ADVERTISEMENT

ಕಾಂಗ್ರೆಸ್‌ನಲ್ಲಿ ಮೂಲ–ವಲಸಿಗ ಎಂದಿಲ್ಲ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 13:00 IST
Last Updated 2 ಮಾರ್ಚ್ 2020, 13:00 IST
ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್    

ಮೈಸೂರು: ‘ಕಾಂಗ್ರೆಸ್‌ನಲ್ಲಿ ಮೂಲ–ವಲಸಿಗ ಎಂಬುದಿಲ್ಲ. ಇದೆಲ್ಲಾ ಮಾಧ್ಯಮದವರ ಸೃಷ್ಟಿಯಷ್ಟೇ’ ಎಂದು ಶಾಸಕ ಡಿ.ಕೆ.ಶಿವಕುಮಾರ್ ಭಾನುವಾರ ಇಲ್ಲಿ ತಿಳಿಸಿದರು.

ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ, ‘ಸಿದ್ದರಾಮಯ್ಯ ವಿರುದ್ಧ ಮೂಲ‌ ಕಾಂಗ್ರೆಸ್ಸಿಗರು ದೂರು ನೀಡಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ’ ಪ್ರತಿಕ್ರಿಯಿಸಿದ ಡಿ.ಕೆ.ಶಿ, ‘ಇಲ್ಲಿ ಯಾರೂ ಕೂಡ ಬ್ರಾಂಡ್ ಇಲ್ಲ’ ಎಂದರು.

‘ನಮ್ಮ ನೆರಳನ್ನೇ ನಂಬೋದಕ್ಕೆ ಆಗ್ತಿಲ್ಲ. 30–40 ವರ್ಷ ಒಂದೇ ಪಕ್ಷದಲ್ಲಿದ್ದವರು, ಇದೀಗ ಬೇರೆ ಬೇರೆ ಪಾರ್ಟಿಗೆ ಹೋಗ್ತಿದ್ದಾರೆ. ಹೊಸಬರನ್ನು ಬೆಳೆಸ್ತಾವ್ರೇ, ಹಳಬರು ಕೂತವ್ರೇ. ಹಾಗಾಗಿ ಮುಂದೆ ಏನಾಗಲಿದೆ ಎಂಬುದು ಗೊತ್ತಾಗಲಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

ADVERTISEMENT

‘ಬಿಜೆಪಿ ಸಂಸ್ಕೃತಿ ಎಲ್ಲರಿಗೂ ಗೊತ್ತು. ಅವರು ಓದಿದ ಪುಸ್ತಕದ ಸಂಸ್ಕೃತಿಯದು. ಬದಲಾಯಿಸೋಕೆ ಆಗುತ್ತಾ ? ನನ್ನ ವಿರುದ್ಧವೂ ಮಾತಾಡಿದವನ ಮೇಲೆ ನಾನು ಕೇಸ್ ಹಾಕಿದ್ದೆ. ಅದು ನ್ಯಾಯಾಲಯದಲ್ಲಿದೆ’ ಎಂದು ಯತ್ನಾಳ ದೊರೆಸ್ವಾಮಿ ಬಗ್ಗೆ ನೀಡಿರುವ ಹೇಳಿಕೆಗೆ ಡಿಕೆಶಿ ಖಾರವಾಗಿ ಪ್ರತಿಕ್ರಿಯಿಸಿದರು.

ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕದ ಕುರಿತಂತೆ ಕೇಳುತ್ತಿದ್ದಂತೆ, ‘ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ. ಶಾಸಕನಾಗಿದ್ದೇನೆ. ಹೈಕಮಾಂಡ್‌ ಅಥವಾ ದಿನೇಶ್‌ ಗುಂಡೂರಾವ್‌ ಇದಕ್ಕೆ ಉತ್ತರಿಸಬಲ್ಲರು’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.