ADVERTISEMENT

ಆರು ಡೀಮ್ಡ್‌ ವಿ.ವಿ: ರಾಜ್ಯ ಕೋಟಾ ಶೂನ್ಯ, ಮೀಸಲಾತಿಯೂ ಇಲ್ಲ

ರಾಜ್ಯಕ್ಕೆ 188 ಸೀಟು ಬಿಟ್ಟುಕೊಟ್ಟ ಉಳಿದ ವಿಶ್ವವಿದ್ಯಾಲಯಗಳು

ಚಂದ್ರಹಾಸ ಹಿರೇಮಳಲಿ
Published 5 ಅಕ್ಟೋಬರ್ 2025, 1:41 IST
Last Updated 5 ಅಕ್ಟೋಬರ್ 2025, 1:41 IST
<div class="paragraphs"><p>–ಪ್ರಾತಿನಿಧಿಕ ಚಿತ್ರ</p></div>

–ಪ್ರಾತಿನಿಧಿಕ ಚಿತ್ರ

   

–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿನ 12 ಡೀಮ್ಡ್‌ ವಿಶ್ವವಿದ್ಯಾಲಯಗಳು 2,412 ವೈದ್ಯಕೀಯ ಸೀಟುಗಳನ್ನು ಹೊಂದಿದ್ದರೂ ರಾಜ್ಯ ಕೋಟಾಕ್ಕೆ ಬಿಟ್ಟು ಕೊಟ್ಟ ಸೀಟು 188 ಮಾತ್ರ. ಉಳಿದ ಸೀಟುಗಳ ಪ್ರವೇಶಕ್ಕೆ ಮೀಸಲಾತಿಯೂ ಇಲ್ಲ.

ADVERTISEMENT

ರಾಜ್ಯದಲ್ಲೇ ಸ್ಥಾಪನೆಯಾಗಿ, ರಾಜ್ಯ ಸರ್ಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯುವ ಡೀಮ್ಡ್‌ ವಿಶ್ವವಿದ್ಯಾಲಯಗಳು ರಾಜ್ಯದ ವಿದ್ಯಾರ್ಥಿಗಳಿಗೆ ಸೀಟು ನೀಡದೆ ಅನ್ಯಾಯ ಮಾಡುತ್ತಿವೆ ಎಂಬ ಆರೋಪ ಪೋಷಕರದ್ದಾಗಿದೆ.

ಈ ವಿಶ್ವವಿದ್ಯಾಲಯಗಳು ಮೀಸಲಾತಿ ಸೌಲಭ್ಯ ಕಲ್ಪಿಸದೆ ಪರಿಶಿಷ್ಟ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನೂ ಹೊರಗಿಟ್ಟಿವೆ. ಇತರೆ ಖಾಸಗಿ ಕಾಲೇಜುಗಳಂತೆ ರಾಜ್ಯ ಕೋಟಾದ ನಿಗದಿತ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬಿಟ್ಟು ಕೊಡಬೇಕು. ರಾಜ್ಯ ಕೋಟಾದ ವಿದ್ಯಾರ್ಥಿಗಳಿಗೆ ನೀಡುವಂತೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಅದಕ್ಕೆ ಅಗತ್ಯವಾದ ನಿಯಮ ರೂಪಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹಾಕಲು ವಿದ್ಯಾರ್ಥಿಗಳು, ಪೋಷಕರು ಅಭಿಯಾನ ಆರಂಭಿಸಿದ್ದಾರೆ.

ಡೀಮ್ಡ್‌ ಕಾಲೇಜುಗಳನ್ನು ಹೊರತುಪಡಿಸಿ ರಾಜ್ಯದಲ್ಲಿ 24 ಸರ್ಕಾರಿ ಕಾಲೇಜುಗಳು ಸೇರಿ ಒಟ್ಟು 58 ಕಾಲೇಜುಗಳಿಂದ 9,663 ವೈದ್ಯಕೀಯ ಸೀಟುಗಳು 2025–26ನೇ ಸಾಲಿಗೆ ರಾಜ್ಯದ ಕೋಟಾದಲ್ಲಿ ಲಭ್ಯವಾಗಿದ್ದವು. 12 ಡೀಮ್ಡ್‌ ವಿಶ್ವವಿದ್ಯಾಲಯಗಳು ನಿರಾಕ್ಷೇಪಣಾ ಪತ್ರ ಸೇರಿದಂತೆ ಕೆಲ ಸೌಲಭ್ಯಗಳನ್ನು ರಾಜ್ಯ ಸರ್ಕಾರದಿಂದ ಪಡೆಯುವಾಗ ಒಂದಷ್ಟು ಸೀಟುಗಳನ್ನು (188) ರಾಜ್ಯದ ವಿದ್ಯಾರ್ಥಿಗಳಿಗೆ ಬಿಟ್ಟುಕೊಟ್ಟಿವೆ. ಆದರೆ, ಇನ್ನು ಆರು ವಿಶ್ವವಿದ್ಯಾಲಯಗಳು ಒಂದೂ ಸೀಟು ಬಿಟ್ಟುಕೊಟ್ಟಿಲ್ಲ. ಅವುಗಳಲ್ಲಿ ಕೆಲವು ರಾಜಕಾರಣಿಗಳ ಒಡೆತನಕ್ಕೆ ಸೇರಿವೆ.  

