ADVERTISEMENT

ಜನ ಕಷ್ಟದಲ್ಲಿದ್ದಾಗ ಕಾಂಗ್ರೆಸ್‌ ಸಂಭ್ರಮಿಸುವುದು ವಿಕೃತಿ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 11:45 IST
Last Updated 14 ಫೆಬ್ರುವರಿ 2026, 11:45 IST
<div class="paragraphs"><p>ಸಿ.ಟಿ.ರವಿ</p></div>

ಸಿ.ಟಿ.ರವಿ

   

ಮಂಗಳೂರು: ‘ರಾಜ್ಯ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದಕ್ಕಾಗಿ ಸಂಭ್ರಮ ಆಚರಿಸಿದೆ. ಈ ಸಂಭ್ರಮ ಏಕೆ ಎಂದು ಅರ್ಥವಾಗುತ್ತಿಲ್ಲ. ಆಡಳಿತದ ಬಗ್ಗೆ ಜನ ಸಂತೃಪ್ತರಾಗಿದ್ದರೆ, ಸರ್ಕಾರ ಸಂಭ್ರಮಿಸಬಹುದಿತ್ತು. ಆದರೆ, ಜನ ಕಷ್ಟದಲ್ಲಿರುವಾಗ ಕಾಂಗ್ರೆಸ್‌ನವರು ಸಂಭ್ರಮಿಸುತ್ತಿರುವುದು ವಿಕೃತಿ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಭ್ರಷ್ಟಾಚಾರದಲ್ಲಿ ದಾಖಲೆ ಮಾಡಿದ್ದಕ್ಕೆ, ಗುತ್ತಿಗೆದಾರರಿಂದ ಶೇ 60ರಷ್ಟು ಕಮಿಷನ್‌ ಪಡೆದದ್ದಕ್ಕೆ , ವಿದ್ಯುತ್ ದರ ಏರಿಕೆಗೆ, ನೀರಿನ ಬಿಲ್‌ ಏರಿಕೆಗೆ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ, ಕಾಂಗ್ರೆಸ್‌ ಶಾಸಕರಾದ ನಾಗೇಂದ್ರ, ವೀರೇಂದ್ರ, ಸತೀಶ್ ಸೈಲ್‌ ಜೈಲಿಗೆ ಹೋಗಿದ್ದಕ್ಕೆ, ರೈತರ ಆತ್ಮಹತ್ಯೆಯಲ್ಲಿ ರಾಜ್ಯ ಎರಡನೇ ಸ್ಥಾನ ಪಡೆದಿದ್ದಕ್ಕೆ, ರಾಜ್ಯದಲ್ಲಿ ದರೋಡೆಗಳು ನಡೆಯುತ್ತಿರುವುದಕ್ಕೆ, ಡ್ರಗ್‌ ಮಾಫಿಯಾಕ್ಕೆ ಮುಕ್ತ ಅವಕಾಶ ನೀಡಿದ್ದಕ್ಕೆ ಈ ಸಂಭ್ರಮವೇ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಮುಡಾ ಹಗರಣ, ವಾಲ್ಮೀಕಿ ನಿಗಮ ಮತ್ತು ಬೋವಿ ನಿಗಮಗಳ ಹಗರಣ, ವಕ್ಫ್ ಮಂಡಳಿ ಹಗರಣ, ಮದ್ಯ ವರ್ತಕರಿಂದ‌ ಲಂಚ ಪಡೆದಿರುವುದು, 11 ಇಲಾಖೆಗಳಲ್ಲಿ ₹43 ಕೋಟಿ ದುರುಪಯೋಗ, ಕಸ ಬಳಿವ ಯಂತ್ರಕ್ಕೆ ₹ 617 ಕೋಟಿ ನೀಡಲು ಹೊರಟಿದ್ದು... ಇವೆಲ್ಲವೂ ಸರ್ಕಾರದ ಸಾವಿರ ದಿನಗಳ ಕಿರೀಟದ ಗರಿಗಳು’ ಎಂದರು.

