ADVERTISEMENT

ಲಾಕ್‌ಡೌನ್‌ನಿಂದ ಮನೆಯಲ್ಲಿರುವ ಮಕ್ಕಳ ಕಣ್ಣಿಗೆ ಹಾನಿ!

ಆಧುನಿಕ ಉಪಕರಣಗಳ ಅತಿಯಾದ ಬಳಕೆಯಿಂದ ಹೆಚ್ಚುತ್ತಿದೆ ಕಣ್ಣಿನ ಸಮಸ್ಯೆ

ವರುಣ ಹೆಗಡೆ
Published 16 ಮೇ 2020, 20:15 IST
Last Updated 16 ಮೇ 2020, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕು ತಗಲುವ ಭೀತಿಯಿಂದಾಗಿ ಮಕ್ಕಳು ಈ ಬಾರಿಯ ಬೇಸಿಗೆ ರಜೆಯನ್ನು ಮನೆಯಲ್ಲಿಯೇ ಕಳೆಯುತ್ತಿದ್ದಾರೆ. ಆದರೆ, ಈ ಅವಧಿಯಲ್ಲಿ ಸಮಯ ಕಳೆಯಲು ಮೊಬೈಲ್ ಹಾಗೂ ಕಂಪ‍್ಯೂಟರ್‌ಗಳನ್ನು ಅತಿಯಾಗಿ ಬಳಸುತ್ತಿರುವ ಪರಿಣಾಮ ಅವರಲ್ಲಿ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದೆ.

ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ (ಎನ್‌ಪಿಸಿಬಿ) ಅಡಿಯಲ್ಲಿ ಆರೋಗ್ಯ ಇಲಾಖೆ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ದೃಷ್ಟಿದೋಷ ಸಮಸ್ಯೆಯನ್ನು ಪತ್ತೆ ಮಾಡಿ, ಅಗತ್ಯ ಚಿಕಿತ್ಸೆ ಒದಗಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಡಿ ಕಳೆದ ಐದು ವರ್ಷದಲ್ಲಿ 6 ಲಕ್ಷಕ್ಕೂ ಅಧಿಕ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಆಧುನಿಕ ಉಪಕರಣಗಳ ಅತಿಯಾದ ಬಳಕೆ ಎಂದು ನೇತ್ರ ತಜ್ಞರು ಸ್ಪಷ್ಟಪಡಿಸಿದ್ದಾರೆ. ಈ ಬಾರಿ ಬೇಸಿಗೆ ರಜೆಯಲ್ಲಿ ಮಕ್ಕಳು ದಿನದ ಬಹುತೇಕ ಅವಧಿಯನ್ನು ಕಂಪ್ಯೂಟರ್, ಟಿ.ವಿ, ಟ್ಯಾಬ್‌ ಹಾಗೂ ಮೊಬೈಲ್‌ಗಳೊಂದಿಗೆ ಕಳೆಯುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಕ್ಕಳಲ್ಲಿ ದೃಷ್ಟಿದೋಷ ಕಾಣಿಸಿಕೊಳ್ಳುವ ಆತಂಕ ಶುರುವಾಗಿದೆ. ‌

