ADVERTISEMENT

ಬರಗೂರರ ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಅವಮಾನ ಆಗಿಲ್ಲ: ಕಮಿಷನರ್‌ಗೆ ಪ್ರತಿದೂರು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 19:31 IST
Last Updated 2 ಸೆಪ್ಟೆಂಬರ್ 2022, 19:31 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ    

ಬೆಂಗಳೂರು: ಪ್ರೊ. ಬರಗೂರು ರಾಮಚಂದ್ರಪ್ಪ ಅವರು ‘ಭರತನಗರಿ’ ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ನೀಡಿರುವ ದೂರಿನಲ್ಲಿ ಸತ್ಯಾಂಶ ಇಲ್ಲ ಎಂದು ಡಿಎಸ್‌ಎಸ್‌ನ (ಅಂಬೇಡ್ಕರ್‌ವಾದ) ಮಾವಳ್ಳಿ ಶಂಕರ್‌, ಡಿಎಸ್‌ಎಸ್‌ (ಭೀಮ ವಾದ) ಮೋಹನ್‌ರಾಜ್, ಪತ್ರಕರ್ತ ಬಿ.ಎಂ.ಹನೀಫ್ ಮತ್ತಿತರರು ಪೊಲೀಸ್ ಆಯುಕ್ತರಿಗೆ ಶುಕ್ರವಾರ ಪ್ರತಿದೂರು ಸಲ್ಲಿಸಿದ್ದಾರೆ.

ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಲಾಗಿದೆ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯರಾದ ಎನ್‌. ರವಿಕುಮಾರ್ ಹಾಗೂ ಛಲವಾದಿ ನಾರಾಯಣ ಸ್ವಾಮಿ ದೂರು ನೀಡಿದ್ದರು.

‘ನಲವತ್ತು ವರ್ಷಗಳ ಹಿಂದೆ ಬರಗೂರರು ಬರೆದಿದ್ದ ಕಾದಂಬರಿಯ ಒಂದು ಪಾತ್ರ ರಾಷ್ಟ್ರಗೀತೆಯ ಧಾಟಿಯಲ್ಲಿ ದೇಶದ ಸ್ಥಿತಿಯನ್ನು ವಿಡಂಬನೆ ಮಾಡಿತ್ತು. ರಾಜಕೀಯ ವಿಡಂಬನೆಯ ಕಾದಂಬರಿಯಲ್ಲಿ ಪಾತ್ರದ ಮನೋಧರ್ಮಕ್ಕೆ ಅನುಗುಣವಾಗಿ ಹಾಗೆ ಬರೆಯಲಾಗಿತ್ತು. ಈ ಕುರಿತು ಬರಗೂರರು ಈಗಾಗಲೇ ಸ್ಪಷ್ಟನೆ ನೀಡಿದ್ದು, ರಾಷ್ಟ್ರಗೀತೆಯನ್ನು ಅವಮಾನ ಮಾಡುವ ಉದ್ದೇಶ ಇಲ್ಲ ಎಂದಿದ್ದಾರೆ. ಇದನ್ನು ಗಮನಿಸಿ, ಬರಗೂರರ ವಿರುದ್ಧ ಬಂದಿರುವ ದೂರನ್ನು ತಮ್ಮ ಹಂತದಲ್ಲೇ ಮುಕ್ತಾಯ ಮಾಡಬೇಕು’ ಎಂದು ಪ್ರತಿದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಇಂದಿನ ಸಂದರ್ಭವನ್ನೂ ಒಳಗೊಳ್ಳಬೇಕೆಂಬ ಉದ್ದೇಶದಿಂದ ಬರಗೂರರು ಮೂಲಕೃತಿಗೆ ಹೊಸ ರೂಪ ನೀಡಿದ್ದಾರೆ. 2021ರ ಅವರ ಸಮಗ್ರ ಸಾಹಿತ್ಯ ಸಂಪುಟಗಳಲ್ಲಿ ಅದು ಸೇರಿದೆ. ಹೊಸದರಲ್ಲಿ ರಾಷ್ಟ್ರಗೀತೆ ಧಾಟಿಯ ಬದಲು ಬೇರೆ ಗೀತೆ ಬರೆ ದಿದ್ದಾರೆ. ಹೀಗಾಗಿ ಹಳತು ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದೂ ವಿವರಿಸಿದ್ದಾರೆ.

ಡಿ.ಎಸ್.ಎಸ್‌ನ ಗೋಪಾಲಕೃಷ್ಣ ಹರಳಹಳ್ಳಿ, ಎಸ್‌ಯುಸಿಐ (ಸಿ)ಯ ಎಂ.ಎನ್. ಶ್ರೀರಾಮ್, ಬಂಡಾಯ ಸಾಹಿತ್ಯ ಸಂಘಟನೆಯ ಬಿ.ರಾಜಶೇಖರಮೂರ್ತಿ, ಮಾನವ ಬಂಧುತ್ವ ವೇದಿಕೆಯ ಅನಂತ ನಾಯಕ್, ಸೌಹಾರ್ದ ಕರ್ನಾಟಕದ ಎಸ್‌.ವೈ. ಗುರುಶಾಂತ್‌, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬಸವರಾಜ್ ಕವಿತಾಳ, ಎಸ್‌ಎಫ್‌ಐಡಬ್ಲ್ಯೂನ ಜ್ಯೋತಿ ಅನಂತ ಸುಬ್ಬರಾವ್ ಹಾಗೂ ಹೆಣ್ಣೂರು ಶ್ರೀನಿವಾಸ್ ಪ್ರತಿ ದೂರು ಸಲ್ಲಿಸಿದವರಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.