ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಹೆಸರಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಆರೋಪಿ ನಿಂಗಪ್ಪ ಮತ್ತು ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿ ಮಧ್ಯದ ವಾಟ್ಸ್ಆ್ಯಪ್ ಚಾಟ್‌ಗಳ ಬೆನ್ನು ಬಿದ್ದಿದ್ದ ಲೋಕಾಯುಕ್ತ ಪೊಲೀಸರು, ಅವರಿಬ್ಬರ ‘ನಂಟಿನ ಗಂಟು’ ಹೇಗಿತ್ತೆಂಬುದನ್ನು ಪತ್ತೆ ಹಚ್ಚಿದ್ದಾರೆ.
‘ನಿಂಗಪ್ಪ ಎಂಬಾತ ಲೋಕಾಯುಕ್ತರು, ಉಪ ಲೋಕಾಯುಕ್ತರು, ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾನೆ ಎಂಬುದರ ವಿರುದ್ಧ ಹಲವು ದೂರುಗಳು ಬಂದಿದ್ದವು. ಲೋಕಾಯುಕ್ತರಿಗೆ, ಉಪ ಲೋಕಾಯುಕ್ತರಿಗೆ ಮತ್ತು ಲೋಕಾಯುಕ್ತ ಎಸ್‌ಪಿಗೂ ದೂರು ಬಂದಿತ್ತು. ಆ ದೂರುಗಳಲ್ಲಿ ಸತ್ಯಾಂಶ ಇರುವುದು ಪ್ರಾಥಮಿಕ ಪರಿಶೀಲನೆಯ ನಂತರ ಗೊತ್ತಾಯಿತು’ ಎಂದು ಮೂಲಗಳು ಮಾಹಿತಿ ನೀಡಿವೆ.
‘ನಿಂಗಪ್ಪನನ್ನು ಬಂಧಿಸಿ, ಆತನ ಫೋನ್ ಅನ್ನು ವಶಕ್ಕೆ ಪಡೆಯಲಾಯಿತು. ಫೋನ್‌ನಲ್ಲಿ ಇದ್ದ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ಪರಿಶೀಲಿಸಲಾಯಿತು. ಶ್ರೀನಾಥ್ ಜೋಷಿ ಜೊತೆಗಿನ ಚಾಟ್ ಒಂದನ್ನು ಹೊರತುಪಡಿಸಿ, ಉಳಿದೆಲ್ಲಾ ಚಾಟ್‌ಗಳನ್ನು ನಿಂಗಪ್ಪ ಅಳಿಸಿಹಾಕಿದ್ದಾನೆ. ಆ ಚಾಟ್ ಉಳಿದುಕೊಂಡಿದ್ದರಿಂದಲೇ, ಹಣ ವಸೂಲಿಯಲ್ಲಿ ಶ್ರೀನಾಥ್ ಜೋಷಿಗೆ ನಂಟಿದೆ ಎಂಬುದು ಗೊತ್ತಾಯಿತು’ ಎಂದು ವಿವರಿಸಿವೆ.
‘ನಿಂಗಪ್ಪನು ಬೇರೆಯವರ ಜತೆಗಿನ ಎಲ್ಲ ಚಾಟ್‌ಗಳನ್ನು ಅಳಿಸಿಹಾಕಿ, ಶ್ರೀನಾಥ್ ಜತೆಗಿನ ಚಾಟ್ ಅನ್ನು ಏಕೆ ಉಳಿಸಿಕೊಂಡ ಎಂಬ ದಿಕ್ಕಿನಲ್ಲೂ ತನಿಖೆ ನಡೆಸಲಾಗುತ್ತಿದೆ. ಶ್ರೀನಾಥ್ ಅವರ ಎರಡು ಫೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅವುಗಳಲ್ಲಿನ ಬಹುತೇಕ ದತ್ತಾಂಶಗಳನ್ನು ಅಳಿಸಿಹಾಕಲಾಗಿದೆ. ಈಗ ಇರುವ ಕೆಲ ಮಾಹಿತಿಗಳನ್ನು ಕಲೆಹಾಕಿದ್ದು, ಉಳಿದ ದತ್ತಾಂಶ ಪಡೆದುಕೊಳ್ಳಲು ಫೋನ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ’ ಎಂದಿವೆ.
