ADVERTISEMENT

ನಿವೃತ್ತ ಪೊಲೀಸ್‌ ಅಧಿಕಾರಿ ಶಮಿ ಉರ್‌ ರೆಹಮಾನ್‌ಗೆ ₹ 50 ಲಕ್ಷ ದಂಡ; 4 ವರ್ಷ ಜೈಲು

4 ವರ್ಷ ಜೈಲು ವಿಧಿಸಿದ ನ್ಯಾಯಾಲಯ– ಪತ್ನಿಗೂ ಮೂರು ವರ್ಷ ಸೆರೆವಾಸ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 15:52 IST
Last Updated 2 ಆಗಸ್ಟ್ 2022, 15:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಶಮಿ ಉರ್‌ ರೆಹಮಾನ್‌ ಅಪರಾಧಿ ಎಂದು ಸಾರಿರುವ ನ್ಯಾಯಾಲಯ, ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಅಧಿಕಾರಿಗೆ ₹ 50 ಲಕ್ಷ ದಂಡ ವಿಧಿಸುವುದರ ಜತೆಗೆ, ಅಕ್ರಮ ಆಸ್ತಿ ಸಂಪಾದನೆಗೆ ನೆರವು ನೀಡಿದ ಅಪರಾಧಕ್ಕಾಗಿ ನಿವೃತ್ತ ಅಧಿಕಾರಿಯ ಪತ್ನಿಗೆ ಮೂರು ವರ್ಷ ಸಾಮಾನ್ಯ ಜೈಲು ಶಿಕ್ಷೆ ವಿಧಿಸಲಾಗಿದೆ.

ಶಮಿ ಉರ್‌ ರೆಹಮಾನ್‌ 2006ರಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ಆಗಿದ್ದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು, 2006ರ ಮಾರ್ಚ್‌ 14ರಂದು ದಾಳಿಮಾಡಿ ಶೋಧ ನಡೆಸಿದ್ದರು. ₹ 79.79 ಲಕ್ಷದಷ್ಟು (ಶೇಕಡ 230.96ರಷ್ಟು) ಅಕ್ರಮ ಆಸ್ತಿ ಹೊಂದಿದ ಆರೋಪದಡಿ ಶಮಿ ಉರ್‌ ರೆಹಮಾನ್‌ ಮತ್ತು ಅವರ ಪತ್ನಿ ಬಿಲ್‌ಕಿಶ್‌ ಜಹಾನ್‌ ಅಲಿಯಾಸ್‌ ಸರ್ತಾಜ್‌ ಬೇಗಂ ವಿರುದ್ಧ ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆಯನ್ನು ಜುಲೈ 30ರಂದು ಪೂರ್ಣಗೊಳಿಸಿದ ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ. ಲಕ್ಷ್ಮೀನಾರಾಯಣ ಭಟ್‌, ‘ಶಮಿ ಉರ್‌ ರೆಹಮಾನ್‌ ದಂಪತಿ ಅಪರಾಧಿಗಳು’ ಎಂದು ಸಾರಿದರು.

ನಿವೃತ್ತ ಪೊಲೀಸ್‌ ಅಧಿಕಾರಿಗೆ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 50 ಲಕ್ಷ ದಂಡ ವಿಧಿಸಿದ ನ್ಯಾಯಾಲಯ, ದಂಡ ಪಾವತಿಗೆ ತಪ್ಪಿದಲ್ಲಿ ಆರು ತಿಂಗಳ ಸಾಮಾನ್ಯ ಶಿಕ್ಷೆ ವಿಧಿಸುವಂತೆ ಆದೇಶಿಸಿತು. ಪತ್ನಿಗೆ ಮೂರು ವರ್ಷಗಳ ಸಾಮಾನ್ಯ ಜೈಲು ಶಿಕ್ಷೆ ಮತ್ತು ₹ 50,000 ದಂಡ ವಿಧಿಸಿತು. ದಂಡ ಪಾವತಿಗೆ ತಪ್ಪಿದಲ್ಲಿ ಎರಡು ತಿಂಗಳ ಸಾಮಾನ್ಯ ಜೈಲು ಶಿಕ್ಷೆ ವಿಧಿಸುವಂತೆ ಆದೇಶಿಸಿತು.

ಲೋಕಾಯುಕ್ತ ಪೊಲೀಸರು ದಾಳಿಮಾಡಿದ ಸಂದರ್ಭದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ಹುದ್ದೆಯಲ್ಲಿ ಶಮಿ ಉರ್‌ ರೆಹಮಾನ್‌, ನಂತರ ಡಿವೈಎಸ್‌ಪಿ ಹುದ್ದೆಗೆ ಬಡ್ತಿ ಪಡೆದು ನಿವೃತ್ತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.