ADVERTISEMENT

Cyber Crime | ಸೈಬರ್‌ ಅಪರಾಧ ಪತ್ತೆಗೆ ತರಬೇತಿ

ರಾಜ್ಯದಲ್ಲಿ ಶೇ 30ರಷ್ಟು ಪ್ರಕರಣ, ಬೆಂಗಳೂರಿನಲ್ಲಿ ಅತಿ ಹೆಚ್ಚು ದಾಖಲು

ಕೆ.ಎಸ್.ಸುನಿಲ್
Published 12 ಮೇ 2025, 0:30 IST
Last Updated 12 ಮೇ 2025, 0:30 IST
ಸೈಬರ್‌ ಅಪರಾಧ (ಸಾಂದರ್ಭಿಕ ಚಿತ್ರ)
ಸೈಬರ್‌ ಅಪರಾಧ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ತನಿಖಾ ವ್ಯವಸ್ಥೆಯನ್ನು ಬಲಪಡಿಸಲು ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಪ್ರಾಸಿಕ್ಯೂಟರ್‌ಗಳಿಗೆ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ (ಸಿಸಿಐಟಿಆರ್) ವತಿಯಿಂದ ತರಬೇತಿ ನೀಡಲಾಗುತ್ತಿದೆ.

ರಾಜ್ಯದಲ್ಲಿ ದಾಖಲಾಗುತ್ತಿರುವ ಒಟ್ಟು ಅಪರಾಧ ಪ್ರಕರಣಗಳಲ್ಲಿ ಶೇಕಡ 30ರಷ್ಟು ಸೈಬರ್ ವಂಚನೆಗೆ ಸಂಬಂಧಿಸಿದ್ದಾಗಿವೆ. ಬೆಂಗಳೂರಿನಲ್ಲಿ ಶೇಕಡ 40 ರಷ್ಟು ವರದಿಯಾಗಿದೆ. ವಂಚನೆಗೆ ನಾನಾ ಮಾರ್ಗ ಕಂಡುಕೊಂಡಿರುವ ಕಾರಣ ಆರೋಪಿಗಳ ಪತ್ತೆಯೇ ಪೊಲೀಸರಿಗೆ ಸವಾಲಾಗಿದೆ.

ಬ್ಯಾಂಕ್ ಖಾತೆ, ದತ್ತಾಂಶ ಕಳವು, ವಿವಿಧ ಇಲಾಖೆಗಳ ಖಾತೆಗಳು ಹ್ಯಾಕ್‌ ಆಗುವುದು ಸೇರಿದಂತೆ ನಾನಾ ರೀತಿಯ ಸೈಬರ್ ಅಪರಾಧಗಳು ವರದಿಯಾಗುತ್ತಿವೆ. ಹಳೆಯ ಮಾದರಿಯ ಡಕಾಯಿತಿ, ದರೋಡೆ ಹಾಗೂ ಇತರೆ ಭೌತಿಕ ಕಳ್ಳತನಗಳನ್ನು ಹಿಂದಿಕ್ಕಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚು ವರದಿ ಆಗುತ್ತಿವೆ.

ADVERTISEMENT

‘ಸೈಬರ್ ಪ್ರಪಂಚದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ಅಧಿಕಾರಿಗಳು ತಿಳಿದುಕೊಳ್ಳಬೇಕು. ಸೈಬರ್ ಅಪರಾಧ ಪ್ರಕರಣಗಳನ್ನು ಆರಂಭದಲ್ಲಿಯೇ ನಿಯಂತ್ರಿಸುವ ಉದ್ದೇಶದಿಂದ ಈವರೆಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಪ್ರಾಸಿಕ್ಯೂಟರ್‌ ಸೇರಿ 45 ಸಾವಿರ ಜನರಿಗೆ ತರಬೇತಿ ನೀಡಲಾಗಿದೆ’ ಎಂದು ಸಿಸಿಐಟಿಆರ್ ಅಧಿಕಾರಿಯೊಬ್ಬರು ತಿಳಿಸಿದರು. 