‘ರಾಜ್ಯ ಸರ್ಕಾರದಿಂದ ಮೂಲಸೌಲಭ್ಯ, ನಿರಾಕ್ಷೇಪಣಾ ಪತ್ರ ಪಡೆಯುವ ಡೀಮ್ಡ್‌ ವಿಶ್ವವಿದ್ಯಾಲಯಗಳು ಐದು ವರ್ಷಗಳ ಕೋರ್ಸ್‌ನ ಒಂದು ವೈದ್ಯಕೀಯ ಸೀಟಿಗೆ ₹1 ಕೋಟಿಗೂ ಅಧಿಕ ಶುಲ್ಕ ಪಡೆಯುತ್ತವೆ. ಆರು ವಿಶ್ವವಿದ್ಯಾಲಯಗಳು ತಲಾ 250 ಸೀಟು, ನಾಲ್ಕು ವಿಶ್ವವಿದ್ಯಾಲಯಗಳು ತಲಾ 200 ಸೀಟು, ಉಳಿದ ಎರಡು ತಲಾ 150 ಸೀಟುಗಳಿಗೆ ಅನುಮತಿ ಪಡೆದಿವೆ. ಅಂದರೆ ಒಂದು ಬ್ಯಾಚ್‌ ವಿದ್ಯಾರ್ಥಿಗಳಿಂದ ಐದು ವರ್ಷಗಳಲ್ಲಿ ₹150 ಕೋಟಿಯಿಂದ ₹250 ಕೋಟಿಗೂ ಅಧಿಕ ಶುಲ್ಕವನ್ನು ಅಧಿಕೃತವಾಗಿ ಸಂಗ್ರಹಿಸುತ್ತವೆ. ಆದರೆ, ರಾಜ್ಯ ಕೋಟಾಕ್ಕೆ ಸೀಟು ಕೊಟ್ಟಿಲ್ಲ. ಮೀಸಲಾತಿ ಸೌಲಭ್ಯವನ್ನೂ ನೀಡುವುದಿಲ್ಲ. ಇಂತಹ ನಡೆಯಿಂದ ರಾಜ್ಯಕ್ಕೆ ಹಾಗೂ ರಾಜ್ಯದ ವಿದ್ಯಾರ್ಥಿಗಳಿಗೆ ಭಾರಿ ಅನ್ಯಾಯವಾಗುತ್ತಿದೆ’ ಎಂದು ದೂರುತ್ತಾರೆ ವಿದ್ಯಾರ್ಥಿ ಎಚ್‌.ಆರ್.ಹರಿಶಂಕರ್‌. 

ಎನ್‌ಆರ್‌ಐ ಕೋಟಾಕ್ಕೆ ಆಕ್ಷೇಪ

ರಾಜ್ಯದ ಸರ್ಕಾರಿ ಕಾಲೇಜುಗಳಿಗೆ 2025–26ನೇ ಸಾಲಿಗೆ ಲಭ್ಯವಾಗಿದ್ದ 400 ಹೆಚ್ಚುವರಿ ವೈದ್ಯಕೀಯ ಸೀಟುಗಳಲ್ಲಿ ಶೇ 15ರಷ್ಟನ್ನು ಅನಿವಾಸಿ ಭಾರತೀಯ ಕೋಟಾಕ್ಕೆ (ಎನ್‌ಆರ್‌ಐ) ಮೀಸಲಿಟ್ಟಿರುವ ಸರ್ಕಾರದ ನಿರ್ಧಾರವನ್ನು ಕರ್ನಾಟಕ ದಲಿತ ವೆಲ್‌ಫೇರ್‌ ಟ್ರಸ್ಟ್‌ ಖಂಡಿಸಿದೆ. 

ಎನ್‌ಎಂಸಿ ಬೆಳಗಾವಿ, ಚಿಕ್ಕಬಳ್ಳಾಪುರ, ಕಲಬುರಗಿ, ಹಾಸನ, ಮೈಸೂರು,  ರಾಯಚೂರು, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಗಳ ಸೀಟುಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೆಚ್ಚಳ ಮಾಡಿದೆ. ಸೀಟುಗಳನ್ನು ಮೀಸಲಾತಿಗೆ ಅನುಗುಣವಾಗಿ ಹಂಚಿಕೆ ಮಾಡಬೇಕಾದ ಸರ್ಕಾರವೇ ಅಧಿಕ ಶುಲ್ಕಕ್ಕೆ ಮಾರಾಟ ಮಾಡುತ್ತಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ. ಪಂಜಾಬ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಎಲ್ಲ ರಾಜ್ಯಗಳಿಗೂ ಅನ್ವಯ. ಹಾಗಾಗಿ, ಎನ್‌ಆರ್‌ಐ ಕೋಟಾ ರದ್ದು ಮಾಡಬೇಕು ಎಂದು ಟ್ರಸ್ಟ್‌ ಕಾರ್ಯದರ್ಶಿ ಕುಂದಾನಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.