ADVERTISEMENT

ಕರ್ಫ್ಯೂ, ವಾರಾಂತ್ಯ ಲಾಕ್‌: ಕೊರೊನಾ ಸರಪಳಿ ಮುರಿಯಲು ಸಹಕಾರಿ –ಸುಧಾಕರ್

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 10:29 IST
Last Updated 21 ಏಪ್ರಿಲ್ 2021, 10:29 IST
ಸುಧಾಕರ್
ಸುಧಾಕರ್   

ಬೆಂಗಳೂರು: ಮೇ 4 ರವರೆಗಿನ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಬಂದ್‌ನಿಂದ ಕೊರೊನಾಸೋಂಕಿನ ಸರಪಳಿಯನ್ನು ಮುರಿಯಲು ಸಾಧ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋಂಕಿನ ಸರಪಳಿ ಮುರಿಯುವಲ್ಲಿ ಯಶಸ್ವಿ ಆಗಬೇಕಿದ್ದರೆ, ಸಾರ್ವಜನಿಕರ ಸಹಕಾರ ಅಗತ್ಯ. ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ಮನವಿ ಮಾಡಿದರು.

ವೇಗವಾಗಿ ಹರಡುತ್ತಿರುವ ಸೋಂಕನ್ನು ತಡೆಗಟ್ಟಲು ತಾಂತ್ರಿಕ ಸಲಹಾ ಸಮಿತಿ ತಜ್ಞರು ವೈಜ್ಞಾನಿಕ ಆಧಾರದ ಮೇಲೆ ನೀಡಿರುವ ಸಲಹೆಯ ಮೇರೆಗೆ ಮಾರ್ಗಸೂಚಿ ರೂಪಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಇದನ್ನು ಪಾಲಿಸಲೇಬೇಕು. ಇದರಿಂದ ಮುಂದಿನ ಮೂರು–ನಾಲ್ಕು ದಿನಗಳಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗುತ್ತದೆ ಎಂದರು.

ADVERTISEMENT

ಸೋಂಕಿಗೆ ಒಳಗಾದರೆ ಗಾಬರಿ ಆಗಬೇಕಾಗಿಲ್ಲ. ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಎಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಾಗಿಯೂ ಇಲ್ಲ. ಯಾರು ಆಸ್ಪತ್ರೆಗೆ ದಾಖಲಾಗಬೇಕು ಎಂಬುದನ್ನು ತಿಳಿಸಲಾಗುವುದು. ಅಂತಹವರು ಮಾತ್ರ ದಾಖಲಾದರೆ ಸಾಕು ಎಂದು ತಿಳಿಸಿದರು.

ಬೆಂಗಳೂರು ನಗರದ ಎಂಟು ವಲಯಗಳಲ್ಲಿ ಕೋವಿಡ್‌ ಹೆಚ್ಚಿರುವ ಕಾರಣ ಉಸ್ತುವಾರಿ ಸಚಿವರು ಈ ವಲಯಗಳ ಮೇಲುಸ್ತುವಾರಿ ವಹಿಸಿದ್ದಾರೆ. ಮೃತರ ದಹನಕ್ಕಾಗಿ ಗೋಮಾಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸೋಂಕು ಹೆಚ್ಚು ಇರುವ ಜಿಲ್ಲೆಗಳಿಗೆ ಭೇಟಿ ಕೋಡುತ್ತೇನೆ. ನಾಳೆ ಮೈಸೂರಿಗೆ ತೆರಳುತ್ತೇನೆ ಎಂದು ಸುಧಾಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.