
ಜಿ. ಪರಮೇಶ್ವರ
ಬೆಂಗಳೂರು: ‘ಹೈಕಮಾಂಡ್ ತೀರ್ಮಾನಿಸಿದರೆ ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆ ಕುರಿತ ಚರ್ಚೆಗೆ ಸಿದ್ದರಾಮಯ್ಯ ಹೊಸ ಆಯಾಮ ನೀಡಿದ್ದಾರೆ. ಆ ಬೆನ್ನಲ್ಲೆ, ಸಚಿವರಾದ ಜಿ. ಪರಮೇಶ್ವರ ಮತ್ತು ಎಚ್.ಸಿ. ಮಹದೇವಪ್ಪ ರಹಸ್ಯ ಸಭೆ ನಡೆಸಿರುವುದು ಕಾಂಗ್ರೆಸ್ ಪಾಳಯದಲ್ಲಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಮಹದೇವಪ್ಪ ಅವರ ನಿವಾಸಕ್ಕೆ ಮಂಗಳವಾರ ಬೆಳಿಗ್ಗೆ ತೆರಳಿದ ಪರಮೇಶ್ವರ ಒಂದು ಗಂಟೆಗೂ ಹೆಚ್ಚು ಸಮಾಲೋಚನೆ ನಡೆಸಿದರು. ಸಭೆಯ ನಂತರ ಉಭಯ ನಾಯಕರು, ‘ನಮ್ಮದು ರಾಜಕೀಯ ಸಭೆಯಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ, ಸಚಿವರ ಈ ನಡೆ ಕುತೂಹಲ ಕೆರಳಿಸಿದೆ. ದಲಿತ ಸಮಾವೇಶ ಆಯೋಜಿಸಿ ‘ಶಕ್ತಿ ಪ್ರದರ್ಶನ’ಕ್ಕೆ ಸಚಿವರು ಮುಂದಾಗಿದ್ದು, ಈ ಬಗ್ಗೆ ಇಬ್ಬರೂ ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಸಭೆಯ ನಂತರ ಮಾತನಾಡಿದ ಪರಮೇಶ್ವರ, ‘ನಮ್ಮ ದೃಷ್ಟಿಯಿಂದ ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಅದೇನೇ ಇದ್ದರೂ ನಾಯಕತ್ವ ಬದಲಾವಣೆ ಕುರಿತ ಗೊಂದಲವನ್ನು ಹೈಕಮಾಂಡ್ ಬಗೆಹರಿಸಲಿ’ ಎಂದು ಆಗ್ರಹಿಸಿದರು.
‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾವೆಲ್ಲರೂ ಸೇರಿ ಸಿದ್ದರಾಮಯ್ಯ ಅವರನ್ನು ಐದು ವರ್ಷಗಳಿಗೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದೇವೆ. ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್‌ನಿಂದಾಗಲಿ, ಬೇರೆ ಯಾರಿಂದಲೂ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಮುಂದೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೊ ಅದನ್ನು ಒಪ್ಪಿಕೊಳ್ಳುತ್ತೇವೆ’ ಎಂದರು.
ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಪರಮೇಶ್ವರ, ‘ಅವರ ಹೇಳಿಕೆಯಲ್ಲಿ ತಪ್ಪೇನಿದೆ? ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ಹೈಕಮಾಂಡ್‌ಗೆ ಎಲ್ಲವೂ ಗೊತ್ತಿದೆ. ಸಂದರ್ಭ ಬಂದಾಗ ನಾಯಕತ್ವಕ್ಕೆ ಸಂಬಂಧಿಸಿದ ಎಲ್ಲ ಗೊಂದಲಗಳನ್ನು ಬಗೆಹರಿಸುವಂತೆ ನಾನೂ ಹೈಕಮಾಂಡ್‌ಗೆ ಹೇಳುತ್ತೇನೆ’ ಎಂದೂ ಹೇಳಿದರು.
‘ದಲಿತ ಸಮುದಾಯದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಶೀಘ್ರದಲ್ಲೇ ದಲಿತ ಸಮಾವೇಶ ನಡೆಸಲಾಗುವುದು’ ಎಂದು ಪರಮೇಶ್ವರ ಇದೇ ವೇಳೆ ಪುನರುಚ್ಚರಿಸಿದರು.
