ಗದಗ: ‘ಪರಿಸ್ಥಿತಿ ಬದಲಾಗಿದೆ. ಆದರೆ, ಕಾಂಗ್ರೆಸ್‌ನ ಮನಸ್ಥಿತಿ ಬದಲಾಗಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಸ್ವಾರ್ಥಕ್ಕಾಗಿ ಅತಿಹೆಚ್ಚು ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಗಾಂಧೀಜಿ, ಡಾ. ಬಿ.ಆರ್.ಅಂಬೇಡ್ಕರ್ ಬದುಕಿದ್ದರೆ ಇವರು ಅವರನ್ನೂ ಜೈಲಿಗಟ್ಟುತ್ತಿದ್ದರು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದರು.
ಬಯಲು ಸಂಸ್ಥೆ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ನಡೆದ ‘ಸಂವಿಧಾನ: 42ನೇ ತಿದ್ದುಪಡಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಕಾಂಗ್ರೆಸ್ಸಿಗರಿಗೆ ನಿಜವಾಗಿಯೂ ಸಂವಿಧಾನದ ಬಗ್ಗೆ ಗೌರವ ಇದ್ದರೆ ನ್ಯಾಯಾಲಯದ ತೀರ್ಪನ್ನು ನ್ಯಾಯಾಲಯದಲ್ಲೇ ಪ್ರಶ್ನಿಸುತ್ತಿದ್ದರು. ಆದರೆ, ಅದನ್ನು ಅಧಿಕಾರದ ಅಹಂಕಾರದ ಮೂಲಕ ಎದುರಿಸುವ ದುಸ್ಸಾಹಸ ಮಾಡಿದರು’ ಎಂದು ಆರೋಪ ಮಾಡಿದರು.
‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರನ್ನೆಲ್ಲಾ ಜೈಲಿಗಟ್ಟಿದರು. ಇಡೀ ದೇಶವೇ ಬಂಧೀಖಾನೆ ಆಯಿತು. ಸಂವಿಧಾನವೇ ಸರ್ವಾಧಿಕಾರಿಯ ಕಪಿಮುಷ್ಠಿಯಲ್ಲಿ ಸಿಲುಕಿತ್ತು. ಡಾ. ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನವನ್ನು ಮನಸೋ ಇಚ್ಛೆ ಬದಲಿಸಿದರು. ಯಾವುದನ್ನೂ ಪ್ರಶ್ನಿಸಲೇಬಾರದು ಎಂದು 42ನೇ ತಿದ್ದುಪಡಿ ಮಾಡಿದರು. ಈ ಮೂಲಕ ಇಂದಿರಾ ಗಾಂಧಿ ಪ್ರಜಾಪ್ರಭುತ್ವದ ಕತ್ತುಹಿಸುಕಿದರು’ ಎಂದು ಕಿಡಿಕಾರಿದರು.
ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ ತುರ್ತು ಪರಿಸ್ಥಿತಿ ವಿರುದ್ಧ ಧ್ವನಿ ಎತ್ತಲಿಲ್ಲ. ಅವರು ಸರ್ವಾಧಿಕಾರಿಯ ಹೊಗಳುಭಟರಾಗಿದ್ದರು. ಆವಾಗ ಪ್ರಶ್ನೆ ಮಾಡಲಾಗದವರಿಗೆ ಈಗ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಈಗ ಇಂದಿರಾ ಇಲ್ಲ, ಇಂಡಿಯಾ ಇದೆ ಎಂದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜೆಗಳ ಹಕ್ಕುಗಳನ್ನು ಕಿತ್ತುಕೊಳ್ಳಲಾಯಿತು. ಆಗ ಸಂವಿಧಾನ ಉಳಿಸಿ ಅಂತ ಹೋರಾಟ ಮಾಡಿದ್ದು, ಜನಸಂಘ. ಅವತ್ತು ಅವರು ‘ಏರೋಪ್ಲೇನ್’, ‘ಚಪಾತಿ’, ‘ಹೈದರಾಬಾದ್ ಗೋಲಿ’ಯಂತಹ ಕಠಿಣ ಶಿಕ್ಷೆಗಳನ್ನು ಸಹಿಸಿಕೊಂಡು ಹೋರಾಡಿದ್ದರಿಂದಲೇ ಅಂಬೇಡ್ಕರ್ ಸಂವಿಧಾನ ಉಳಿದಿದೆ. ಇಲ್ಲವಾದರೆ, ಈಗ ಇಂದಿರಾ ಸಂವಿಧಾನ ಇರುತ್ತಿತ್ತು ಎಂದು ಹೇಳಿದರು.
ಸಂವಿಧಾನ ಧಿಕ್ಕರಿಸಿದ ಕಾಂಗ್ರೆಸ್ಸಿಗರು ಈಗ ಸಾಂವಿಧಾನಿಕ ಸಂಸ್ಥೆಗಳನ್ನು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ಡಿಎನ್‌ಎಯಲ್ಲಿ ಪ್ರಜಾಪ್ರಭುತ್ವ ಇಲ್ಲ; ಸರ್ವಾಧಿಕಾರ ಧೋರಣೆ ಇದೆ. ಹಾಗಾಗಿ, ತುರ್ತು ಪರಿಸ್ಥಿತಿಗೆ 50 ವರ್ಷಗಳಾದರೂ ಹಿಂದಿನ ಘಟನೆಗಳನ್ನು ನನೆಪಿಸಿಕೊಳ್ಳುತ್ತಿರಬೇಕು ಎಂದರು.
