ರಾಣೆಬೆನ್ನೂರು (ಹಾವೇರಿ ಜಿಲ್ಲೆ): ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದಲ್ಲಿ ವಿಜಯದಶಮಿ (ದಸರಾ) ಹಬ್ಬದ ಮಾಲತೇಶ ದೇವರ ಕಾರ್ಣಿಕೋತ್ಸವ ಶುಕ್ರವಾರ ಜನಸಾಗರದ ಮಧ್ಯೆ ನಡೆಯಿತು.
ಕಾರ್ಣಿಕ ಗೊರವಪ್ಪ ನಾಗಪ್ಪಜ್ಜ ಉರ್ಮಿ ಅವರು 21 ಅಡಿ ಎತ್ತರದ ಬಿಲ್ಲನ್ನೇರಿ ‘ಆಕಾಶದತ್ತ ಚಿಗುರಿತು, ಬೇರು ಮುತ್ತಾತಲೇ ಪರಾಖ್’ ಎಂದು ಕಾರ್ಣಿಕ ನುಡಿದರು. ಕಾರ್ಣಿಕ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು 9 ದಿನ ಉಪವಾಸವಿದ್ದು, ಆಯುಧ ಪೂಜೆ ದಿವಸ ಈ ವರ್ಷದ ಭವಿಷ್ಯವಾಣಿ ನುಡಿಯುತ್ತಾರೆ.
ಚಾಮರ ಬೀಸುವವರು, ಕುದುರೆಕಾರರು, ವೀರಗಾರರ ಭಕ್ತಿಯ ಪರಾಕಾಷ್ಠೆ, ಡಮರಿನ ಸದ್ದಿನ ಅಲೆಯಲ್ಲಿ ಏಳುಕೋಟಿ, ಏಳುಕೋಟಿ, ಏಳುಕೋಟಿಗೋ ಚಾಂಗ್ಮಲೋ ಎಂದು ಭಕ್ತರಿಂದ ಘೋಷಣೆ ಮೊಳಗಿತು.
ಕಾರ್ಣಿಕ ನುಡಿ ಕುರಿತು ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ಅವರು, ‘ಆಕಾಶದತ್ತ ಚಿಗುರಿತಲೇ ಎಂದರೆ ಒಳ್ಳೆಯ ಮಳೆ ಆಗಲಿದೆ ಎಂದು, ಬೇರು ಮುತ್ತಾಯಿತಲೇ ಎಂದರೆ, ರೈತರಿಗೆ ಒಳ್ಳೆಯ ಬೆಳೆ ಬರುತ್ತದೆ ಎಂದು ಅರ್ಥೈಸಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.