ಕೆಲ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಯನ್ನೂ ಪ್ರಾರಂಭಿಸಿವೆ. ಇದರಿಂದಾಗಿ ಕಂಪ್ಯೂಟರ್‌ ಮುಂದೆ ಕೆಲವು ಗಂಟೆಗಳು ಸಮಯ ಕಳೆಯಬೇಕಾಗಿದೆ. ಇದು ಕಣ್ಣಿಗೆ ಇನ್ನಷ್ಟು ಆಯಾಸವಾಗುವಂತೆ ಮಾಡಲಿದೆ.ಕಣ್ಣುರಿ, ಕಣ್ಣಿನಲ್ಲಿ ಗೀರು, ತುರಿಕೆ, ಕೆಂಪಾಗುವುದು, ನೀರು ಬರುವುದು, ಒಣಗುವುದು, ತಲೆನೋವು ಮುಂತಾದ ಸಮಸ್ಯೆಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಮಕ್ಕಳ ಪಾಲಕರು ಟೆಲಿ ಕನ್ಸ್‌ಲ್ಟೇಷನ್‌ ಮೂಲಕ ವೈದ್ಯರನ್ನು ಸಂಪರ್ಕಿಸಲಾರಂಭಿಸಿದ್ದಾರೆ. ನಾರಾಯಣ ನೇತ್ರಾಲಯ, ಡಾ. ಅಗರವಾಲ್ಸ್ ಐ ಹಾಸ್ಪಿಟಲ್, ಶಂಕರ ಕಣ್ಣಿನ ಆಸ್ಪತ್ರೆ, ಬೆಂಗಳೂರು ನೇತ್ರಾಲಯ ಸೇರಿದಂತೆನಗರದ ಪ್ರಮುಖ ಆಸ್ಪತ್ರೆಗಳಲ್ಲಿಮಕ್ಕಳ ಕಣ್ಣಿನ ಸಮಸ್ಯೆ ಬಗ್ಗೆ ನಿತ್ಯ ಸರಾಸರಿ 10ರಿಂದ 15 ಮಂದಿ ವಿಚಾರಿಸುತ್ತಿದ್ದಾರೆ.

ADVERTISEMENT

ನಿರ್ಲಕ್ಷ್ಯ ಬೇಡ:‘ಪ್ರತಿನಿತ್ಯ ಮಕ್ಕಳು ಕನಿಷ್ಠ ಒಂದು ಗಂಟೆ ಹೊರಗಡೆ ಆಟ ಆಡಬೇಕು. ಇದರಿಂದ ಕಣ್ಣಿನ ಮೇಲಿನ ಆಯಾಸ ಕಡಿಮೆ ಆಗುತ್ತದೆ. ಆದರೆ, ಕೊರೊನಾ ಸೋಂಕು ಭೀತಿಯಿಂದಾಗಿ ಸಾಧ್ಯವಾದಷ್ಟು ಮನೆಯ ಒಳಗಡೆಯೇ ಇರಬೇಕಾಗಿದೆ. ಇದರಿಂದಾಗಿ ಕಣ್ಣಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಬೀರುವ ಸಾಧ್ಯತೆಗಳಿವೆ.ಕೃತಕ ಬೆಳಕು, ಕಂಪ್ಯೂಟರ್ ಹಾಗೂ ಮೊಬೈಲ್ ವೀಕ್ಷಣೆಯಿಂದ ಕಣ್ಣಿನ ಪಸೆ ಒಣಗುವಿಕೆ ಹಾಗೂ ಉರಿ ಕಾಣಿಸಿಕೊಂಡು ಅಲರ್ಜಿ ಉಂಟಾಗುತ್ತದೆ. ಕಣ್ಣಿನ ಸಮಸ್ಯೆಯನ್ನು ನಿರ್ಲಕ್ಷಿಸಬಾರದು’ ಎಂದುಡಾ. ಅಗರವಾಲ್ ಐ ಹಾಸ್ಟಿಟಲ್‌ನ ನೇತ್ರ ತಜ್ಞಡಾ. ರವಿ ತಿಳಿಸಿದರು.

ಸಮಸ್ಯೆ ಹೆಚ್ಚಳಕ್ಕೆ ಏನು ಕಾರಣ?

– ಅತಿಯಾದ ಮೊಬೈಲ್ ಫೋನ್ ಬಳಕೆ

– ಟಿ.ವಿ, ಕಂಪ್ಯೂಟರ್ ವೀಕ್ಷಣೆ

– ವಿಡಿಯೊ ಗೇಮ್‌ ಆಡುವುದು

– ಕಣ್ಣಿಗೆ ವಿಶ್ರಾಂತಿ ನೀಡದಿರುವುದು

– ಆನ್‌ಲೈನ್ ತರಗತಿ

***

ಪಾಲಕರು ಮಕ್ಕಳಿಗೆ ಮೊಬೈಲ್‌ನಂತಹ ಉಪಕರಣವನ್ನು ನೀಡುವುದರಿಂದ ಕಣ್ಣಿನ ಸಮಸ್ಯೆ ಹೆಚ್ಚುತ್ತಿದೆ. ಪುಸ್ತಕ ಓದುವುದು ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು

ಡಾ. ಸುಜಾತಾ ರಾಥೋಡ್, ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.