ADVERTISEMENT

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್: ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪಿಟಿಐ
Published 19 ಸೆಪ್ಟೆಂಬರ್ 2025, 19:14 IST
Last Updated 19 ಸೆಪ್ಟೆಂಬರ್ 2025, 19:14 IST
   

ನವದೆಹಲಿ: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿತು.

ಹೈಕೋರ್ಟ್ ಆದೇಶ ಪ್ರಶ್ನಿಸಿ ಬೆಂಗಳೂರಿನ ಎಚ್‌.ಎಸ್‌.ಗೌರವ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್‌ ಹಾಗೂ ಸಂದೀಪ್‌ ಮೆಹ್ತಾ ಪೀಠವು, ‘ಸಂವಿಧಾನದ ಪ್ರಸ್ತಾವನೆ ಏನು’ ಎಂದು ಪ್ರಶ್ನಿಸಿತು.

ಅರ್ಜಿ ವಜಾಗೊಳಿಸಲಾಗಿದೆ ಎಂದು ನ್ಯಾಯಪೀಠ ಪ್ರಕಟಿಸಿದ ಬಳಿಕವೂ ವಕೀಲರು ವಾದ ಮುಂದುವರಿಸಿದರು. ಆಗ ನ್ಯಾಯಪೀಠವು, ‘ಅರ್ಜಿ ವಜಾಗೊಳಿಸಲಾಗಿದೆ ಎಂದು ನಾವು ಮೂರು ಬಾರಿ ಹೇಳಿದ್ದೇವೆ. ಇನ್ನೂ ಎಷ್ಟು ಸಲ ಹೇಳಬೇಕು? ಮುಂದಿನ ಪ್ರಕರಣ’ ಎಂದು ಹೇಳಿತು.

ADVERTISEMENT

ಅರ್ಜಿದಾರರ ಪರ ವಕೀಲ ಪಿ.ಬಿ.ಸುರೇಶ್‌ ವಾದ ಆರಂಭಿಸುತ್ತಿದ್ದಂತೆಯೇ ನ್ಯಾಯಮೂರ್ತಿ ವಿಕ್ರಮ್‌ನಾಥ್‌ ಅವರು ಹೈಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿದರು. ‘2017ರ ದಸರಾ ಉದ್ಘಾಟನೆಗೆ ಸಾಹಿತಿ ನಿಸಾರ್ ಅಹಮದ್‌ ಅವರನ್ನು ಆಹ್ವಾನಿಸಲಾಗಿತ್ತು. ಬಾನು ಮುಷ್ತಾಕ್‌ ಅವರಿಗೆ ಆಹ್ವಾನ ನೀಡಿದ್ದನ್ನು ವಿರೋಧಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಅರ್ಜಿದಾರರ ಪೈಕಿ ಒಬ್ಬರು ಆಗ ನಿಸಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಇದು ಸರಿಯೇ ಅಥವಾ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಬಾನು ಅವರು ದಸರಾ ಉದ್ಘಾಟಿಸುವುದಕ್ಕೆ ನಮ್ಮ ತಕರಾರು ಇಲ್ಲ. ಅದು ಜಾತ್ಯತೀತ ಚಟುವಟಿಕೆ. ಆದರೆ, ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಪೂಜೆ ಮಾಡುವುದಕ್ಕೆ ನಮ್ಮ ಆಕ್ಷೇಪ ಇದೆ’ ಎಂದು ವಕೀಲರು ಗಮನ ಸೆಳೆದರು. ‘ಅದು ಸಂಪೂರ್ಣವಾಗಿ ಜಾತ್ಯತೀತ ಚಟುವಟಿಕೆ ಅಲ್ಲ. ಇದು ಧಾರ್ಮಿಕ ಅಥವಾ ಆಧ್ಯಾತ್ಮಿಕ ಕಾರ್ಯಕ್ರಮ’ ಎಂದು ಅವರು ವಾದಿಸಿದರು. ಆದಾಗ್ಯೂ, ಪೀಠವು, ‘ಇದು ರಾಜ್ಯದ ಕಾರ್ಯಕ್ರಮ’ ಎಂದು ವ್ಯಾಖ್ಯಾನಿಸಿತು.

