ADVERTISEMENT

ಬೆಳೆ ಸಮೀಕ್ಷೆ ಆ್ಯಪ್‌: ಫ್ಲ್ಯಾಪ್‌

ರಾಜ್ಯದ 2.2 ಕೋಟಿ ಭೂ ಹಿಡುವಳಿಗಳ ಮಾಹಿತಿ ಸಂಗ್ರಹಿಸುವ ಉದ್ದೇಶ

ಮಂಜುನಾಥ್ ಹೆಬ್ಬಾರ್‌
Published 3 ಅಕ್ಟೋಬರ್ 2018, 20:00 IST
Last Updated 3 ಅಕ್ಟೋಬರ್ 2018, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ 2.2 ಕೋಟಿ ಭೂಹಿಡುವಳಿಗಳ ಬೆಳೆ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ರೂಪಿಸಿರುವ ‘ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌’ನಿಂದ ರೈತರಿಗೆ ನಯಾಪೈಸೆ ಅನುಕೂಲವಾಗಿಲ್ಲ. ಹೆಚ್ಚಿನ ಕಡೆಗಳಲ್ಲಿ ರೈತರ ಪಹಣಿಗಳಲ್ಲಿ (ಆರ್‌ಟಿಸಿ) ಬೆಳೆ ಮಾಹಿತಿಯೇ ಸೇರ್ಪಡೆಯಾಗಿಲ್ಲ.

‘ರೈತರ ಹೊಲಕ್ಕೇ ಆ್ಯಪ್‌’ ಅನ್ನು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 2017ರ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದ್ದರು. ‘ದೇಶದಲ್ಲೇ ಮೊದಲ ಬಾರಿಗೆ ಆ್ಯಪ್‌ ಬಳಸಿ ಬೆಳೆ ಸಮೀಕ್ಷೆ ಮಾಡಲಾಗುತ್ತಿದೆ’ ಎಂದೂ ಹೇಳಿಕೊಂಡಿದ್ದರು. ಈ ಆ್ಯಪ್‌ ಅನ್ನು ರಾಜ್ಯ ಸರ್ಕಾರದ ಇ–ಆಡಳಿತ ಇಲಾಖೆ ಅಭಿವೃದ್ಧಿಪಡಿಸಿದೆ.

ರಾಜ್ಯದಲ್ಲಿ ಸುಮಾರು 30–40 ವರ್ಷಗಳಿಂದ ಕೃಷಿ ಸಮೀಕ್ಷೆ ಕಾರ್ಯವೇ ನಡೆದಿರಲಿಲ್ಲ. ಅರ್ಧದಷ್ಟು ಪಹಣಿಗಳಲ್ಲಿ ಬೆಳೆಗಳ ಬಗ್ಗೆ ಮಾಹಿತಿಯೇ ಇರಲಿಲ್ಲ. ಅಂದಾಜಿನ ಪ್ರಕಾರವೇ ಬೆಳೆವಾರು ಮಾಹಿತಿ, ಉತ್ಪನ್ನ ಹಾಗೂ ಬೆಳೆನಷ್ಟವನ್ನು ಲೆಕ್ಕಹಾಕಲಾಗುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ಮೊಬೈಲ್ ತಂತ್ರಾಂಶ ಬಳಸಿ ಕೃಷಿ ಸಂಬಂಧಿ ದತ್ತಾಂಶ ಸಂಗ್ರಹ ಕಾರ್ಯವನ್ನು ಆರಂಭಿಸಲಾಗಿತ್ತು.

‘ಇದು ಅನುಷ್ಠಾನಯೋಗ್ಯವಾದ ಯೋಜನೆ ಅಲ್ಲ. ತಳಮಟ್ಟದ ಸಮಸ್ಯೆಯ ಅರಿವು ಇಲ್ಲದೇ ವಿಧಾನಸೌಧದಲ್ಲಿ ಕುಳಿತು ಯೋಜನೆ ರೂಪಿಸಿದರೆ ಇಂತಹ ಎಡವಟ್ಟುಗಳು ನಡೆಯುತ್ತವೆ’ ಎಂದು ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡ ಅನೇಕ ಅಧಿಕಾರಿಗಳು ದೂರಿದ್ದಾರೆ.

