ಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರಗೊಂಡಿರುವ ಡೆಲ್ಟಾ ಪ್ಲಸ್ ವೈರಾಣು ಸೋಂಕು ಇನ್ನೊಬ್ಬರಿಗೆ ತಗುಲಿದ್ದು, ಇದರಿಂದ ರಾಜ್ಯದಲ್ಲಿ ಇಬ್ಬರು ವ್ಯಕ್ತಿಗಳು ಬಾಧಿತರಾಗಿದ್ದಾರೆ.
ಮೊದಲ ಪ್ರಕರಣ ಮೈಸೂರಿನಲ್ಲಿ ವರದಿಯಾಗಿದ್ದರೆ, ಎರಡನೇ ಪ್ರಕರಣ ಬೆಂಗಳೂರು ನಗರದ 86 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಕಂಡು ಬಂದಿದೆ. ಡೆಲ್ಟಾ ಪ್ಲಸ್ ವೈರಾಣುವಿನ ಅನುಕ್ರಮಣಿಕೆಯನ್ನು ನಿಮ್ಹಾನ್ಸ್ ಬುಧವಾರ ಪತ್ತೆ ಮಾಡಿದೆ.
ಜೂನ್ ಮೊದಲ ವಾರ ನಿಮ್ಹಾನ್ಸ್‌ಗೆ ವೈರಾಣುವಿನ ಸ್ಯಾಂಪಲ್ ಬಂದಿತ್ತು. ಆ ಸಮಯದಲ್ಲಿ ವ್ಯಕ್ತಿಯಲ್ಲಿ ಸಣ್ಣಗೆ ಜ್ವರ, ನೆಗಡಿಯಂತಹ ಲಕ್ಷಣಗಳಿದ್ದವು. ಈ ವ್ಯಕ್ತಿಯನ್ನು ಪ್ರತ್ಯೇಕಿಸಿ, ಚಿಕಿತ್ಸೆ ಆರಂಭಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
6 ಪ್ರಯೋಗಾಲಯಗಳ ಸ್ಥಾಪನೆ:ಡೆಲ್ಟಾ ಪ್ಲಸ್ ವೈರಾಣುವಿನ ಪತ್ತೆಗಾಗಿ ಆರು ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಜಿನೋಮಿಕ್ ಸೀಕ್ವೆನ್ಸ್ ಮೂಲಕ ರೂಪಾಂತರಗೊಂಡ ವೈರಾಣು ಪತ್ತೆ ಮಾಡಲಾಗುತ್ತಿದೆ ಎಂದು ಡಾ.ಕೆ.ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು.
18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಿ ನಂತರ ಕಾಲೇಜು ಆರಂಭಿಸುವ ಕುರಿತಂತೆ ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು. ಕಾಲೇಜು ಆರಂಭದ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಕಾಲೇಜು ವಿದ್ಯಾರ್ಥಿಗಳೆಲ್ಲರಿಗೂ ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭಿಸಬಹುದು ಎಂದು ತಾಂತ್ರಿಕ ಸಲಹಾ ಸಮಿತಿಯು ಮುಖ್ಯಮಂತ್ರಿ ಸಭೆಯಲ್ಲಿ ಸಲಹೆ ನೀಡಿತ್ತು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಮತ್ತೊಮ್ಮೆ ಚರ್ಚಿಸಲಾಗುವುದು ಎಂದು ಹೇಳಿದರು.
ಮೊದಲು ಉನ್ನತ ಶಿಕ್ಷಣ, ನಂತರ ಪ್ರೌಢಶಾಲೆ ಆರಂಭಿಸಬೇಕಾಗುತ್ತದೆ. ಸಣ್ಣ ಮಕ್ಕಳಿಗೆ ಮೊದಲೇ ಶಾಲೆ ಆರಂಭಿಸಲಾಗುವುದಿಲ್ಲ. ಇದರಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲೇ ಹಾಸಿಗೆಗಳು ಖಾಲಿ ಇವೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಅಲ್ಲದ ರೋಗಿಗಳು ಬಂದರೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. 3ನೇ ಅಲೆ ಬಂದರೆ ಆಗ ಮತ್ತೆ ಹಾಸಿಗೆ ಕೇಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.