ADVERTISEMENT

ಶಿವಸೇನಾ, MES ನಿಷೇಧಕ್ಕೆ ಆಗ್ರಹ: ಮಾ. 22ರಂದು ಕರ್ನಾಟಕ ಬಂದ್ –ವಾಟಾಳ್ ನಾಗರಾಜ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 8:37 IST
Last Updated 10 ಮಾರ್ಚ್ 2025, 8:37 IST
   

ಬೆಳಗಾವಿ: ಗಡಿಯಲ್ಲಿ ನಾಡವಿರೋಧಿ ಚಟುವಟಿಕೆ ಕೈಗೊಳ್ಳುತ್ತಿರುವ ಶಿವಸೇನಾ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸಬೇಕು ಎಂದು ಆಗ್ರಹಿಸಿ ಕನ್ನಡ ಸಂಘಟನೆಗಳ ಒಕ್ಕೂಟದವರು ನಗರದಲ್ಲಿ ಸೋಮವಾರ ಪ್ರತಿಭಟನೆ ಆರಂಭಿಸಿದ್ದಾರೆ.

ನೇತೃತ್ವ ವಹಿಸಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ, 'ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇಲ್ಲಿ ನಾಡವಿರೋಧಿ ಚಟುವಟಿಕೆ ಕೈಗೊಳ್ಳುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ವಹಿಸಬೇಕು. ಬೆಳಗಾವಿಯಲ್ಲಿನ ಮರಾಠಿ ನಾಮಫಲಕಗಳನ್ನು ತೆರವುಗೊಳಿಸಬೇಕು' ಎಂದು ಆಗ್ರಹಿಸಿದರು.

'ಬೆಳಗಾವಿಯ ರಕ್ಷಣೆ, ಎಂಇಎಸ್ ನಿಷೇಧ, ಮಹದಾಯಿ ಯೋಜನೆ ಅನುಷ್ಠಾನ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತಾಯಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್ ಕರೆ ಕೊಟ್ಟಿದ್ದೇವೆ' ಎಂದರು.

ADVERTISEMENT

'ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಲಿಲ್ಲ. ಶೀಘ್ರವೇ ಎಂಇಎಸ್ ನಿಷೇಧ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಸಲು ಬಿಡುವುದಿಲ್ಲ' ಎಂದು ಎಚ್ಚರಿಕೆ ಕೊಟ್ಟರು.

'ಸುವರ್ಣ ವಿಧಾನಸೌಧಕ್ಕೆ ತಿಂಗಳಿಗೆ ಮೂವರು ಮಂತ್ರಿಗಳು ಬಂದು,‌ ಜನರ ಸಮಸ್ಯೆ ಆಲಿಸಬೇಕು. ಬೆಳಗಾವಿಯ ರಾಜಕಾರಣಿಗಳು ಮತಕ್ಕಾಗಿ ಮರಾಠಿಗರ ಓಲೈಕೆ ಮಾಡಬಾರದು. ಬೇಕಿದ್ದರೆ ಅವರೂ ಮಹಾರಾಷ್ಟ್ರಕ್ಕೆ ಹೋಗಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದರು.

'22ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಮಾಡಲಾಗುವುದು. ಅಂದು ಬೆಳಗಾವಿಗೆ ಬರುವ ಕುರಿತು ತೀರ್ಮಾನಿಸಲಾಗುವುದು' ಎಂದರು.

ಹೋರಾಟಗಾರ ಸಾ.ರಾ.ಗೋವಿಂದು ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.