‘ಕಂದಾಯ ಇಲಾಖೆಯ ಸಹಮತಿ ಪಡೆಯದೇ ಈ ಯೋಜನೆ ಅನುಷ್ಠಾನ ಮಾಡಲು ಮುಂದಾಗಿದ್ದು ವೈಫಲ್ಯಕ್ಕೆ ಮತ್ತೊಂದು ಕಾರಣ. ಸಮೀಕ್ಷಾ ಕಾರ್ಯದಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದರಿಂದ ಕಂದಾಯ ಇಲಾಖೆಯ ಎಲ್ಲ ಕಾರ್ಯಗಳು ಸ್ಥಗಿತಗೊಂಡವು. ಬಳಿಕ ಇಲಾಖಾ ಪ್ರಧಾನ ಕಾರ್ಯದರ್ಶಿ ಅವರು ಸಮೀಕ್ಷೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದರು’ ಎಂದು ಹೇಳಿದರು.

‘ಗ್ರಾಮ ಲೆಕ್ಕಾಧಿಕಾರಿಗಳು ರೈತರ ಕೃಷಿ ಭೂಮಿಗೆ ತೆರಳಿ ಅಲ್ಲೇ ಮಾಹಿತಿ ಅಪ್‌ಲೋಡ್‌ ಮಾಡಬೇಕಿತ್ತು. ಅಗತ್ಯ ತಂತ್ರಜ್ಞಾನ ಇಲ್ಲದ ಸಾಮಾನ್ಯ ಮೊಬೈಲ್‌ಗಳನ್ನು ಅಧಿಕಾರಿಗಳಿಗೆ ನೀಡಲಾಗಿತ್ತು. ಹೀಗಾಗಿ, ಅಧಿಕಾರಿಗಳ ಸ್ಮಾರ್ಟ್‌ಫೋನ್‌ ಬಳಸಿ ಮಾಹಿತಿ ಕಲೆ ಹಾಕಲು ಸೂಚಿಸಲಾಗಿತ್ತು. ಕಂದಾಯ ಇಲಾಖೆಯ ಅಧಿಕಾರಿಗಳು ಎಲ್ಲ ಕೆಲಸ ಬದಿಗೆ ಇಟ್ಟು ಒಂದು ತಿಂಗಳು ಸಮೀಕ್ಷಾ ಕಾರ್ಯದಲ್ಲಿ ತಲ್ಲೀನರಾದರು. ಆದರೆ, ಫಲಿತಾಂಶ ಮಾತ್ರ ಶೂನ್ಯ’ ಎಂದು ಇನ್ನೊಬ್ಬ ಅಧಿಕಾರಿ ದೂರಿದರು.

ಮೊದಲು ಹೇಗಿತ್ತು ವ್ಯವಸ್ಥೆ: ಸಾಮಾನ್ಯವಾಗಿ ಬೆಳೆ ಕ್ಷೇತ್ರದ ಮೂಲ ಮಾಹಿತಿಯು ಗ್ರಾಮ ಲೆಕ್ಕಾಧಿಕಾರಿಗಳು ನೀಡುವ ಅಂಕಿ ಅಂಶಗಳನ್ನೇ ಅವಲಂಬಿಸಿರುತ್ತದೆ. ಆದರೆ, ಬಹಳಷ್ಟು ಪ್ರಕರಣಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ಕ್ಷೇತ್ರಕ್ಕೆ ಭೇಟಿ ನೀಡದೆಯೇ ಕಚೇರಿಯಲ್ಲಿ ಕುಳಿತು ಹಾನಿ ಅಂದಾಜು ಸಿದ್ಧಪಡಿಸುತ್ತಾರೆ. ಕೃಷಿ, ಕಂದಾಯ, ತೋಟಗಾರಿಗೆ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಬೇಕೆಂಬ ನಿರ್ದೇಶನ ಇದ್ದರೂ, ವಾಸ್ತವದಲ್ಲಿ ಇದು ಪಾಲನೆ ಆಗುತ್ತಿಲ್ಲ. ಬೆಳೆ ಕಟಾವು ಪ್ರಯೋಗದ ಆಧಾರದ ಮೇಲೆ ನಿರ್ಧರಿಸಲಾಗುವ ಇಳುವರಿ ಮಾಹಿತಿಯೂ ವಾಸ್ತವಾಂಶದಿಂದ ಕೂಡಿರುವುದಿಲ್ಲ. ಹೀಗಾಗಿ, ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸವಾಗುತ್ತಿದೆ. ಇದನ್ನು ತಪ್ಪಿಸಲು ಮತ್ತು ಕ್ಷೇತ್ರ ತಪಾಸಣೆ ನಡೆಸಿಯೇ ಬೆಳೆ ವಿವರ ದಾಖಲಿಸಲು ಈ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.

