ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ
(ಪಿಟಿಐ ಚಿತ್ರ)
ಬೆಂಗಳೂರು: ‘ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಒಕ್ಕಲಿಗರಿಗೆ, ಲಿಂಗಾಯತರಿಗೆ ಎಷ್ಟು ಬಾರಿ ನೀಡಬೇಕು? ದಲಿತರು ಈ ಸ್ಥಾನ ಪಡೆಯುವುದು ಯಾವಾಗ’ ಎಂದು ಕರ್ನಾಟಕ ನವ ಜಾಗೃತಿ ವೇದಿಕೆಯ ಅಧ್ಯಕ್ಷರೂ ಆಗಿರುವ ದಲಿತ ಮುಖಂಡ ಅನಂತರಾಯಪ್ಪ ಪ್ರಶ್ನಿಸಿದರು.
ಅಂಬೇಡ್ಕರ್ ಭವನದಲ್ಲಿ ನಡೆದ ‘ಸಂವಿಧಾನದ ಮೇಲೆ ದಾಳಿ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘12 ಬಾರಿ ಲಿಂಗಾಯತ, ಎಂಟು ಬಾರಿ ಒಕ್ಕಲಿಗ ಸಮುದಾಯವರು ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ರಾಜ್ಯದಲ್ಲಿ ಶೇ 25ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಒಮ್ಮೆಯೂ ಈ ಅವಕಾಶ ಸಿಕ್ಕಿಲ್ಲ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುದ್ದೆ ತ್ಯಜಿಸುವ ಸಂದರ್ಭ, ಅನಿವಾರ್ಯತೆ ಉಂಟಾದರೆ, ಸಂವಿಧಾನ ವಿರೋಧಿಗಳನ್ನು ಹಿಮ್ಮೆಟ್ಟಿಸುವ ಧೈರ್ಯ, ಸಾಮರ್ಥ್ಯ, ಚಾಣಾಕ್ಷತನ ಇರುವಂಥ ದಲಿತರೊಬ್ಬರಿಗೆ ಆ ಸ್ಥಾನವನ್ನು ನೀಡಬೇಕು. ಸಂವಿಧಾನವನ್ನು ರಕ್ಷಿಸುವವರ ಕಡೆಗೆ ಗಮನಹರಿಸದೆ ಅಧಿಕಾರ ಹಿಡಿಯಲು, ಅಧಿಕಾರ ಕೈಗೆ ಬರುತ್ತಿದ್ದಂತೆ ಅದನ್ನು ಭದ್ರಪಡಿಸಿಕೊಳ್ಳಲು, ತಮ್ಮ ಆಸ್ತಿಪಾಸ್ತಿ ರಕ್ಷಿಸಲು ರಾಜಕೀಯ ಮಾಡುವವರನ್ನು ದೂರ ಇಡಬೇಕು’ ಎಂದೂ ಅವರು ಹೇಳಿದರು.
ವೇದಿಕೆಯ ಉಪಾಧ್ಯಕ್ಷ ಬಿ.ಜಿ. ಲೋಕೇಶ್, ಮುಖಂಡರಾದ ಚಂದ್ರಶೇಖರ್, ಸಾಹಿತಿ ರಾಜಶೇಖರ ಮುಂತಾದವರು ಕಾರ್ಯಕ್ರಮದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.