ADVERTISEMENT

ಅಪಾಯಕಾರಿ ನೀತಿಗಳಿಂದ ಅಬಕಾರಿ ಆದಾಯದ ಮೂಲಕ್ಕೇ ಕೊಡಲಿ ಪೆಟ್ಟು: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 18 ಮೇ 2025, 11:18 IST
Last Updated 18 ಮೇ 2025, 11:18 IST
ಬಿಯರ್ ಪ್ರವಾಹಕ್ಕೆ ಮೂರು ಬಲಿ!
ಬಿಯರ್ ಪ್ರವಾಹಕ್ಕೆ ಮೂರು ಬಲಿ!   

ಬೆಂಗಳೂರು: ಮದ್ಯ ಉತ್ಪಾದನೆ, ಬಾಟ್ಲಿಂಗ್‌, ಮಾರಾಟ ಮಳಿಗೆಗಳು ಸೇರಿ ಎಲ್ಲದರ ಮೇಲಿನ ಶುಲ್ಕಗಳನ್ನು ಶೇ 100 ರಷ್ಟು ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಇಂತಹ ಅಪಾಯಕಾರಿ ನೀತಿಗಳಿಂದ ಅಬಕಾರಿ ಆದಾಯದ ಮೂಲಕ್ಕೇ ಕೊಡಲಿ ಪೆಟ್ಟು ಬೀಳಲಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶುಲ್ಕಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅಬಕಾರಿ ಕಾನೂನುಗಳಿಗೆ ತಿದ್ದುಪಡಿ ಮಾಡಿ ಕರಡು ನಿಯಮಗಳ ಅಧಿಸೂಚನೆ ಪ್ರಕಟಿಸಿದ್ದು, ಜುಲೈ 1 ರಿಂದ ಪರಿಷ್ಕೃತ ದರಗಳು ಜಾರಿಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ದರ ಮತ್ತು ಸನ್ನದು ಶುಲ್ಕ ಏರಿಕೆಗೂ ಒಂದು ಮಾನದಂಡ ಇರುತ್ತದೆ. ಆದರೆ, ಒಂದೇ ವರ್ಷದಲ್ಲಿ ಮದ್ಯ ಮಾರಾಟ ಮತ್ತು ಸನ್ನದು ಶುಲ್ಕ ಅಡ್ಡಾದಿಡ್ಡಿ ಹೆಚ್ಚಿಸುತ್ತಿರುವುದರಿಂದ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಬಜೆಟ್‌ನಲ್ಲಿ ಯಾವುದೇ ತೆರಿಗೆ ಹಾಕಿಲ್ಲ ಎಂದು ಬೆನ್ನು ತಟ್ಟಿಕೊಂಡು ನಂತರ ಆಲ್ಕೋಹಾಲ್‌ ದರಗಳನ್ನು ಯದ್ವಾತದ್ವಾ ಹೆಚ್ಚಿಸಿದ್ದಾರೆ. ಅದರಲ್ಲೂ ಬಿಯರ್‌ ದರವನ್ನು ವರ್ಷದಲ್ಲಿ ಎರಡು– ಮೂರು ಸಲ ಹೆಚ್ಚಿಸಲಾಗಿದೆ. ಈ ಮೂಲಕ ಗ್ರಾಹಕರಿಗೆ ದೊಡ್ಡ ಹೊರೆ ಹೊರಿಸಲಾಗಿದೆ. ಮದ್ಯ ಪ್ರಿಯರು ಪ್ರತಿಭಟಿಸುವುದಿಲ್ಲ ಎಂಬ ಕಾರಣಕ್ಕೆ ಇಂತಹ ಕ್ರಮ ಅನುಸರಿಸುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಸರಿಯಾದ ಆರ್ಥಿಕ ಶಿಸ್ತು ಮತ್ತು ಸಿದ್ಧತೆಗಳಿಲ್ಲದೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಇದರಿಂದ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಬೊಕ್ಕಸ ಬರಿದಾಗಿ ಸರ್ಕಾರ ದಿವಾಳಿಯಾಗಿದೆ. ಇದನ್ನು ಹೇಗಾದರೂ ಮಾಡಿ ಸರಿಪಡಿಸಿಕೊಳ್ಳಲು ಹೆಣಗಾಡುತ್ತಿರುವ ಸರ್ಕಾರ, ಸಿಕ್ಕ ಸಿಕ್ಕ ಎಲ್ಲ ವಸ್ತುಗಳ ದರಗಳನ್ನು ಹೆಚ್ಚಳ ಮಾಡಿದೆ. ಆದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಹೀಗಾಗಿ ಇಂತಹ ದರ ಮತ್ತು ಶುಲ್ಕ ಹೆಚ್ಚಳದಂತಹ ವಾಮಮಾರ್ಗಗಳ ಮೂಲಕ ಸರ್ಕಾರವು ಉದ್ಯಮವನ್ನು ಶೋಷಣೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಅಬಕಾರಿ ಇಲಾಖೆಗೆ ₹40 ಸಾವಿರ ಕೋಟಿ ಆದಾಯ ಸಂಗ್ರಹದ ಗುರಿ ನಿಗದಿ ಮಾಡಲಾಗಿದೆ. ಈ ಗುರಿ ತಲುಪಲು ಅಧಿಕಾರಿಗಳು ಎಲ್ಲ ಅವಕಾಶಗಳನ್ನು ಬಳಕೆ ಮಾಡುತ್ತಿದ್ದಾರೆ. ಆ ಮೂಲಕ ಉದ್ಯಮವನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಉದ್ಯಮದ ಹಿತದೃಷ್ಟಿಯಿಂದ ಈಗಲೂ ಕಾಲ ಮಿಂಚಿಲ್ಲ. ಅವೈಜ್ಞಾನಿಕ ಕ್ರಮಗಳನ್ನು ಬಿಟ್ಟು ಉದ್ಯಮ , ಮಾರಾಟಗಾರರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಬೇಕು. ಸನ್ನದು ಶುಲ್ಕ ಪರಿಷ್ಕರಣೆಯನ್ನು ಮರು ಪರಿಶೀಲಿಸಬೇಕು ಎಂದು ಅಶೋಕ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.