‘ನಿಂಗಪ್ಪ ಮತ್ತು ಶ್ರೀನಾಥ್ ನಡುವೆ ಸಂಬಂಧ ಹೇಗೆ ಬೆಳೆಯಿತು ಎಂಬುದು ಗೊತ್ತಾಗಿದೆ. ಲೋಕಾಯುಕ್ತದ ತನಿಖೆಗೆ ಗುರಿಯಾಗಬೇಕಿದ್ದ ಸರ್ಕಾರಿ ಅಧಿಕಾರಿಗಳ ವಿವರವನ್ನು ಹೇಗೆ ಕಲೆಹಾಕಿ, ಹಣ ವಸೂಲಿ ಮಾಡುತ್ತಿದ್ದರು ಎಂಬುದನ್ನೂ ಪತ್ತೆ ಮಾಡಲಾಗಿದೆ. ಶ್ರೀನಾಥ್ ಅವರ ಫೋನ್‌ಗಳ ದತ್ತಾಂಶಗಳು ವಿಧಿ ವಿಜ್ಞಾನ ಪ್ರಯೋಗಾಲದಿಂದ ಬಂದ ನಂತರ ಹಲವು ದಿಕ್ಕಿನಲ್ಲಿ ತನಿಖೆ ಮುಂದುವರೆಯಲಿದೆ’ ಎಂದು ಮಾಹಿತಿ ನೀಡಿವೆ.
ಸೈಬರ್ ಅಪರಾಧ ತಜ್ಞರ ನೆರವು
‘ನಿಂಗಪ್ಪ ಅವರ ಮೊಬೈಲ್‌ನಲ್ಲಿನ ಕೆಲವು ದತ್ತಾಂಶಗಳನ್ನು ಕಲೆಹಾಕಲು ಸಿಐಡಿಯ ಸೈಬರ್ ಅಪರಾಧ ತಜ್ಞರ ನೆರವು ಪಡೆದುಕೊಳ್ಳಲಾಗಿದೆ. ಆರೋಪಿಯ ಕ್ರಿಪ್ಟೋ ಕರೆನ್ಸಿ ಹೂಡಿಕೆ ಸಂಬಂಧ ತನಿಖೆಗೂ ಅವರ ನೆರವನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ತನಿಖಾಧಿಕಾರಿಗಳು’ ಮಾಹಿತಿ ನೀಡಿದರು.
‘ಕ್ರಿಪ್ಟೋ ಕರೆನ್ಸಿ ನಿರ್ವಹಣೆ ಮತ್ತು ವಹಿವಾಟಿನಲ್ಲಿ ನಿಂಗಪ್ಪ ಪರಿಣತಿ ಹೊಂದಿದ್ದಾನೆ. ಆತನ 13 ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಇರುವ ಹಣದ ಮೂಲ ಯಾವುದು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಕ್ರಿಪ್ಟೋ ಕರೆನ್ಸಿ ಪ್ರಕರಣಗಳ ನಿರ್ವಹಣೆ ಯಲ್ಲಿ ಪರಿಣತಿ ಹೊಂದಿರುವ ಅಧಿಕಾರಿಗಳು ತನಿಖೆಗೆ ನೆರವು ನೀಡುತ್ತಿದ್ದಾರೆ’ ಎಂದು ತಿಳಿಸಿದರು.
‘ಈ ವ್ಯಾಲೆಟ್‌ಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಅದರಲ್ಲಿರುವ ಹಣವನ್ನು ಪಡೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನಿಂಗಪ್ಪನ ಮನೆ ಶೋಧದ ವೇಳೆ ನಗದು ಪತ್ತೆಯಾಗಿಲ್ಲ. ಸರ್ಕಾರಿ ಅಧಿಕಾರಿಗಳಿಂದ ಹಣವನ್ನು ಹೇಗೆ ಪಡೆದುಕೊಳ್ಳಲಾಗಿದೆ, ಅದನ್ನು ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ ಹಾದಿ ಯಾವುದು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.