‘ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಸರಬರಾಜು ಮಾಡುವ ಯೋಗ್ಯತೆಯೂ ಇಲ್ಲದ ಸ್ಥಿತಿಗೆ ಸರ್ಕಾರ ತಲುಪಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಹೂಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ನಿರೀಕ್ಷೆಗಿಂತ ₹16 ಸಾವಿರ ಕೋಟಿ ಆದಾಯ ಖೋತಾ ಆಗಿದೆ. ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದ ಬಳಿ ದುಡ್ಡಿಲ್ಲ. ಯಾವ ಆಯಾಮದಲ್ಲೂ ರಾಜ್ಯವು ಸಂಭ್ರಮ ಪಡುವ ಸ್ಥಿತಿ ಉಳಿದಿಲ್ಲ. ಆದರೂ ಶಾಸಕರ ಸಂಖ್ಯೆಗಿಂತಲೂ ಹೆಚ್ಚು ಮಂದಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲಾಗಿದೆ’ ಎಂದರು.

‘ಸರ್ಕಾರ ಗುತ್ತಿಗೆದಾರರಿಗೆ ₹37 ಸಾವಿರ ಕೋಟಿ ಬಿಲ್ ಬಾಕಿ ಇರಿಸಿಕೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯ ಅನುದಾನ ಬಿಡುಗಡೆ ಮಾಡಿಲ್ಲ. ಗೃಹಲಕ್ಷ್ಮೀ ಯೋಜನೆ ಹಣ ದುರುಪಯೋಗವಾಗಿದೆ. ಅಬಕಾರಿ ಪರವಾನಗಿ ನೀಡಲು ಎಷ್ಟು ಲಂಚ ನೀಡಬೇಕೆಂಬ ದರಪಟ್ಟಿಯೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ನಿವೇಶನ ಮರಳಿಸಿದ್ದಾರೆ. ಇವೆಲ್ಲವೂ ಸಂಭ್ರಮ ‍ಪಡುವ ಸಾಧನೆಗಳೇ. ಜನ ನೆನಪಿಟ್ಟುಕೊಳ್ಳಯವ ಯಾವುದಾದರೂ ಒಂದು ಸಾಧನೆಯನ್ನೂ ಈ ಸರ್ಕಾರ ಮಾಡಿದೆಯೇ. ತವರೂರಾದ ಮೈಸೂರಿಗೆ ಸಿದ್ದರಾಮಯ್ಯ ಏನು ಕೊಡುಗೆ ನೀಡಿದ್ದಾರೆ’ ಎಂದು ಕೇಳಿದರು.

‘ಭ್ರಷ್ಟಾಚಾರ ಮಿತಿ ಮೀರಿದ ಕುರಿತು ಉಪಲೋಕಾಯುಕ್ತರು ಸರ್ಕಾರವನ್ನು ಟೀಕಿಸಿದ್ದಾರೆ. ಯುವ ಜನರ ಭವಿಷ್ಯಕ್ಕೆ ಸರ್ಕಾರ ಕೊಳ್ಳಿ ಇಟ್ಟಿದೆ. ವಿಚಾರಣಾಧೀನ ಕೈದಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ. ಮಹಾರಾಷ್ಟ್ರದ ಪೊಲೀರು ಬಂದು ರಾಜ್ಯದಲ್ಲಿ ಡ್ರಗ್ ಕಾರ್ಖಾನೆಯನ್ನು ಮುಚ್ಚಿಸಿದ್ದಾರೆ. ಗುಜರಾತ್ ಪೊಲೀಸರು ಬಂದು ಇಲ್ಲಿ ಮಾದಕ ಪದಾರ್ಥ ವಶಕ್ಕೆ ಪಡೆದಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದ ಸಾಲ ₹ 7.5 ಲಕ್ಷ ಕೋಟಿ ದಾಟಿದೆ.‌ ಸಿದ್ಧರಾಮಯ್ಯ ಆಡಳಿತಾವಧಿಯ ಸಾಲವೇ ₹ 5 ಲಕ್ಷ ಕೋಟಿ ದಾಟಿದೆ. ಅವರು ರಾಜ್ಯವನ್ನು ಮುಳುಗಿಸಿಯೇ ಹೋಗುತ್ತಾರೆ’ ಎಂದರು.

