ADVERTISEMENT

ಸಾವು–ಬದುಕು ನಮ್ಮ ಕೈಯಲಿಲ್ಲ: ಹೀಗೆ ಹೇಳಿದ್ದೇಕೆ ರಮೇಶ ಜಾರಕಿಹೊಳಿ?

ಸಚಿವ ರಮೇಶ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 8:25 IST
Last Updated 27 ಜುಲೈ 2020, 8:25 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ಸಾವು–ಬದುಕು ನಮ್ಮ ಕೈಯಲ್ಲಿಲ್ಲ. ಕೊರೊನಾ ವಿರುದ್ಧ ಹೋರಾಡಿ ಸಾವು ತಡೆಯುವ ಪ್ರಯತ್ನ ಮಾಡುತ್ತಿದ್ದೇವೆ.

– ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಕುರಿತ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ನೀಡಿದ ಪ್ರತಿಕ್ರಿಯೆ ಇದು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸರ್ಕಾರದ ವರ್ಷಾಚರಣೆ ನೇರಪ್ರಸಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ADVERTISEMENT

‘ಕೋವಿಡ್ ಗಂಭೀರವಾದ ಸೋಂಕೇನಲ್ಲ. ಅದರೊಂದಿಗೇ ಬದುಕಬೇಕಾಗಿದೆ. ಮಾಧ್ಯಮದವರು ಬಿಮ್ಸ್‌ ಆಸ್ಪತ್ರೆ ಕೋವಿಡ್ ವಾರ್ಡ್‌ಗೆ ಹೋಗಿ ಬನ್ನಿ. ಪಿಪಿಇ ಕಿಟ್‌ ಧರಿಸದೆ ಹಾಗೆಯೇ ಹೋಗೋಣ ನಾನೂ ಬರುತ್ತೇನೆ. ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ಬಿಮ್ಸ್‌ನಲ್ಲಿ ಅವ್ಯವಸ್ಥೆ ಇರುವ ಬಗ್ಗೆ ಸೋಂಕಿತರಿಂದ ದೂರುಗಳು ಬರುತ್ತಿವೆಯಲ್ಲಾ ಎನ್ನುವ ಪ್ರಶ್ನೆಗೆ, ‘ಬಿಮ್ಸ್ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಸರ್ಜರಿ ಮಾಡುತ್ತೇನೆ. ಕೊರೊನಾ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳ ವರ್ಗಾಯಿಸಿದರೆ ತಪ್ಪು ಸಂದೇಶ ಹೋಗುತ್ತದೆ. ಹೀಗಾಗಿ, ಬಿಟ್ಟಿದ್ದೇವೆ. ಆದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಅಧಿಕಾರಿಗಳದು ತಪ್ಪಿದ್ದಲ್ಲಿ ಅವರ ವಿರುದ್ಧವೂ ಕ್ರಮ ವಹಿಸಲಾಗುವುದು. ಚಿಕಿತ್ಸೆಗೆ ಸ್ಪಂದಿಸದ ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮ ಜರುಗಿಸಲು ಸೂಚಿಸಿದ್ದೇನೆ’ ಎಂದರು.

‘ಬಿಮ್ಸ್‌ ಎದುರು ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದರ ಹಿಂದೆ ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಮುಖ್ಯಮಂತ್ರಿ ಬದಲಾವಣೆ ಇಲ್ಲ:‘ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಬಿ.ಎಸ್. ಯಡಿಯೂರಪ್ಪ ಉತ್ತಮ ಆಡಳಿತ ನೀಡಿ, ಅಧಿಕಾರದ ಅವಧಿ ಪೂರ್ಣಗೊಳಿಸುತ್ತಾರೆ. 2023ರ ವಿಧಾನಸಭೆ ‌ಚುನಾವಣೆಯನ್ನೂ ಅವರ ನೇತೃತ್ವದಲ್ಲೇ ಎದುರಿಸಲಾಗುವುದು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಮ್ಮ ಪಕ್ಷದ ನಾಯಕರು. ಹೀಗಾಗಿ ಅವರನ್ನು ಭೇಟಿ ಮಾಡಿದ್ದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕೇಂದ್ರ ಸಚಿವ ನಿತನ್ ಗಡ್ಕರಿ ಅವರನ್ನು ಅಭಿವೃದ್ಧಿ ಯೋಜನೆಗಳ ವಿಚಾರವಗಿ ಭೇಟಿಯಾಗಿದ್ದಾರೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎನ್ನುವುದು ಮಾಧ್ಯಮದ ಸೃಷ್ಟಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.