ADVERTISEMENT

ಅಪರಾಧಿಗಳ ಸ್ವರ್ಗವಾಗುವತ್ತ ರಾಜ್ಯ: ವಿರೋಧ ಪಕ್ಷಗಳ ಸದಸ್ಯರು ತೀವ್ರ ಕಳವಳ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 14:46 IST
Last Updated 2 ಫೆಬ್ರುವರಿ 2026, 14:46 IST
   

ಬೆಂಗಳೂರು: ‘ರಾಜ್ಯವು ಅಪರಾಧಿಗಳ ಸ್ವರ್ಗವಾಗುತ್ತಿದೆ. ಪೊಲೀಸರಿಗೆ ನಿಯಂತ್ರಣವೇ ಇಲ್ಲದಂತಾಗಿದೆ’ ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷಗಳ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಸೋಮವಾರದ ಕಲಾಪದ ವೇಳೆ ಚರ್ಚೆ ಮುಂದುವರೆಸಲಾಯಿತು. ರಾಜ್ಯಪಾಲರ ಭಾಷಣದಲ್ಲಿ ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಂಡಿದ್ದೇವೆ’ ಎಂಬ ಅಂಶಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ಎತ್ತಿದರು.

ಕೆ.ಎಸ್‌.ನವೀನ್‌, ‘ನಮ್ಮ ರಾಜ್ಯವು ಈ ಹಿಂದೆ ಬೇರೆ–ಬೇರೆ ವಿಚಾರಗಳಲ್ಲಿ ಮೊದಲ ಸ್ಥಾನದಲ್ಲಿತ್ತು. ಈ ಸರ್ಕಾರ ಬಂದ ಮೇಲೆ ಮಾದಕ ವಸ್ತುಗಳ ರಾಜಧಾನಿ ಆಗುತ್ತಿದೆ. ಸರ್ಕಾರಕ್ಕೆ, ಪೊಲೀಸರಿಗೆ ನಿಯಂತ್ರಣವೇ ಇಲ್ಲದಂತಾಗಿದೆ. ಕಾಂಗ್ರೆಸ್‌ನದ್ದು ಭಸ್ಮಾಸುರ ಕೈ ಆಗಿದ್ದು, ರಾಜ್ಯವನ್ನು ನಾಶಮಾಡಿಯೇ ಕಾಂಗ್ರೆಸ್‌ ಅಧಿಕಾರದಿಂದ ಕೆಳಗಿಳಿಯುವುದು’ ಎಂದು ಹೇಳುತ್ತಾ ರಾಜ್ಯಪಾಲರ ಭಾಷಣವನ್ನು ಖಂಡಿಸಿದರು.

ADVERTISEMENT

‘ರಾಜ್ಯದಲ್ಲಿ ಕೊಲೆ ಎಂಬುದು ಸಾಮಾನ್ಯ ಎಂಬುವಂತಾಗಿದೆ. ಬಳ್ಳಾರಿಯಲ್ಲಿ ಶಾಸಕರ ಖಾಸಗಿ ಅಂಗವಿಕಲರೇ ಅಮಾಯಕನೊಬ್ಬನನ್ನು ಕೊಂದಿದ್ದಾರೆ. ಬೇರೆಡೆಯೂ ಕೊಲೆಗಳು ನಡೆಯುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತಿ ಶೆಟ್ಟಿ, ‘ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆಯುತ್ತಲೇ ಇವೆ. ಮೈಸೂರಿನಲ್ಲಿ ಬಲೂನು ಮಾರುವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲಾಯಿತು. ಹಂಪಿಯಲ್ಲಿ ಪ್ರವಾಸಿಗರ ಮೇಲೆ ಅತ್ಯಾಚಾರ ನಡೆಯಿತು. ರಾಜ್ಯದ ಎಲ್ಲೆಡೆ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಜನ ಸಾಮಾನ್ಯರು ಓಡಾಡುವುದೇ ಕಷ್ಟವಾಗಿದೆ. ಹೀಗಿದ್ದೂ ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿದೆ ಎಂದು ಹೇಳಿಕೊಂಡಿದ್ದಾರೆ’ ಎಂದರು.

ಹೇಮಲತಾ ನಾಯಕ್‌, ‘ಉತ್ತರ ಕರ್ನಾಟಕದ ಹಲವೆಡೆ ನದಿ ಪಾತ್ರಗಳಿಂದ, ಜಲಾಶಯಗಳ ಹಿನ್ನೀರಿನ ಪ್ರದೇಶಗಳಿಂದ ಮರಳನ್ನು ಅಕ್ರಮವಾಗಿ ತೆಗೆಯಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೂ, ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಯುತ್ತಿದೆ, ಕೊಲೆ ಬೆದರಿಕೆ ಹಾಕಲಾಗುತ್ತಿದೆ. ರಾಜ್ಯದಲ್ಲಿ ಎಲ್ಲವೂ ಚೆನ್ನಾಗಿದೆ, ಎಲ್ಲರೂ ಸುಖವಾಗಿದ್ದಾರೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ’ ಎಂದು ತಮ್ಮ ಆಕ್ಷೇಪ ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.