ADVERTISEMENT

ವೈದ್ಯ ಅಣ್ಣಯ್ಯ ಕುಲಾಲ್‌ಗೆ ದೇವರಾಜ ಅರಸು ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 21:58 IST
Last Updated 18 ಆಗಸ್ಟ್ 2022, 21:58 IST
ಅಣ್ಣಯ್ಯ ಕುಲಾಲ್‌
ಅಣ್ಣಯ್ಯ ಕುಲಾಲ್‌   

ಬೆಂಗಳೂರು: ಪ್ರಸಕ್ತ ಸಾಲಿನ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿಗೆ ಮಂಗಳೂರಿನ ಡಾ. ಅಣ್ಣಯ್ಯ ಕುಲಾಲ್‌ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹ 5 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶನಿವಾರ (ಆಗಸ್ಟ್‌ 20) ನಡೆಯಲಿರುವ ಡಿ. ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಹಿಂದುಳಿದ ವರ್ಗಗಳಶ್ರೇಯೋಭಿವೃದ್ದಿಗೆ ಶ್ರಮಿಸಿರುವ ವ್ಯಕ್ತಿ ಅಥವಾ ಸಂಸ್ಥೆಗೆ ರಾಜ್ಯಮಟ್ಟದಲ್ಲಿ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ.

ಪರಿಚಯ: ಉಡುಪಿ ಜಿಲ್ಲೆಯ ಕೋಟ ಬಳಿಯ ತೆಕ್ಕಟ್ಟೆಯಲ್ಲಿ ಜನಿಸಿದ ಅಣ್ಣಯ್ಯ ಕುಲಾಲ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿದ್ದು ಶಿಕ್ಷಣ ಪಡೆದಿದ್ದರು. ವೈದ್ಯಕೀಯ ‌ಪದವಿಯ ಬಳಿಕ ಸಮಾಜಮುಖಿ, ಜಾತ್ಯತೀತ ಚಿಂತನೆಯಿಂದ ಬಡವರ, ನೊಂದವರ, ನಿರ್ಗತಿಕರಿಗೆ ವೈದ್ಯಕೀಯ ಸೇವೆ ನೀಡುವ ಮೂಲಕ ಉತ್ತಮ ವೈದ್ಯ, ಸಮಾಜ ವಿಜ್ಞಾನಿ ಎಂದು ಗುರುತಿಸಿಕೊಂಡಿದ್ದರು. ಸದ್ಯ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ಸರ್ಕಾರಿ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಬಿ.ಸಿ. ರಾಯ್‌ ಜೀವಮಾನ ಸಾಧನೆ ಪ್ರಶಸ್ತಿ, ರಾಷ್ಟ್ರೀಯ ಐಎಂಎ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಬಂದಿವೆ.ಶಿವಮೊಗ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗುರುಲಿಂಗಯ್ಯ ಅವರ ಅಧ್ಯಕ್ಷತೆಯ ಸಮಿತಿ ಅಣ್ಣಯ್ಯ ಕುಲಾಲ್‌ ಅವರನ್ನು ಆಯ್ಕೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.