ಈ ಕಾರ್ಯಕ್ರಮದಲ್ಲಿ ಎರಡು ಅಂಶಗಳಿವೆ. ಒಂದು ದಸರಾ ಉದ್ಘಾಟನೆ ಕಾರ್ಯಕ್ರಮ ಹಾಗೂ ಮತ್ತೊಂದು ಪೂಜಾ ಕಾರ್ಯಕ್ರಮ ಎಂದು ವಕೀಲರು ಪೀಠದ ಗಮನ ಸೆಳೆದರು.

‘ನೀವು ಅರ್ಜಿ ಸಲ್ಲಿಸಿದ್ದು ಏಕೆ? ಯಾವ ಆಧಾರದಲ್ಲಿ ಅರ್ಜಿ ಸಲ್ಲಿಸಿದ್ದೀರಿ’ ಎಂದು ಪೀಠ ಪ್ರಶ್ನಿಸಿತು. ‘ರಾಜ್ಯ ಸರ್ಕಾರದ ಈ ನಿರ್ಧಾರವು ಸಂವಿಧಾನದ 25ನೇ ವಿಧಿಯಲ್ಲಿನ ಅರ್ಜಿದಾರರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ’ ಎಂದು ವಕೀಲರು ಹೇಳಿದರು.

2017ರಲ್ಲಿ ಅರ್ಜಿದಾರರ ಹಕ್ಕಿನ ಮೇಲೆ ಪರಿಣಾಮ ಬೀರಿಲ್ಲವೇ ಎಂದು ಪೀಠ ಪ್ರಶ್ನಿಸಿತು.

ಸುಪ್ರೀಂ ಕೋರ್ಟ್‌ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿದ ವಕೀಲರು, ‘ಅವರು ನನ್ನ ಧಾರ್ಮಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು. ದೇವಸ್ಥಾನದ ಆವರಣದೊಳಗಿನ ಚಟುವಟಿಕೆಗಳನ್ನು ಉಲ್ಲೇಖಿಸಿದರು. ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ವಿಕ್ರಮ್‌ನಾಥ್ ಒತ್ತಿ ಹೇಳಿದರು.

ಮಾಜಿ ಸಂಸದ ಪ್ರತಾಪ್‌ಸಿಂಹ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಸೆಪ್ಟೆಂಬರ್‌ 15ರಂದು ವಜಾಗೊಳಿಸಿತ್ತು.

ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮ ಸಂಪೂರ್ಣ ರಾಜಕೀಯಪ್ರೇರಿತ. ಅವರು ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದಾರೆ. ಅಂತಹ ವ್ಯಕ್ತಿಯನ್ನು ಆಹ್ವಾನಿಸಿರುವುದು ಸರಿಯಲ್ಲ. ದಸರಾ ಸಮಾರಂಭ ಉದ್ಘಾಟಿಸಲು ಬಾನು ಅವರಿಗೆ ಅವಕಾಶ ನೀಡಬಹುದು. ಆದರೆ, ದೇವಸ್ಥಾನದ ಆವರಣದೊಳಗಿನ ಆಚರಣೆಗಳ ಭಾಗವಾಗಬಾರದು.
– ಸಿ.ಬಿ. ಸುರೇಶ್, ಅರ್ಜಿದಾರರ ಪರ ವಕೀಲ
ಮೈಸೂರು ದಸರಾ ಖಾಸಗಿ ಕಾರ್ಯಕ್ರಮವಲ್ಲ. ಇದನ್ನು ಆಯೋಜಿಸುತ್ತಿರುವುದು ರಾಜ್ಯ ಸರ್ಕಾರ. ರಾಜ್ಯ ಸರ್ಕಾರವು ಎ, ಬಿ ಮತ್ತು ಸಿ ನಡುವೆ ತಾರತಮ್ಯ ಮಾಡಲು ಹೇಗೆ ಸಾಧ್ಯ?
– ನ್ಯಾಯಮೂರ್ತಿ ವಿಕ್ರಮ್‌ನಾಥ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.