ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇಬ್ಬರು ಡೆಂಗಿಯಿಂದ ಮೃತಪಟ್ಟಿರುವುದು ಶುಕ್ರವಾರ ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ವರದಿಯಾದ ಒಟ್ಟು ಡೆಂಗಿ ಮರಣ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ರಾಜ್ಯದ ಕೆಲವೆಡೆ ಡೆಂಗಿ ಶಂಕಿತ ಮರಣ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳ ‘ಸಾವಿನ ಲೆಕ್ಕಗಳ ವರದಿ’ (ಡೆತ್ ಆಡಿಟ್) ಸಿದ್ಧಗೊಂಡು, ಸಲ್ಲಿಕೆಯಾದ ಬಳಿಕ ಆರೋಗ್ಯ ಇಲಾಖೆ ಅಧಿಕೃತವಾಗಿ ಘೋಷಿಸುತ್ತಿದೆ. 24 ಗಂಟೆಗಳ ಅವಧಿಯಲ್ಲಿ 4,046 ಪರೀಕ್ಷೆಗಳನ್ನು ನಡೆಸಲಾಗಿದೆ. 549 ಮಂದಿಯಲ್ಲಿ ಹೊಸದಾಗಿ ಡೆಂಗಿ ಜ್ವರ ದೃಢಪಟ್ಟಿದೆ. ಈ ಪ್ರಕರಣಗಳಲ್ಲಿ ಒಂದುವರ್ಷದೊಳಗಿನ 11 ಮಕ್ಕಳೂ ಸೇರಿದ್ದಾರೆ.
ಡೆಂಗಿ ಪೀಡಿತರಲ್ಲಿ ಸದ್ಯ 2,674 ಮಂದಿ ಮನೆ ಆರೈಕೆಗೆ ಒಳಗಾಗಿದ್ದಾರೆ. 16 ಮಂದಿ ಐಸಿಯು ಸೇರಿ 668 ಮಂದಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ.
27 ಜಿಲ್ಲೆಗಳಲ್ಲಿ ಹೊಸದಾಗಿ ಡೆಂಗಿ ಪ್ರಕರಣಗಳು ಖಚಿತಪಟ್ಟಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 24 ಗಂಟೆಗಳ ಅವಧಿಯಲ್ಲಿ 1,801 ಪರೀಕ್ಷೆಗಳನ್ನು ನಡೆಸಲಾಗಿದ್ದು, 221 ಮಂದಿಗೆ ಹೊಸದಾಗಿ ಡೆಂಗಿ ದೃಢಪಟ್ಟಿದೆ.
ಮಂಡ್ಯದಲ್ಲಿ 41, ಹಾಸನದಲ್ಲಿ 38, ಹಾವೇರಿಯಲ್ಲಿ 28, ತುಮಕೂರಿನಲ್ಲಿ 27, ಬೀದರ್‌ನಲ್ಲಿ 25, ಚಿಕ್ಕಬಳ್ಳಾಪುರದಲ್ಲಿ 24, ದಾವಣಗೆರೆಯಲ್ಲಿ 23 ಹಾಗೂ ಬೆಳಗಾವಿಯಲ್ಲಿ 20 ಪ್ರಕರಣಗಳು ವರದಿಯಾಗಿವೆ. ಉಳಿದೆಡೆ ಇದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪ್ರಕರಣ ದೃಢಪಟ್ಟಿವೆ.
ರಾಜ್ಯದಲ್ಲಿ ಈವರೆಗೆ ವರದಿಯಾದ ಒಟ್ಟು ಡೆಂಗಿ ಪ್ರಕರಣಗಳ ಸಂಖ್ಯೆ 13,268ಕ್ಕೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.