ADVERTISEMENT

‘ದೇವೇಗೌಡರು ಬೆಂಬಲ ವಾಪಸ್ ಪಡೆಯಲಿ’

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 11:13 IST
Last Updated 21 ಜೂನ್ 2019, 11:13 IST

ಬೆಳಗಾವಿ: ‘ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದರಲ್ಲಿ ಸಂಶಯವಿಲ್ಲ ಎಂದು ಹೇಳಿಕೆ ನೀಡಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು, ಸಮ್ಮಿಶ್ರ ಸರ್ಕಾರಕ್ಕೆ‌ ಕೊಟ್ಟಿರುವ ಬೆಂಬಲ ವಾಪಸ್ ಪಡೆಯಬೇಕು’ ಎಂದು‌ ಶಾಸಕ, ಬಿಜೆಪಿಯ ಉಮೇಶ್ ಕತ್ತಿ ಒತ್ತಾಯಿಸಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಜೀವ ಇಲ್ಲದಿರುವ ಸರ್ಕಾರ ಮುಂದುವರಿದಿದೆ. ಉತ್ತಮ ಆಡಳಿತ ನೀಡಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಹೊರಬರಬೇಕು. ಇಲ್ಲವಾದಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರನ್ನು ಜನರು ಹೊಡೆಯುತ್ತಾರೆ. ಇಷ್ಟೊಂದು ಶಾಸಕರ ಬಲವಿದ್ದರೂ ಸರ್ಕಾರ ರಚನೆ ಮಾಡುತ್ತಿಲ್ಲವೇಕೆ ಎಂದು ಜನರು ನಮ್ಮನ್ನೂ ಹೊಡೆಯುತ್ತಾರೆ’ ಎಂದರು.

‘ಮಧ್ಯಂತರ ಚುನಾವಣೆ ‌ಬಂದರೆ ಬರಲಿ, ಸರ್ಕಾರ ಅತಂತ್ರವಾಗುವವರೆಗೆ ನಾವೂ (ಬಿಜೆಪಿಯವರು) ಕಾದು ನೋಡುತ್ತೇವೆ. ಸರ್ಕಾರ ರಚಿಸಲಾಗದಿದ್ದರೆ ಚುನಾವಣೆಗೆ ಹೋಗುವುದಕ್ಕೂ ಸಿದ್ಧವಿದ್ದೇವೆ. ಈ ಮೈತ್ರಿ ಸರ್ಕಾರದವರು ಜನರಿಗೆ ಮೋಸ ಮಾಡುತ್ತಿರುವುದನ್ನು ತಡೆಯಬೇಕಾಗಿದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಕುಮಾರಸ್ವಾಮಿ ಅವರಿಗೆ ಆರೋಗ್ಯ ಸರಿ ಇಲ್ಲ. ತಂದೆ ದೇವೇಗೌಡರ ಕೃಪೆಯಿಂದ ಮುಖ್ಯಮಂತ್ರಿ ಆಗಿದ್ದಾರೆ. ನಾಟಕ‌ ಕಂಪನಿಯೊಂದಿಗೆ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಅನುಕೂಲ‌ ಆಗುವುದಿಲ್ಲ. ಒಂದು ವರ್ಷದಿಂದ ರೈತರ ಸಾಲ ಮನ್ನಾ ಬಗ್ಗೆ ಹೇಳುತ್ತಲೇ ಇದ್ದಾರೆ. ನಿಜವಾಗಿಯೂ ಸಾಲ ಮನ್ನಾ ಮಾಡಲಾಗಿದೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.