ಬೆಂಗಳೂರು: ನಿಯಮ ಪಾಲಿಸದೆ ಕಂದಾಯ ಭೂಮಿಯಲ್ಲೇ ರಚಿಸಿದ ಅನಧಿಕೃತ ಬಡಾವಣೆಗಳಲ್ಲಿ ನಿವೇಶನಗಳನ್ನು ಖರೀದಿಸಿ, ಮನೆ ಕಟ್ಟಿಕೊಂಡಿದ್ದ ಬಡ, ಮಧ್ಯಮ ವರ್ಗದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಇಂತಹ 32 ಲಕ್ಷ ಆಸ್ತಿಗಳಿಗೆ ಬಿ–ಖಾತಾ ದೊರಕಲಿದೆ.
ಎಲ್ಲ ಆಸ್ತಿಗಳಿಗೆ ಮೂರು ತಿಂಗಳೊಳಗೆ ಬಿ–ಖಾತಾ ನೀಡುವ ಗಡುವನ್ನು ಸರ್ಕಾರ ನೀಡಿದ್ದು, ಇದಕ್ಕಾಗಿ ರಾಜ್ಯದ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು, ಯೋಜನಾ ನಿರ್ದೇಶಕರು ಹಾಗೂ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳ ಜತೆ ಮಂಗಳವಾರ ವಿಡಿಯೊ ಸಂವಾದ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಂದಾಯ ಜಾಗವೂ ಸೇರಿದಂತೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿದ ನಿವೇಶನ, ಮನೆಗಳಿಗೆ ಬಿ– ಖಾತಾ ನೀಡುವ ಅಭಿಯಾನಕ್ಕೆ ತಕ್ಷಣವೇ ಚಾಲನೆ ನೀಡಬೇಕು (ಫೆ.19ರಿಂದ) ಎಂದು ಸೂಚಿಸಿದರು.
ಅರಣ್ಯ ಸಚಿವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯ ವರದಿ ಆಧರಿಸಿ ಕಾನೂನು ರೂಪಿಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವ ಅನಧಿಕೃತ, ಕಂದಾಯ ಬಡಾವಣೆಗಳು ಹಾಗೂ ಆಸ್ತಿಗಳಿಗೆ ನಾಗರಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಮೂರು ತಿಂಗಳಲ್ಲಿ ಬಿ–ಖಾತಾಗಳನ್ನು ನೀಡಬೇಕು. ನಂತರ ತೆರಿಗೆ ಸಂಗ್ರಹ ಆರಂಭಿಸಬೇಕು ಎಂದರು.
ನಗರ, ಪಟ್ಟಣ, ಪಾಲಿಕೆ ವ್ಯಾಪ್ತಿ ಹಾಗೂ ಹಳ್ಳಿಗಳಲ್ಲೂ ಅನಧಿಕೃತ ಬಡಾವಣೆಗಳು ತಲೆ ಎತ್ತಿವೆ. ಇಂತಹ ಬಡಾವಣೆಗಳಲ್ಲಿ ಬಡವರು, ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಅನುಕೂಲ ಮಾಡಿಕೊಡಲು ಕಾಯ್ದೆಯ ಮೂಲಕ ‘ಬಿ’ ಖಾತಾ ಅಭಿಯಾನ ಆರಂಭಿಸಲಾಗಿದೆ. ಅಭಿಯಾನ ಪೂರ್ಣಗೊಂಡ ನಂತರ ಅನಧಿಕೃತ ಬಡಾವಣೆಗಳಿಗೆ ಅವಕಾಶ ನೀಡುವಂತಿಲ್ಲ ಎಂದು ತಾಕೀತು ಮಾಡಿದರು.
ಸರ್ಕಾರದ ಈ ನಿರ್ಧಾರದಿಂದಾಗಿ ಇದುವರೆಗೂ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ ಹೊಂದಿದವರಿಗೆ ಸರ್ಕಾರದ ದಾಖಲೆಯೊಂದು ಲಭ್ಯವಾಗಲಿದೆ. ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ, ಭೂಪರಿವರ್ತನೆ ಮಾಡಿಕೊಳ್ಳದೆ ಕಂದಾಯ (ಕೃಷಿ ಜಮೀನು) ಸ್ವರೂಪದ ಭೂಮಿಯಲ್ಲೇ ನಿವೇಶನಗಳನ್ನು ರಚಿಸಿ, ಮಾರಾಟ ಮಾಡುವ ‘ಭೂ ದಂಧೆ’ಗೂ ಇನ್ನು ಮುಂದೆ ಸಂಪೂರ್ಣ ಕಡಿವಾಣ ಬೀಳಲಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ನಗರ, ಪಟ್ಟಣ ಪ್ರದೇಶ, ಗ್ರಾಮೀಣ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಆಯಾ ವಿಭಾಗದ ಅಧಿಕಾರಿಗಳನ್ನು ಬಳಸಿಕೊಂಡು, ನಿಯಮಕ್ಕೆ ವಿರುದ್ಧವಾಗಿ ಇಂತಹ ಬಡಾವಣೆಗಳನ್ನು ಅಕ್ರಮವಾಗಿ ನಿರ್ಮಾಣ ಮಾಡುವ ಮೂಲಕ ಸರ್ಕಾರಕ್ಕೆ ಭೂ ಪರಿವರ್ತನಾ ಶುಲ್ಕ, ನೋಂದಣಿ, ಮುದ್ರಾಂಕ ಶುಲ್ಕದಲ್ಲೂ ಮೋಸ ಮಾಡುವ ಜತೆಗೆ, ವಾರ್ಷಿಕ ಮನೆ ಕಂದಾಯ, ನಿವೇಶನ ಕಂದಾಯ ನಷ್ಟವನ್ನೂ ಮಾಡುತ್ತಿದ್ದರು.
ಸ್ವಲ್ಪ ಕಡಿಮೆ ಮೌಲ್ಯದಲ್ಲಿ ಸಿಗುತ್ತಿದ್ದ ಇಂತಹ ನಿವೇಶನಗಳನ್ನು ಬಡ, ಮಧ್ಯಮ ವರ್ಗದವರೇ ಖರೀದಿಸಿ, ಮನೆ ಕಟ್ಟಿಕೊಂಡಿದ್ದಾರೆ. ಅವು ಅನಧಿಕೃತ ಬಡಾವಣೆಗಳಾದ ಕಾರಣ ಸ್ಥಳೀಯ ಸಂಸ್ಥೆಗಳಿಂದ ಸಿಗುತ್ತಿದ್ದ ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತರಾಗುತ್ತಿದ್ದರು. ಇಂತಹ ಎಲ್ಲ ಲೋಪಗಳಿಗೂ ತಿಲಾಂಜಲಿ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಎಲ್ಲ ಅನಧಿಕೃತ ಬಡಾವಣೆಗಳ ನಿವೇಶನ, ಮನೆಗಳಿಗೆ ಒಂದು ಬಾರಿಗೆ ಸೀಮಿತವಾಗಿ ಬಿ–ಖಾತಾ ನೀಡುವ ಮೂಲಕ ಮೊದಲ ಹಂತದಲ್ಲಿ ‘ಅಧಿಕೃತ‘ಗೊಳಿಸುವ ಭಾಗ್ಯ ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.