‘ವಿವಿಧ ಇಲಾಖೆಗಳ ಸಿಬ್ಬಂದಿ ರೈತರ ಜಮೀನುಗಳಿಗೆ ತೆರಳಿ, ಅಲ್ಲಿ ಬೆಳೆದಿರುವ ಬೆಳೆಗಳನ್ನು ನಮೂದಿಸಿಕೊಂಡು, ವಿಸ್ತೀರ್ಣ ದಾಖಲಿಸಿಕೊಳ್ಳಲಿದ್ದಾರೆ. ಅದನ್ನು ಆ್ಯಪ್‌ ಮೂಲಕ ಭೂಮಿ ತಂತ್ರಾಂಶಕ್ಕೆ ಸೇರಿಸಲಾಗುತ್ತದೆ. ಭೂಮಾಲೀಕರ ಆಧಾರ್ ಸಂಖ್ಯೆಯನ್ನೂ ಪಡೆಯಲಾಗುತ್ತದೆ. ಇದರಿಂದ ಮುಂದೆ ರೈತರ ಪಹಣಿಗಳಲ್ಲಿ ಅವರು ಬೆಳೆದಿರುವ ಬೆಳೆಯೇ ನಮೂದಾಗಲಿದೆ’ ಎಂದು ಕೃಷಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ ತಿಳಿಸಿದ್ದರು.

ಈ ವರ್ಷ ಸಮೀಕ್ಷೆಗೆ ₹25 ಕೋಟಿ

ಮೊಬೈಲ್‌ ಆ್ಯಪ್‌ ನೆರವಿನಿಂದ ಬೆಳೆ ಸಮೀಕ್ಷೆಗೆ ಈ ವರ್ಷ ₹25 ಕೋಟಿ ಮೀಸಲಿಡಲಾಗಿದೆ.

ಕಳೆದ ವರ್ಷ ಸಮೀಕ್ಷೆಗೆ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿತ್ತು. ಈ ಸಲ ಗ್ರಾಮದ ಪ್ರಮುಖರು ಹಾಗೂ ಯುವಕರ ಸಹಕಾರ ಪಡೆಯಲು ನಿರ್ಧರಿಸಲಾಗಿದೆ.

‘ಮೊಬೈಲ್‌ ಆ್ಯಪ್‌ ಸಮೀಕ್ಷೆಯಿಂದ ನಿಖರ ಮಾಹಿತಿ ಸಿಗಲಿದೆ. ಇಲ್ಲಿನ ಮಾಹಿತಿಯನ್ನು ಆರ್‌ಟಿಸಿಗೂ ಬಳಸಬಹುದು. ಫಸಲ್‌ ಬಿಮಾ ಯೋಜನೆ ಹಾಗೂ ಬೆಂಬಲ ಬೆಲೆ ಮಧ್ಯ ಪ್ರವೇಶ ಯೋಜನೆಯ ಅನುಷ್ಠಾನದ ವೇಳೆಯೂ ಬಳಸಿಕೊಳ್ಳಬಹುದು’ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಅಂಕಿ ಅಂಶಗಳು

* 2.20 ಕೋಟಿ – ರಾಜ್ಯದಲ್ಲಿರುವ ಹಿಡುವಳಿಗಳು

* 1.60 ಕೋಟಿ – ಕಳೆದ ವರ್ಷ ಸಮೀಕ್ಷೆ ನಡೆಸಿದ ಹಿಡುವಳಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.