ADVERTISEMENT

ಲಾಕ್‌ಡೌನ್‌ ನಡುವೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸಿಪಿಐ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 16:04 IST
Last Updated 28 ಏಪ್ರಿಲ್ 2020, 16:04 IST
   

ಹಾವೇರಿ: ಲಾಕ್‌ಡೌನ್‌ ಜಾರಿಯಲ್ಲಿದ್ದರೂ ರಾಣೆಬೆನ್ನೂರು ಗ್ರಾಮೀಣ ಸಿಪಿಐ ಸುರೇಶ ಸಗರಿ ಅವರು ಅಭಿಮಾನಿಗಳ ಮಧ್ಯೆ ಕೇಕ್‌ ಕತ್ತರಿಸಿ, ತಮ್ಮ ಜನ್ಮದಿನ ಆಚರಿಸಿಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಾಣೆಬೆನ್ನೂರು ತಾಲ್ಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಮಾರ್ಚ್‌ 22ರಂದು ಸುರೇಶ ಸಗರಿ ನೇತೃತ್ವದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಪಥಸಂಚಲನ ಏರ್ಪಡಿಸಲಾಗಿತ್ತು. ಗ್ರಾಮಸ್ಥರು ಕೂಡ ಹೂ ಮಳೆ ಸುರಿದು ಅದ್ಧೂರಿಯಾಗಿ ಸ್ವಾಗತಿಸಿದ್ದರು.

ನಂತರ ಅವರ ಅಭಿಮಾನಿಗಳಿಂದ ಗ್ರಾಮ ಪಂಚಾಯ್ತಿ ಎದುರು ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ನೂರಾರು ಅಭಿಮಾನಿಗಳು ಗುಂಪುಗೂಡಿ ಜನ್ಮದಿನ ಆಚರಿಸಿದ್ದರು. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ADVERTISEMENT

ಕಾನೂನು ಪಾಲಿಸಬೇಕಾದ ಪೊಲೀಸ್ ಅಧಿಕಾರಿಯೇ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ್ದಾರೆ ಎಂದು ಗ್ರಾಮಸ್ಥರು ದಾವಣಗೆರೆ ಪೂರ್ವ ವಲಯ ಐಜಿಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘ರೂಟ್‌ ಮಾರ್ಚ್‌ ನಡೆದ ದಿನದಂದೇ ಸುರೇಶ ಸಗರಿ ಅವರ ಜನ್ಮದಿನಾಚರಣೆ ಇತ್ತು. ಅಭಿಮಾನಿಗಳು ಏಕಾಏಕಿ ಕೇಕ್‌ ತಂದು ಕತ್ತರಿಸಿ ಆಚರಣೆಗೆ ಒತ್ತಾಯಿಸಿದ್ದಾರೆ. ಸುರೇಶ್‌ ಒಪ್ಪದಿದ್ದರೂ ಅಭಿಮಾನಿಗಳು ಬಿಟ್ಟಿಲ್ಲ’ ಎಂದು ಡಿವೈಎಸ್ಪಿ ಟಿ.ವಿ.ಸುರೇಶ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.