ADVERTISEMENT

28 ಸಾವಿರ ಕೆರೆಗಳ ಅಭಿವೃದ್ಧಿ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 22:30 IST
Last Updated 19 ಆಗಸ್ಟ್ 2021, 22:30 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಬೆಂಗಳೂರು: ‘ಗ್ರಾಮೀಣ ಭಾಗದ 28 ಸಾವಿರ ಕೆರೆಗಳನ್ನು ಆಯಾ ಗ್ರಾಮ ಪಂಚಾಯಿತಿ ವತಿಯಿಂದಲೇ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.

ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಗುರುವಾರ ನಡೆಸಿದ ಬಳಿಕ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ಹಿಂದೆ ಜಿಲ್ಲಾ ಪಂಚಾಯಿತಿಗಳಿಗೆ ಕೆರೆಗಳ ಅಭಿವೃದ್ಧಿ ಕಾರ್ಯ ವಹಿಸಲಾಗಿತ್ತು. ಈಗ ಗ್ರಾಮ ಪಂಚಾಯಿತಿ ಮೂಲಕಅಭಿವೃದ್ಧಿ ಪಡಿಸಲಿದ್ದು, ಕೆರೆಗಳನ್ನು ವಹಿಸಲಾಗುವುದು. ಅಭಿವೃದ್ಧಿ ಕಾರ್ಯಕ್ಕೆ ಗುರಿ ನಿಗದಿ ಮಾಡಲಾಗಿದೆ ಎಂದೂ ಹೇಳಿದರು.

ADVERTISEMENT

ಇದಲ್ಲದೇ ಕೆರೆ–ಕಲ್ಯಾಣಿಗಳ ಅಭಿವೃದ್ಧಿ, ಬದು ನಿರ್ಮಾಣ ಕಾರ್ಯಗಳನ್ನೂ ಕೈಗೆತ್ತಿಕೊಳ್ಳಲಾಗಿದೆ. 5 ಎಕರೆ ಒಳಗಿನ ಖಾಸಗಿ ಜಮೀನಿನಲ್ಲಿ ಕೆರೆಗಳ ಅಭಿವೃದ್ಧಿಯಿಂದ ತೋಟಗಾರಿಕೆ ಬೆಳೆ ಕೃಷಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಮನೆ– ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಯ (ಮನೆ ಮನೆಗೆ ಗಂಗೆ) ಕೆಲಸ ಭರದಿಂದ ಸಾಗುತ್ತಿದೆ. ಇದರ ಪ್ರಗತಿಯ ಪರಿಶೀಲನೆ ಬಗ್ಗೆ ಆಗಸ್ಟ್‌ 30– 31 ರಂದು ಬೆಳಗಾವಿಯಲ್ಲಿ ಎಂಜಿನಿಯರ್‌ಗಳು, ಗುತ್ತಿಗೆದಾರರು ಮತ್ತು ಅಧಿಕಾರಿಗಳ ಸಭೆ ಕರೆಯಲಾಗಿದೆ.

ಸರ್ಕಾರ ನೀಡಿರುವ ಗುರಿಯನ್ನು ಎಷ್ಟರ ಮಟ್ಟಿಗೆ ತಲುಪಲಾಗಿದೆ ಎಂಬ ಬಗ್ಗೆ ಆ ಸಭೆಯಲ್ಲಿ ಚರ್ಚಿಸುವುದರ ಜತೆಗೆ, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.