ADVERTISEMENT

ಕಳ್ಳತನವಾದ ಮೊಬೈಲ್‌ ಪತ್ತೆ: 2ನೇ ಸ್ಥಾನಕ್ಕೆ ಕುಸಿದ ರಾಜ್ಯ

ರಾಜ್ಯದಲ್ಲಿ ಹೆಚ್ಚಿದ ಮೊಬೈಲ್‌ ಕಳ್ಳತನ ಪ್ರಕರಣಗಳು

ಆದಿತ್ಯ ಕೆ.ಎ
Published 5 ಜೂನ್ 2025, 0:00 IST
Last Updated 5 ಜೂನ್ 2025, 0:00 IST
ಕಳ್ಳರಿಂದ ಜಪ್ತಿ ಮಾಡಿಕೊಂಡ ಮೊಬೈಲ್‌
ಕಳ್ಳರಿಂದ ಜಪ್ತಿ ಮಾಡಿಕೊಂಡ ಮೊಬೈಲ್‌   

ಬೆಂಗಳೂರು: ನಿರ್ಲಕ್ಷ್ಯದಿಂದ ಕಳೆದುಹೋದ ಹಾಗೂ ಕಳ್ಳತನವಾದ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡುವಲ್ಲಿ ಕಳೆದ ಮೂರು ವರ್ಷಗಳಿಂದ ಮುಂಚೂಣಿಯಲ್ಲಿದ್ದ ಕರ್ನಾಟಕ ಈ ವರ್ಷ ತುಸು ಹಿಂದೆ ಬಿದ್ದಿದೆ. ಮೊಬೈಲ್ ಪತ್ತೆಹಚ್ಚಿ ದೂರುದಾರರಿಗೆ ಒಪ್ಪಿಸುವ ಪ್ರಕ್ರಿಯೆಯಲ್ಲಿ ತೆಲಂಗಾಣ ಮೊದಲ ಸ್ಥಾನಕ್ಕೇರಿದೆ. ರಾಜ್ಯ ಎರಡನೇ ಸ್ಥಾನದಲ್ಲಿದೆ.

ಮೊಬೈಲ್ ಕಳ್ಳರ ತಂಡಗಳು ರಾಜ್ಯದಲ್ಲಿ ಮತ್ತೆ ಸಕ್ರಿಯವಾಗಿವೆ. ಬಸ್ ಹಾಗೂ ರೈಲು ಹತ್ತುವಾಗ, ಬಸ್ ನಿಲ್ದಾಣ, ಜಾತ್ರೆ ಹಾಗೂ ಜನದಟ್ಟಣೆ ಪ್ರದೇಶದಲ್ಲಿ ಮೊಬೈಲ್ ಕದ್ದು ಕಳ್ಳರು ಪರಾರಿ ಆಗುತ್ತಿದ್ದಾರೆ. ಬೆಂಗಳೂರು ಸೇರಿ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿವೆ.

ಕಳ್ಳತನವಾದ ಮೊಬೈಲ್‌ಗಳ‌ ಮಾಹಿತಿಯನ್ನು ಇ–ಲಾಸ್ಟ್ ಆ್ಯಪ್ ಮತ್ತು ಕೇಂದ್ರ‌ ಸರ್ಕಾರ ರೂಪಿಸಿರುವ ಸೆಂಟ್ರಲ್‌ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್‌ (ಸಿಇಐಆರ್‌) ಜಾಲತಾಣದಲ್ಲಿ ದಾಖಲು ಮಾಡಲಾಗುತ್ತದೆ. ತಾಂತ್ರಿಕ ಸುಳಿವು ಆಧರಿಸಿ, ಪೊಲೀಸರು ತನಿಖೆ ನಡೆಸಿ ಮೊಬೈಲ್ ಪತ್ತೆ ಹಚ್ಚುತ್ತಾರೆ.

ADVERTISEMENT

ದೇಶದಲ್ಲಿ ಸಿಇಐಆರ್ ಅನ್ನು 2022ರ ಮೇ 17ರಂದು ಆರಂಭಿಸಲಾಗಿತ್ತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ನಂತರ, ಇತರೆ ಸ್ಥಳಗಳಲ್ಲೂ ಜಾರಿಗೆ ತರಲಾಗಿತ್ತು. ಆರಂಭಿಕ ಹಂತದಲ್ಲಿ ಕಳ್ಳರಿಂದ 10,579 ಮೊಬೈಲ್‌ ಜಪ್ತಿ ಮಾಡಿಕೊಳ್ಳುವಲ್ಲಿ ರಾಜ್ಯದ ಪೊಲೀಸರು ಯಶಸ್ವಿ ಆಗಿದ್ದರು. 2024ರ ಜೂನ್‌ ವೇಳೆಗೆ ಪೊಲೀಸರು 41,400 ಮೊಬೈಲ್‌ ಜಪ್ತಿ ಮಾಡಿದ್ದರು. ದೇಶದಲ್ಲೇ ರಾಜ್ಯ ಪ್ರಥಮ ಸ್ಥಾನದಲ್ಲಿತ್ತು. ಈ ವರ್ಷ ಮೊಬೈಲ್‌ ಜಪ್ತಿ ಕಾರ್ಯಾಚರಣೆಯಲ್ಲಿ ತೆಲಂಗಾಣ ರಾಜ್ಯ ಮುಂಚೂಣಿಯಲ್ಲಿ ಇದೆ.

