ADVERTISEMENT

₹ 90 ಲಕ್ಷ ಮೌಲ್ಯದ ಅಡಿಕೆ ವಶ

ಅಂತರರಾಜ್ಯ ದರೋಡೆಕೋರರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 11:46 IST
Last Updated 23 ಫೆಬ್ರುವರಿ 2021, 11:46 IST
ದರೋಡೆಕೋರರಿಂದ ವಶಕ್ಕೆ ಪಡೆದ ಅಡಿಕೆ
ದರೋಡೆಕೋರರಿಂದ ವಶಕ್ಕೆ ಪಡೆದ ಅಡಿಕೆ   

ಚಿತ್ರದುರ್ಗ: ತಾಲ್ಲೂಕಿನ ಭೀಮಸಮುದ್ರ ಗ್ರಾಮದಿಂದ ದೆಹಲಿಗೆ ತೆರಳುತ್ತಿದ್ದ ಅಡಿಕೆ ತುಂಬಿದ ಲಾರಿಯನ್ನು ಅಪಹರಿಸಿದ್ದ ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿದ ಪೊಲೀಸರು, ₹ 90 ಲಕ್ಷ ಮೌಲ್ಯದ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬಿಲ್ಲಹಳ್ಳಿಯ ರಿಜ್ವಾನ್, ಢಣಾಯಕಪುರ ಗ್ರಾಮದ ಲಿಂಗರಾಜು, ದಾವಣಗೆರೆ ಜಿಲ್ಲೆಯ ಕೆರೆಬಿಳಚಿ ಗ್ರಾಮದ ಸಲ್ಮಾನ್ ಬಂಧಿತರು. ಪ್ರಕರಣದ ಪ್ರಮುಖ ರೂವಾರಿ ಅಶ್ರಫ್‌ ಅಲಿ ಸೇರಿ ಇನ್ನೂ 9 ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಭೀಮಸಮುದ್ರದ ಶ್ರೀರಂಗನಾಥ ಟ್ರೆಡರ್ಸ್‌ಗೆ ಸೇರಿದ 340 ಅಡಿಕೆ ಚೀಲಗಳನ್ನು ತುಂಬಿದ ಲಾರಿ ಜ.5ರಂದು ದೆಹಲಿಯತ್ತ ಹೊರಟಿತ್ತು. ಲಾರಿಯನ್ನು ಹಿಂಬಾಲಿಸಿದ 12 ಆರೋಪಿಗಳ ತಂಡ, ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಗಟ್ಟಿದ್ದರು. ಚಾಲಕ ಭೂಪ್‌ಸಿಂಗ್ ಯಾದವ್ ಕಣ್ಣಿಗೆ ಖಾರದಪುಡಿ ಎರಚಿ ಹಲ್ಲೆ ನಡೆಸಿ ಲಾರಿ ಸಹಿತ ಅಪಹರಿಸಿದ್ದರು.

ADVERTISEMENT

ಲಾರಿ ಚಾಲಕನನ್ನು ಹುಬ್ಬಳ್ಳಿಯ ತಡಸಾ ತಿರುವು ಬಳಿ ಬಿಟ್ಟು ಪರಾರಿಯಾಗಿದ್ದರು. ಟ್ರೇಡರ್ಸ್‌ ಮಾಲೀಕರು ನೀಡಿದ ದೂರಿನ ಆಧಾರದ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್‌ ಬಳಿ ಲಾರಿ ಪತ್ತೆಯಾಗಿತ್ತು. ತಿಂಗಳು ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಕಳುವಾಗಿದ್ದ ಅಡಿಕೆಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.