1977ರಲ್ಲಿ ಚುನಾವಣೆ ನಡೆಯಿತು. ಜನರು ತುರ್ತು ಪರಿಸ್ಥಿತಿ ಸೋಲಿಸಿ, ಸರ್ವಾಧಿಕಾರಿಯಿಂದ ಸಂವಿಧಾನ ಉಳಿಸಿಕೊಂಡರು. ಅಧಿಕಾರ ಸಿಕ್ಕಾಗಲೆಲ್ಲಾ ಕಾಂಗ್ರೆಸ್ ಸಂವಿಧಾನ ಹತ್ತಿಕ್ಕುವ ಕೆಲಸ ಮಾಡುತ್ತ ಬಂದಿದೆ. ನಿರಂತರ ಜಾಗೃತಿ ಮೂಲಕ ಸಂವಿಧಾನ ರಕ್ಷಣೆ ಮಾಡಿಕೊಳ್ಳುವುದು ಇಂದಿನ ಜರೂರು ಎಂದರು.
ಡಾ. ಗುರುಲಿಂಗಪ್ಪ ಬಿಡನಾಳ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಯಲು ವೇದಿಕೆ ಸಂಯೋಜಕ ನಿಂಗಪ್ಪ ಪೂಜಾರ, ಡಾ.ಪುನೀತಕುಮಾರ ಬೆನಕವಾರಿ, ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮುಖಂಡ ಪ್ರಶಾಂತ ನಾಯ್ಕರ, ಚಂದ್ರು ತಡಸದ ಇದ್ದರು.
‘ಚರ್ಚೆಯೇ ಇಲ್ಲದೇ ಸಮಾಜವಾದ, ಜಾತ್ಯತೀತ ಪದ ಸೇರ್ಪಡೆ’
‘ಸಂವಿಧಾನದ ಪೀಠಿಕೆಯನ್ನು ತಿದ್ದುಪಡಿ ಮಾಡುವ ಅಧಿಕಾರ ಇಲ್ಲ. ಆದರೆ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಚರ್ಚೆಯೇ ಇಲ್ಲದೇ ಪೀಠಿಕೆ ಬದಲಿಸಿದರು’ ಎಂದು ಸಿ.ಟಿ.ರವಿ ದೂರಿದರು.
‘ಸಮಾಜವಾದ, ಜಾತ್ಯತೀತ ಎಂಬುದು ಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟಿದ್ದಲ್ಲ. ಭಾರತ ಯಾವುದೇ ಒಂದು ‘ಇಸಂ’ನ ಅಡಿಯಲ್ಲಿ ಸಂವಿಧಾನ ಅಳವಡಿಸಿಕೊಂಡರೆ ಮುಕ್ತತತೆ ಅವಕಾಶ ಇರುವುದಿಲ್ಲ. ಜನರು ಯಾವುದಾದರೂ ‘ಇಸಂ’ ಇಟ್ಟುಕೊಳ್ಳಲಿ. ಭಾರತ ಮುಕ್ತವಾಗಿರಬೇಕು ಎಂಬ ಕಾರಣಕ್ಕೆ ಸಮಾಜವಾದ ಪದವನ್ನು ಸಂವಿಧಾನ ರಚನೆ ಸಂದರ್ಭದಲ್ಲಿ ಕೆ.ಟಿ.ಶಾ ಸ್ಷಷ್ಟವಾಗಿ ನಿರಾಕರಿಸಿದ್ದರು’ ಎಂದರು.
ಜಾತ್ಯತೀತ ಪದಕ್ಕೆ ಸಂಬಂಧಿಸಿದಂತೆ ಪಾಶ್ಚಾತ್ಯ ನಾಗರಿಕತೆ, ಸಂಸ್ಕೃತಿಗೂ, ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿ ನಡುವೆ ಅಪಾರ ವ್ಯತ್ಯಾಸ ಇದೆ. ಯುರೋಪಿನ ಅನುಕರಣೆ ಸೂಕ್ತವಲ್ಲ ಎಂದು ಹೇಳುತ್ತಾರೆ. ಆದರೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಚರ್ಚೆಯೇ ಇಲ್ಲದೇ ಸಮಾಜವಾದ, ಜಾತ್ಯತೀತ ಪದವನ್ನು ತುರುಕಿಬಿಟ್ಟರು ಎಂದು ಆರೋಪ ಮಾಡಿದರು.
‘ಕಾಂಗ್ರೆಸ್‌ನವರು ಜಾತ್ಯತೀತ ಹೆಸರಲ್ಲಿ ಇಂದು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದರ ಪರಿಣಾಮ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ. ಇದು ಕಾಂಗ್ರೆಸ್ ನಡೆದುಕೊಂಡ ರೀತಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.