಿ ಟೂರಿಸಂ ಆರಂಭಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.‍‍ಪಿ. ಯೋಗೇಶ್ವರ್‌ ಹೇಳಿದರು.

ಹೆಲಿ ಟೂರಿಸಂ ಆರಂಭಿಸುವ ಕುರಿತಂತೆ ಶುಕ್ರವಾರ ಸಭೆ ನಡೆಸಿದ ಅವರು, ಅಧಿಕಾರಿಗಳು ಹಾಗೂ ಕಂಪನಿ ಮುಖ್ಯಸ್ಥರ ಜತೆ ಚರ್ಚೆ ನಡೆಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಫ್ಲೈ ಬ್ಲೇಡ್‍ (Fly Blade), ಚಿಪ್ಸನ್‍ (Chipsan) ಮತ್ತು ಥಂಬಿ (Thumby) ಕಂಪನಿಗಳ ಪ್ರತಿನಿಧಿಗಳು ಪ್ರವಾಸಿಗರಿಗೆ ಹೆಲಿಟೂರಿಸಂ ವ್ಯವಸ್ಥೆ ಕುರಿತ ಪ್ರಾತ್ಯಕ್ಷಿಕೆಯನ್ನು ನೀಡಿದರು.

ADVERTISEMENT

ಸಭೆಯಲ್ಲಿ ಮಾತನಾಡಿದ ಯೋಗೇಶ್ವರ್‌, ರಾಜ್ಯದಲ್ಲಿ ಬಳಕೆಯಲ್ಲಿರುವ ಹೆಲಿಪ್ಯಾಡ್‍ ಹಾಗೂ ವಿಮಾನ ನಿಲ್ದಾಣಗಳನ್ನು ಬಳಸಿಕೊಂಡು ಹೆಲಿಟೂರಿಸಂ ಆರಂಭಿಸಲಾಗುವುದು. ಪ್ರಯಾಣಿಕರ ಅನುಕೂಲಕ್ಕಾಗಿಹೆಲಿಪ್ಯಾಡ್‍ಗಳಲ್ಲಿ ಅಗತ್ಯವಾದ ಲಾಂಜ್‍ಗಳನ್ನು ಸರ್ಕಾರವೇ ನಿರ್ಮಿಸಿಕೊಡಲಿದೆ. ಬೇಡಿಕೆ ಇರುವ ಸ್ಥಳಗಳಲ್ಲಿ ತ್ವರಿತವಾಗಿ ಹೆಲಿಪ್ಯಾಡ್‍ಗಳನ್ನು ನಿರ್ಮಿಸಿ ಅಗತ್ಯ ಅನುಮತಿಗಳನ್ನು ದೊರಕಿಸಿಕೊಡುವುದಾಗಿ ಹೇಳಿದರು.

ಮೊದಲ ಹಂತದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ, ಹುಬ್ಬಳ್ಳಿ ಮತ್ತು ಕಲಬುರ್ಗಿ ಗಳಲ್ಲಿ ಹೆಲಿಟೂರಿಸಂ ಆರಂಭಿಸುವಂತೆ ಸಚಿವರು ನಿರ್ದೇಶನ ನೀಡಿದರು. ಇದಕ್ಕೆ ಸ್ಪಂದಿಸಿದ ಹೆಲಿಟೂರಿಸಂ ಕಂಪನಿಗಳು, ರಾಜ್ಯ ಸರ್ಕಾರವು ಪ್ರವಾಸಿ ಮಾರ್ಗಗಳನ್ನು ನಿಗದಿಪಡಿಸಿದ ತಕ್ಷಣ ಪ್ರವಾಸಿಗರಿಗೆ ಸೇವೆ ಒದಗಿಸಲು ಸಿದ್ಧವಿರುವುದಾಗಿ ಕಂಪೆನಿಗಳ ಪ್ರತಿನಿಧಿಗಳು ತಿಳಿಸಿದರು.

ಕಾರವಾನ್‍ ಸೌಲಭ್ಯ: ರಾಜ್ಯದಲ್ಲಿರುವ ಎಲ್ಲಾ ವಿಮಾನ ನಿಲ್ದಾಣಗಳು ಹಾಗೂ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಗೆ ಕಾರವಾನ್‍ ಸೌಲಭ್ಯವನ್ನು ಒದಗಿಸಲು ಸಹ ಸಭೆ ತೀರ್ಮಾನಿಸಿತು.

ಮಂಜುನಾಥ ಅಟೊ ಮೊಬೈಲ್ಸ್ ಪ್ರೈ.ಲಿ ಸಂಸ್ಥೆ ಹಾಗೂ ಲಕ್ಸೀ ಕ್ಯಾಂಪೇನ್‍ ಸಂಸ್ಥೆಗಳು ಕಾರವಾನ್‍ ಪ್ರವಾಸದ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.