‘ಭೈರತಿ ಬಸವರಾಜು ಅವರನ್ನು ರಾಜಕೀಯ ಕಾರಣಕ್ಕಾಗಿ ಬಂಧಿಸಲಾಗಿದೆ. ಅವರ ಮೇಲೆ ಹೊರಿಸಿರುವ ಕೊಲೆ ಆರೋಪಕ್ಕೆ ಪೊಲೀಸರು ಸಾಕ್ಷ್ಯಾಧಾರ ಕೊಡಲು ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು

‘ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾಗಿರುತ್ತಾರೆ ಎನ್ನುವುದು ಜನರ ಸಮಸ್ಯೆ ಅಲ್ಲ. ಅಭಿವೃದ್ಧಿ ಕೆಲಸ ಯಾವಾಗ ಮಾಡುತ್ತೀರಿ ಎಂದಷ್ಟೇ ಜನ ಕೇಳುತ್ತಾರೆ. ಆದರೆ, ಕುರ್ಚಿ ವಿವಾದದಿಂದಾಗಿ ಆಡಳಿತ ಯಂತ್ರದ ಬಿಗಿ ತಪ್ಪಿದೆ. ಭ್ರಷ್ಟಾಚಾರದಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ಅಭಯ ನೀಡಿ, ಡಿ.ಕೆ.ಶಿವಕುಮಾರ್ ಮೂಗಿಗೆ ತುಪ್ಪ ಸವರಿದೆ. ಎರಡೂ ಕಡೆಯವರಿಂದಲೂ ತರಿಸಿಕೊಂಡು ರಾಜ್ಯದ ಖಜಾನೆಯನ್ನು ಬರಿದು ಮಾಡಿದೆ. ಅವರು ತಮ್ಮ ದೌರ್ಬಲ್ಯ ಮುಚ್ಚಿಹಾಕಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಸಲುವಾಗಿ ರಾಜ್ಯದ ಕೆಲ ಬಿಜೆಪಿ ಮುಖಂಡರು ವರಿಷ್ಠರನ್ನು ಭೇಟಿಯಾದ ವಿಚಾರ ಗೊತ್ತಿಲ್ಲ. ಉಚ್ಚಾಟನೆಗೊಂಡಿರುವ ರಘುಪತಿ ಭಟ್, ಕೆ.ಎಸ್‌.ಈಶ್ವರಪ್ಪ ಪಕ್ಷಕ್ಕೆ ಮರಳುವುದಕ್ಕೆ ಕಾಲ ಒದಗಿ ಬರಬೇಕು’ ಎಂದರು.

‘ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನ್ಯಾಯಾಲಯದ ಆದೇಶಗಳಿಂದಾಗಿ ತಡವಾಗಿದೆ. ರಾಜ್ಯ ಸರ್ಕಾರ ಕಾನೂನು ತೊಡಕು ನೀಗಿಸಿ ಆದಷ್ಟು ಬೇಗ ಚುನಾವಣೆ ನಡೆಸಲು ಕ್ರಮವಹಿಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದಿದ್ದರೆ ಕೇಂದ್ರ ಸರ್ಕಾರದ ಶಾಸನಬದ್ಧ ಅನುದಾನಗಳು ಬರುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಶಾಸಕ ಡಿ.ವೇದವ್ಯಾಸ ಕಾಮತ್‌, ಮುಖಂಡರಾದ ಪ್ರೇಮಾನಂದ‌ ಶೆಟ್ಟಿ, ಹೇಮನಾಥ ಶೆಟ್ಟಿ, ವಸಂತ ಪೂಜಾರಿ, ವಿಖ್ಯಾತ್ ಪುತ್ತೂರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.