
ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಕನಿಷ್ಠ ಶೇ 75ರಷ್ಟು ವಿದ್ಯಾರ್ಥಿಗಳ ದಾಖಲಾತಿ ಗುರಿ ನಿಗದಿ ಮಾಡಿ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರತಿ ವರ್ಷವೂ ಕಡಿಮೆಯಾಗುತ್ತಿದ್ದು, ಹಲವು ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಿರಾಸಕ್ತಿ ತೋರುತ್ತಿದ್ದಾರೆ. ಹಾಗಾಗಿ, ಪ್ರವೇಶ ಹೆಚ್ಚಳಕ್ಕೆ ಆಯಾ ಕಾಲೇಜುಗಳ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ಒಟ್ಟಾಗಿ ಶ್ರಮಿಸಬೇಕು. 2026–27ನೇ ಶೈಕ್ಷಣಿಕ ಸಾಲಿನಲ್ಲಿ ಪ್ರತಿ ಕಾಲೇಜುಗಳೂ ನಿಗದಿ ಮಾಡಿದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ 75ರಷ್ಟು ದಾಖಲಾತಿ ಪಡೆಯಬೇಕು. ಈಗಾಗಲೇ ಶೇ 75ರಷ್ಟು ದಾಖಲಾತಿ ಹೊಂದಿರುವ ಕಾಲೇಜುಗಳು ಕನಿಷ್ಠ ಶೇ 10ರಷ್ಟು ಹೆಚ್ಚಳ ಮಾಡಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.
ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಪ್ರತಿ ಕಾಲೇಜೂ ಪ್ರವೇಶ ಅಭಿಯಾನ ಹಮ್ಮಿಕೊಳ್ಳಬೇಕು. ಪ್ರವೇಶಾತಿ ಹೆಚ್ಚಿಸಲು ಪ್ರಾಂಶುಪಾಲರು ಸಮಿತಿಯನ್ನು ರಚಿಸಬೇಕು. ಅಭಿಯಾನದ ವಿವರಗಳನ್ನು ಒಳಗೊಂಡ ವೇಳಾಪಟ್ಟಿ ಪ್ರಕಟಿಸಬೇಕು. ತಮ್ಮ ಕಾಲೇಜು ವ್ಯಾಪ್ತಿಯ ಪದವಿಪೂರ್ವ ಕಾಲೇಜುಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ವಿವರ ಸಂಗ್ರಹಿಸಬೇಕು. ವಿದ್ಯಾರ್ಥಿಗಳನ್ನು ಸರ್ಕಾರಿ ಪದವಿ ಕಾಲೇಜುಗಳತ್ತ ಆಕರ್ಷಿಸಬೇಕು. ಈ ಅಭಿಯಾನದಲ್ಲಿ ಎಲ್ಲ ಅಧ್ಯಾಪಕರು ಮತ್ತು ಸಿಬ್ಬಂದಿ ತೊಡಗಿಸಿಕೊಳ್ಳಬೇಕು. ಪ್ರಗತಿಯ ವಿವರಗಳನ್ನು ಇಲಾಖೆಗೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.