ADVERTISEMENT

ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 9:25 IST
Last Updated 27 ಜೂನ್ 2021, 9:25 IST
ಶಾಸಕ, ಕಾಂಗ್ರೆಸ್‌ ಮುಖಂಡ ಎಂ.ಬಿ.ಪಾಟೀಲ
ಶಾಸಕ, ಕಾಂಗ್ರೆಸ್‌ ಮುಖಂಡ ಎಂ.ಬಿ.ಪಾಟೀಲ   

ಮೈಸೂರು: ‘ಮುಖ್ಯಮಂತ್ರಿ ಆಗಬೇಕೆಂಬ ಆಸೆ ನಿಶ್ಚಿತವಾಗಿ ನನಗೂ ಇದೆ. ಎಲ್ಲರಿಗೂ ಅಂತಹ ಆಸೆ ಇರುತ್ತದೆ. ಆಸೆ ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ, ಆದರೆ ಅದು ದುರಾಸೆ ಆಗಬಾರದಷ್ಟೆ’ ಎಂದು ಶಾಸಕ, ಕಾಂಗ್ರೆಸ್‌ ಮುಖಂಡ ಎಂ.ಬಿ.ಪಾಟೀಲ ಹೇಳಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭೇಟಿಗೆ ಭಾನುವಾರ ಮೈಸೂರಿಗೆ ಬಂದಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ‘ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಕೆಲವರು ಅಭಿಮಾನದಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಹ ಅಭಿಮಾನದ ಮಾತುಗಳಿಗೆ ಕಡಿವಾಣ ಹಾಕಿ ಎಂದು ಹೈಕಮಾಂಡ್‌ ಸೂಚಿಸಿದೆ. ವರಿಷ್ಠರ ಸೂಚನೆಯನ್ನು ನಾನು ಒಳಗೊಂಡಂತೆ ಎಲ್ಲರೂ ಪಾಲಿಸಬೇಕು. ಮುಂದಿನ ಮುಖ್ಯಮಂತ್ರಿ ವಿಚಾರ ಈಗ ಮುಗಿದ ಅಧ್ಯಾಯ’ ಎಂದರು.

‘ಕಾಂಗ್ರೆಸ್‌ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿ ಯಾವುದೇ ಚುನಾವಣೆ ಎದುರಿಸಿಲ್ಲ. ಕರ್ನಾಟಕ ಮಾತ್ರವಲ್ಲ, ಬೇರೆ ರಾಜ್ಯದಲ್ಲೂ ಮಾಡಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವೆವು. 150 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರುವುದು ನಮ್ಮ ಗುರಿ’ ಎಂದು ಹೇಳಿದರು.

ADVERTISEMENT

ಪರ್ಯಾಯ ನಾಯಕರು ಇದ್ದಾರೆ: ‘ಬಿ.ಎಸ್‌.ಯಡಿಯೂರಪ್ಪ ಬಳಿಕ ಲಿಂಗಾಯತರಲ್ಲಿ ಪರ್ಯಾಯ ನಾಯಕರಿಲ್ಲ ಎಂಬುದು ಸುಳ್ಳು. ಯಡಿಯೂರಪ್ಪ ಬಲುದೊಡ್ಡ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಲಿಂಗಾಯತರಲ್ಲಿ ಎರಡನೇ ಹಂತದಲ್ಲಿ ಹಲವು ನಾಯಕರು ಇದ್ದಾರೆ. ನಮ್ಮ ಪಕ್ಷದಲ್ಲಿ ನಾನು, ಶರಣಪ್ರಕಾಶ ಪಾಟೀಲ, ಈಶ್ವರ್‌ ಖಂಡ್ರೆ ಇದ್ದೇವೆ. ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್, ಯತ್ನಾಳ್‌, ವಿ.ಸೋಮಣ್ಣ ಸೇರಿದಂತೆ ಹಲವರು ಇದ್ದಾರೆ. ಸಮುದಾಯ ದೊಡ್ಡದಿದೆ’ ಎಂದರು.

‘ಆದರೆ ಯಾರು ಮುಖ್ಯಮಂತ್ರಿ ಆಗಬೇಕು ಎಂದು ಅವರಾಗಿಯೇ ಘೋಷಣೆ ಮಾಡಿದರೆ ಆಗುವುದಿಲ್ಲ. ಜನರು ಬಯಸಬೇಕು, ಪಕ್ಷ ಅಧಿಕಾರಕ್ಕೆ ಬರಬೇಕು, ಅಂತಿಮವಾಗಿ ಶಾಸಕರು ಮತ್ತು ಹೈಕಮಾಂಡ್‌ ಹೇಳಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.