ದಲಿತ ಮುಖ್ಯಮಂತ್ರಿ ಕುರಿತ ಪ್ರಶ್ನೆಗೆ, ‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಗಲು ಬಹಳಷ್ಟು ಸಮರ್ಥರಿದ್ದಾರೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೊ ನೋಡಬೇಕು’ ಎಂದರು. ಮಹದೇವಪ್ಪ ಕೂಡ, ‘ದಲಿತ ಮುಖ್ಯಮಂತ್ರಿ ಸ್ಥಾನ ಕೇಳುವ ಸನ್ನಿವೇಶ ಬಂದಾಗ ಮಾತನಾಡುತ್ತೇನೆ’ ಎಂದು ಮಾರ್ಮಿಕವಾಗಿ ಹೇಳಿದರು.
ಮಹದೇವಪ್ಪ ಮತ್ತು ಪರಮೇಶ್ವರ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ, ‘ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ದಲಿತ ಸಮಾವೇಶ ಮಾಡಬೇಕೆಂಬ ವಿಚಾರ ಬಂದಿದೆ. ಆದರೆ, ಸಮಾಜದ ಸಮಾವೇಶ ಮಾಡಬೇಕೆ ಅಥವಾ ಪಕ್ಷದ ಸಮಾವೇಶ ಮಾಡಬೇಕೆ ಎಂಬ ಬಗ್ಗೆ ಚರ್ಚೆಯಾಗಿಲ್ಲ’ ಎಂದರು.
‘ರಾಜಕೀಯದಲ್ಲಿ ಯಾರೂ ಯಾರಿಗೂ ಅನಿವಾರ್ಯರಲ್ಲ. ಇಂಥವರಿದ್ದರೆ ಮಾತ್ರ ಸಂಸ್ಥೆ ನಡೆಯುತ್ತದೆ ಎನ್ನುವುದು ಅಂಧಾಭಿಮಾನ. ಹೊಗಳುಭಟ್ಟತನವು ಸರ್ವಾಧಿಕಾರವನ್ನು ಸೃಷ್ಟಿಸುತ್ತದೆ’ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
‘ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ’ ಎಂದು ಶಾಸಕ ಕೆ.ಎನ್. ರಾಜಣ್ಣ ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು.
‘ಗಾಂಧಿ ಭಾರತ’ ಶತಮಾನೋತ್ಸವದ ಅಂಗವಾಗಿ ರಾಜ್ಯದಾದ್ಯಂತ ನಿರ್ಮಿಸಲು ಉದ್ದೆಶಿಸಿರುವ 100 ಕಾಂಗ್ರೆಸ್ ಕಚೇರಿ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನ. 20ರಂದು ರಾಜ್ಯಕ್ಕೆ ಬರುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಅದೇ ದಿನ ರೇಸ್ ಕೋರ್ಸ್ ರಸ್ತೆಯಲ್ಲಿ, ಕಾಂಗ್ರೆಸ್ ಭವನ ಇರುವ ಜಾಗದಲ್ಲಿ ವಾಣಿಜ್ಯ ಕಟ್ಟಡ ಮತ್ತು ಪಕ್ಷದ ಕಚೇರಿಗೆ ಸ್ಥಳಾವಕಾಶ ಒದಗಿಸಲು ನಿರ್ಮಿಸಲಾಗುವ ಕಟ್ಟಡಕ್ಕೂ ಶಂಕು ಸ್ಥಾಪನೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಈ ವೇಳೆ ಉಪಸ್ಥಿತರಿರಲಿದ್ದಾರೆ ಎಂದೂ ಮೂಲಗಳು ಹೇಳಿವೆ.
ಸಿದ್ದರಾಮಯ್ಯ ಅವರ ನೇತೃತ್ವ ನಮಗೆ ಅವಶ್ಯವಿದೆ. ಇಂದು, ಮುಂದೆಯೂ ಅವರ ಆಶೀರ್ವಾದ ಬೇಕು. ರಾಜಕೀಯದಲ್ಲಿ ಯಾವುದೇ ನಿವೃತ್ತಿ ಇಲ್ಲ.–ಸತೀಶ ಜಾರಕಿಹೊಳಿ, ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.