‘ಸೈಬರ್ ಅಪರಾಧ‍ ಪ್ರಕರಣ ಪತ್ತೆ ಸಂಬಂಧ, ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಪ್ರಾಸಿಕ್ಯೂಟರ್‌ಗಳಿಗೂ ಮಾಹಿತಿ ತಂತ್ರಜ್ಞಾನ ಕೌಶಲ, ಸೈಬರ್ ಸುರಕ್ಷತೆ, ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ನಿರ್ವಹಣೆ ಕುರಿತು ತರಬೇತಿ ನೀಡುವ ಮೂಲಕ ಸಶಕ್ತಗೊಳಿಸಲಾಗುತ್ತಿದೆ. ಸೈಬರ್‌ ಅಪರಾಧಗಳ ತನಿಖೆ ಜಟಿಲವಾಗುತ್ತಿದೆ. ಇದಕ್ಕೆ ತಕ್ಕಂತೆ ತನಿಖಾಧಿಕಾರಿಗಳೂ ಸಮರ್ಥರಾಗಿರಬೇಕು. ಹಾಗಾಗಿ ಡಿಜಿಟಲ್ ಹಾಗೂ ಸೈಬರ್‌ ಅಪರಾಧಗಳ ತನಿಖಾಧಿಕಾರಿಗಳಿಗೆ ತಾಂತ್ರಿಕ ನೈಪುಣ್ಯ, ತಾಂತ್ರಿಕ ಪರಿಣತಿ, ವಿಧಿವಿಜ್ಞಾನಗಳ ಕುಶಾಗ್ರಮತಿ ಅಗತ್ಯ’ ಎಂದು ಹೇಳಿದರು. 

‘ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ 62 ಸಾವಿರ ಸೈಬರ್‌ ಅಪರಾಧ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರದ ವೈಟ್‌ಫೀಲ್ಡ್ ವಿಭಾಗದಲ್ಲಿ ಅತಿ ಹೆಚ್ಚು ದಾಖಲಾಗುತ್ತಿವೆ. ದಾಖಲಾಗದ ಪ್ರಕರಣಗಳು ಇನ್ನೂ ಇವೆ. ಹಾಗಾಗಿ ಐ.ಟಿ, ಬಿ.ಟಿ ಕಂಪನಿಗಳಿಗೆ ಭೇಟಿ ನೀಡಿ, ಸೈಬರ್ ವಂಚನೆ ಕುರಿತು ಉದ್ಯೋಗಿಗಳಿಗೆ ಅರಿವು ಮೂಡಿಸಲಾಗುತ್ತಿದೆ’ ಎಂದು ಸೈಬರ್ ಠಾಣೆ ಅಧಿಕಾರಿ ವಿವರಿಸಿದರು.

‘60 ವರ್ಷ ದಾಟಿದವರು ಹೆಚ್ಚು ವಂಚನೆಗೆ ಒಳಗಾಗುತ್ತಿದ್ದಾರೆ. 2023ರಲ್ಲಿ ₹ 46.7 ಕೋಟಿ ಕಳೆದುಕೊಂಡರೆ, 2024ರಲ್ಲಿ ₹182.8 ಕೋಟಿಗೇರಿದೆ. ಸ್ವಯಂ ಸೇವಾ ಸಂಸ್ಥೆಯ ಸಹಕಾರದೊಂದಿಗೆ ಸೈಬರ್‌ ವಂಚನೆ ಕುರಿತು ಹಿರಿಯರಿಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ನಾನಾ ಮಾದರಿ ಅಪರಾಧ: ‌ಸಾಮಾಜಿಕ ಜಾಲತಾಣದಲ್ಲಿ ನಿಂದನೆ, ಬೆದರಿಕೆ, ಕೆವೈಸಿ ಅಪ್‌ಡೇಟ್, ಎಕೆಪಿ ಫೈಲ್ ಕಳುಹಿಸಿ ಒಟಿಪಿ ಪಡೆದು ವಂಚನೆ, ಎಟಿಎಂ, ಕ್ರೆಡಿಟ್ ಕಾರ್ಡ್, ಕಾರ್ಡ್ ಸ್ಕಿಮ್ಮಿಂಗ್, ಫಿಶಿಂಗ್, ಮ್ಯಾಟ್ರಿಮೋನಿಯಲ್, ನೌಕರಿ, ಒಎಲ್ಎಕ್ಸ್, ಹೂಡಿಕೆ, ಅರೆಕಾಲಿಕ ನೌಕರಿ, ರಿಮೋಟ್‌ ಆಕ್ಸಿಸ್‌, ಡೇಟಾ ಕಳ್ಳತನ, ಹ್ಯಾಕಿಂಗ್, ವೈರಸ್ ದಾಳಿ, ಅಶ್ಲೀಲ ವಿಡಿಯೊ ಅಪ್‌ಲೋಡ್, ಡೀಪ್‌ ಫೇಕ್, ಜಾಹೀರಾತು ವಂಚನೆ, ನಕಲಿ ಸಹಾಯವಾಣಿ, ಆನ್‌ಲೈನ್ ಹಣ ವರ್ಗಾವಣೆ, ಎಇಪಿಎಸ್‌, ಸಾಲದ ಆ್ಯಪ್, ಉಡುಗೊರೆ, ಸಾಮಾಜಿಕ ಜಾಲತಾಣದ ಕೇಸ್, ಕ್ರಿಪ್ಟೋ ಕರೆನ್ಸಿ, ಫೆಡೆಕ್ಸ್, ಡಿಜಿಟಲ್ ಅರೆಸ್ಟ್, ಸೇರಿ ಹಲವು ಮಾದರಿ ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.