ADVERTISEMENT

ಲೈವ್‌: ದೇವೇಗೌಡರೊಂದಿಗೆ ‘ಪ್ರಜಾವಾಣಿ’ ಸಂವಾದ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 12:28 IST
Last Updated 5 ಮಾರ್ಚ್ 2019, 12:28 IST
   

‘ದೊಡ್ಡಗೌಡರು’ ಎಂದೇ ಕರ್ನಾಟಕ ರಾಜಕಾರಣದಲ್ಲಿ ಖ್ಯಾತರಾದವರು ಎಚ್‌.ಡಿ.ದೇವೇಗೌಡ. ಪ್ರಧಾನಿಯಾಗಿ ದೇಶ ಆಳಿದ ದೇವೇಗೌಡರದು ತೃತೀಯ ರಂಗದ ನಾಡಿಮಿಡಿತ ಅರಿತ ಅಪರೂಪದ ವರ್ಚಸ್ಸು. ಲೋಕಸಭೆ ಚುನಾವಣೆ ಹೊಸಿಲಲ್ಲಿ ‘ಪ್ರಜಾವಾಣಿ’ ಜೊತೆಗೆ ದೇವೇಗೌಡರು ಸಂವಾದ ನಡೆಸಲಿದ್ದಾರೆ. ಈ ಸಂವಾದವುಇಂದು (ಮಾರ್ಚ್ 5) ಸಂಜೆ 5 ಗಂಟೆಯಿಂದಪ್ರಜಾವಾಣಿಯ ವೆಬ್‌ಸೈಟ್, ಫೇಸ್‌ಬುಕ್, ಟ್ವಿಟರ್ ಪುಟಗಳು ಮತ್ತು ಯುಟ್ಯೂಬ್‌ ಚಾನೆಲ್‌ನಲ್ಲಿ ಲೈವ್‌ ಸ್ಟ್ರೀಮ್ ಆಗಲಿದೆ.

---

ಬೆಂಗಳೂರು: ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು 1933ರ ಮೇ 18ರಂದುಹರದನಹಳ್ಳಿ ಗ್ರಾಮದಲ್ಲಿ ಜನಿಸಿದರು. ಹಾಸನದ ಎಲ್.ವಿ. ಪಾಲಕಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಶಿಕ್ಷಣ ಪಡೆದ ಇವರ ರಾಜಕೀಯ ಜೀವನ ಕಾಂಗ್ರೆಸ್ ಪಕ್ಷದಿಂದ ಆರಂಭವಾಯಿತು. 1962ರಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದರು. ನಂತರಸತತ ಆರು ಬಾರಿ, 1989ರವರೆಗೆಹೊಳೆನರಸೀಪುರ ಕ್ಷೇತ್ರದಲ್ಲಿ ಗೆಲವು ಸಾಧಿಸಿದರು. ಕಾಂಗ್ರೆಸ್ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಕೆ. ಕಾಮರಾಜ್ ಮತ್ತು ಮೊರಾರ್ಜಿ ದೇಸಾಯಿ ನೇತೃತ್ವದ ಕಾಂಗ್ರೆಸ್ (ಒ) ಪಕ್ಷ ಸೇರಿದರು. 1972ರಿಂದ 1976ರವರೆಗೆ ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷ ನಾಯಕನಾಗಿ ಕರ್ತವ್ಯ ನಿರ್ವಹಿಸಿದರು. ತುರ್ತುಪರಿಸ್ಥಿತಿ ವೇಳೆ ಬಂಧನಕ್ಕೊಳಗಾಗಿದ್ದಾರೆ.

ADVERTISEMENT

ಜನತಾ ಪಕ್ಷ ಸೇರಿದ ಗೌಡರು ಎರಡು ಬಾರಿ ಪಕ್ಷ ಮುನ್ನಡೆಸಿದ್ದಾರೆ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ (1983–1988) ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 1994ರಲ್ಲಿ ಜನತಾ ದಳದ ಅಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಲ್ಲದೆ, ಮುಖ್ಯಮಂತ್ರಿಯೂ ಆದರು.

1996ರ ಲೋಕಸಭಾ ಚುನಾವಣೆ ಬಳಿಕ ಅತಂತ್ರ ಸಂಸತ್ತು ನಿರ್ಮಾಣವಾಗಿದ್ದಾಗ ಪ್ರಧಾನಿಯಾಗಿ 1997ರ ಏಪ್ರಿಲ್‌ವರೆಗೆ ಕಾರ್ಯನಿರ್ವಹಿಸಿದ್ದು ಈಗ ಇತಿಹಾಸ. 1999ರ ಲೋಕಸಭಾ ಚುನಾವಣೆ ವೇಳೆ ಜನತಾ ದಳದ ಕೆಲವು ನಾಯಕರು ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಸೇರಲು ನಿರ್ಧರಿಸಿದಾಗ ಗೌಡರು ಜಾತ್ಯತೀತ ಜನತಾ ದಳ (ಜೆಡಿಎಸ್) ಸ್ಥಾಪಿಸಿದರು. 1999ರ ಚುನಾವಣೆಯಲ್ಲಿ ಗೆಲ್ಲದಿದ್ದರೂ 2002ರಲ್ಲಿ ಕನಕಪುರದಲ್ಲಿ ನಡೆದ ಉಪಚುನಾವಣೆಯಲ್ಲಿ ಜಯಸಾಧಿಸಿದರು.

2005ರಲ್ಲಿ ದೇವೇಗೌಡರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಸರ್ಕಾರ ರಚಿಸಿದರು. ಆ ಸಂದರ್ಭದಲ್ಲಿ ಅಹಿಂದಾ ಚಳವಳಿ ನಡೆಸಿದಜೆಡಿಎಸ್ ನಾಯಕರಾದ ಸಿದ್ದರಾಮಯ್ಯ, ಸಿ.ಎಂ.ಇಬ್ರಾಹಿಂ ಅವರನ್ನು ಗೌಡರು ಪಕ್ಷದಿಂದ ಉಚ್ಛಾಟಿಸಿದರು. ನಂತರ ಇವರಿಬ್ಬರೂ ನಾಯಕರು ಕಾಂಗ್ರೆಸ್ ಸೇರಿದ್ದು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯೂ ಆದರು.

2018ರ ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದಕ್ಕಾಗಿ ಕಾಂಗ್ರೆಸ್, ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವಲ್ಲಿ ಗೌಡರ ಪಾತ್ರ ಹಿರಿದು. ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ತೃತೀಯ ರಂಗದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.