ADVERTISEMENT

ಸೈಬರ್ ಕ್ರೈಂ ಪ್ರಕರಣಗಳ ನಿರ್ವಹಣೆಗೆ SOP ಸಿದ್ಧ: ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 15:59 IST
Last Updated 12 ಡಿಸೆಂಬರ್ 2025, 15:59 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ‘ಆನ್‌ಲೈನ್‌ ಮೂಲಕ ಹಣಕಾಸು ವಂಚನೆ ಎಸಗುವ ಅಪರಾಧಗಳ ಕುರಿತಂತೆ, ಬ್ಯಾಂಕ್‌ ಖಾತೆ ಸ್ಥಗಿತಗೊಳಿಸುವುದು (ಫ್ರೀಜಿಂಗ್‌) ಮತ್ತು ಹಣವನ್ನು ಮರು ಜಮಾ ಮಾಡುವುದೂ ಸೇರಿದಂತೆ ಸೈಬರ್‌ ಅಪರಾಧಿಕ ಪ್ರಕರಣಗಳ ಬಗ್ಗೆ ವ್ಯವಹರಿಸಬೇಕಾದ ಪ್ರಕ್ರಿಯೆಯ ನಿರ್ದಿಷ್ಟ ವ್ಯವಹರಣೆಗೆ ಅನುವಾಗುವಂತಹ, ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ರೂಪಿಸಲಾಗಿದೆ’ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

‘ಸೈಬರ್‌ ಅಪರಾಧಗಳಿಗೆ ಸಂಬಂಧಿಸಿದ ಬ್ಯಾಂಕ್‌ ಖಾತೆಗಳನ್ನು ಸ್ಥಗತಿಗೊಳಿಸುವ ಮುನ್ನ ಖಾತೆದಾರರಿಗೆ ಶೋಕಾಸ್‌ ನೋಟಿಸ್‌ ನೀಡುವ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಎಲೆಕ್ಟ್ರಾನಿಕ್‌ ಸಿಟಿಯ ಪವನ್‌ ವಿಜಯ್ ಶರ್ಮ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು  ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಪ್ರತಿವಾದಿ ಕೇಂದ್ರ ಗೃಹ ಸಚಿವಾಲಯದ ಹಾಜರಾಗಿದ್ದ ಪರ ಡೆಪ್ಯುಟಿ ಸಾಲಿಸಿಟರ್‌ ಜನರಲ್‌ ಎಚ್‌.ಶಾಂತಿಭೂಷಣ್‌, ‘ಈ ರೀತಿಯ ಅಪರಾಧಗಳು ಆದಾಗ ಯಾವೆಲ್ಲಾ ಪ್ರಾಧಿಕಾರಗಳು ಏನೇನು ಮಾಡಬೇಕು ಎಂಬುದನ್ನು ವಿಶದವಾಗಿ ಚರ್ಚಿಸಿ ಕರಡು ಎಸ್‌ಒಪಿ ರೂಪಿಸಲಾಗಿದೆ’ ಎಂದು ನ್ಯಾಯಪೀಠಕ್ಕೆ ಸಲ್ಲಿಸಿದರು.

‌‘ಈ ಕರಡು ಎಸ್‌ಒಪಿಯನ್ನು ದಾವೆದಾರರ (ಸ್ಟೇಕ್‌ ಹೋಲ್ಡರ್‌ಗಳೆನೆಸಿದ ಬ್ಯಾಂಕ್‌ಗಳು, ರಿಸರ್ವ್ ಬ್ಯಾಂಕ್‌, ರಾಜ್ಯ ಪೊಲೀಸರು, ಬ್ಯಾಂಕಿಂಗ್ ಅಸೋಸಿಯೇಷನ್‌, ಬ್ಯಾಂಕಿಂಗ್ ಫೆಡರೇಷನ್‌, ಹಣಕಾಸು ಮಧ್ಯವರ್ತಿಗಳಾದ ಗೂಗಲ್‌, ಫೋನ್‌ ಪೇ...ಇತ್ಯಾದಿ ಗೇಟ್‌ ವೇಗಳು) ಜೊತೆ ಹಂಚಿಕೊಳ್ಳಲಾಗಿದೆ. ಇವರೆಲ್ಲರಿಂದ ಅಗತ್ಯ ಅಭಿಪ್ರಾಯಗಳನ್ನು ಪಡೆದು ಸೂಕ್ತವೆನಿಸಿದ ಅಭಿಪ್ರಾಯ, ಸಲಹೆಗಳನ್ನು ಅಳವಡಿಸಿದ ಬಳಿಕ ಎಸ್‌ಒಪಿ ಅಂತಿಮಗೊಳಿಸಲಾಗುವುದು’ ಎಂದು ತಿಳಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ತನ್ನ ಬ್ಯಾಂಕ್‌ ಖಾತೆಗಳು ಸ್ಥಗಿತಗೊಂಡ ನಂತರ ಕಾನೂನು ಅಡಿಯಲ್ಲಿ ಸೂಕ್ತ ಪರಿಹಾರ ಕೋರಲು ಸ್ವತಂತ್ರ ಇದ್ದಾರೆ. ಅದಕ್ಕೆ ಈ ಆದೇಶ ಅಡ್ಡಿಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿ ಅರ್ಜಿ ವಿಲೇವಾರಿ ಮಾಡಿತು. ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎಸ್.ಸುದರ್ಶನ್‌ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.