ರಾಜ್ಯದಲ್ಲಿ ಇದುವರೆಗೂ (ಜೂನ್ 4ರ ವರೆಗೆ) ಕಳ್ಳತನವಾದ 3,85,930 ಮೊಬೈಲ್‌ಗಳನ್ನು ಬ್ಲಾಕ್ (ನಿಷ್ಕ್ರಿಯ) ಮಾಡಲಾಗಿದೆ‌. 2,08,567 ಮೊಬೈಲ್ ಪತ್ತೆಹಚ್ಚಿ, ಆರೋಪಿಗಳಿಂದ 79,664 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಮೊಬೈಲ್‌ ಕಳೆದುಹೋದ ತಕ್ಷಣ ಐಎಂಇಐ ಸಂಖ್ಯೆ ಸಹಿತ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ ಅಥವಾ ಇ–ಲಾಸ್ಟ್‌ ಪ್ರತಿಯನ್ನು ಸಿಇಐಆರ್‌ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಬೇಕು. ಆಗ ಕದ್ದ ಮೊಬೈಲ್‌ಗೆ ಹೊಸ ಸಿಮ್‌ ಹಾಕಿದಾಗ ಪೊಲೀಸರಿಗೆ ಸಂದೇಶ ಬರಲಿದೆ. ಅದನ್ನು ಆಧರಿಸಿ ತನಿಖೆ ಆರಂಭವಾಗಲಿದೆ. ಜತೆಗೆ ಈ ತಂತ್ರಾಂಶದಲ್ಲಿ, ಕಳುವಾದ ಮೊಬೈಲ್‌ಗಳನ್ನು ಐಎಂಇಐ ಸಂಖ್ಯೆ ಮೂಲಕ ಪತ್ತೆ ಮಾಡುವ, ಮೊಬೈಲ್‌ಗಳನ್ನು ಮತ್ತೊಬ್ಬರು ಬಳಸದಂತೆ ನಿಷ್ಕ್ರಿಯಗೊಳಿಸುವ ಅವಕಾಶವೂ ಇದೆ ಎಂದು ಪೊಲೀಸರು ಹೇಳಿದರು.

‘ರಾಜ್ಯದ ವಿವಿಧೆಡೆ ಕಳ್ಳತನವಾದ ಮೊಬೈಲ್‌ಗಳು ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಆಂಧ್ರಪ್ರದೇಶದಲ್ಲಿ ಹೆಚ್ಚು ಪತ್ತೆ ಆಗುತ್ತಿವೆ. ಮೊಬೈಲ್‌ ಕಳ್ಳತನ ಪ್ರಕರಣಗಳಲ್ಲಿ ದೆಹಲಿಯಲ್ಲಿ ಹೆಚ್ಚು ನಡೆಯುತ್ತಿವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ದೆಹಲಿಯಲ್ಲಿ ಇದುವರೆಗೂ 7,82,243 ಮೊಬೈಲ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. 9,177 ಮೊಬೈಲ್‌ಗಳನ್ನಷ್ಟೇ ದೂರುದಾರರಿಗೆ ವಾಪಸ್‌ ಮಾಡಲು ಅಲ್ಲಿನ ಪೊಲೀಸರಿಗೆ ಸಾಧ್ಯವಾಗಿದೆ. ಅರುಣಾಚಲ ಪ್ರದೇಶ, ಗೋವಾ, ಚಂಡೀಗಢ, ನಾಗಾಲ್ಯಾಂಡ್‌, ತ್ರಿಪುರಾದಲ್ಲಿ ಮೊಬೈಲ್‌ ಕಳ್ಳತನ ಪ್ರಕರಣಗಳು ಹೆಚ್ಚು ವರದಿಯಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.

ಕಳವಾದ ಮೊಬೈಲ್‌ಗಳನ್ನು ಸಾರ್ವಜನಿಕರು ಬ್ಲಾಕ್‌ ಮಾಡಿಸಿ ಮೊಬೈಲ್‌ ಗುರುತಿನ ಗೋಪ್ಯತೆ ಕಾಪಾಡಿಕೊಳ್ಳಬೇಕು. ಅನುಮಾನಾಸ್ಪದ ಕರೆಗಳು ಬಂದರೆ ಸಂಚಾರ ಸಾಥಿಗೆ ಮಾಹಿತಿ ನೀಡಬೇಕು
-ಬಿ.ದಯಾನಂದ, ನಗರ ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.