ADVERTISEMENT

ಜಿ.ಪಂ. ಸದಸ್ಯ ಯೋಗೀಶಗೌಡ ಗೌಡರ ಹತ್ಯೆ; ಹಾವೇರಿ ಎಎಸ್ಪಿ ಬಾಲದಂಡಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2020, 9:29 IST
Last Updated 26 ಮೇ 2020, 9:29 IST
 ಮಲ್ಲಿಕಾರ್ಜುನ ಬಾಲದಂಡಿ
ಮಲ್ಲಿಕಾರ್ಜುನ ಬಾಲದಂಡಿ    

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು, ಹಾವೇರಿ ಜಿಲ್ಲಾ ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ನಗರದ ಸಿಬಿಐ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ವಿಚಾರಣೆ ನಡೆಯುತ್ತಿದೆ. ಪ್ರಕರಣ ಸಂಬಂಧ ಎಂಟು ಮಂದಿ ಆರೋಪಿಗಳ ವಿರುದ್ಧ ಇತ್ತೀಗಷ್ಟೇ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಸಿಬಿಐ, ತನಿಖೆಯಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವುದಾಗಿ ನ್ಯಾಯಾಲಯಕ್ಕೆ ಹೇಳಿತ್ತು. ಅದರಂತೆ ಇದೀಗ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದೆ.

ಹತ್ಯೆ ನಡೆದ ಅವಧಿಯಲ್ಲಿ ಬಾಲದಂಡಿ ಅವರು ಹುಬ್ಬಳ್ಳಿ- ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ (ಅಪರಾಧ) ಆಗಿ ಕೆಲಸ ಮಾಡುತ್ತಿದ್ದರು. ಅದೇ ಕಾರಣಕ್ಕೆ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಬರುವಂತೆ ಬಾಲದಂಡಿಗೆ ನೋಟಿಸ್ ನೀಡಿದ್ದರು. ಅದರನ್ವಯ ಬಾಲದಂಡಿ ವಿಚಾರಣೆಗೆ ಬಂದಿದ್ದಾರೆ.

ADVERTISEMENT

ಮತ್ತಷ್ಟು ಪೊಲೀಸರು ಹಾಗೂ ಧಾರವಾಡದ ಸ್ಥಳೀಯ ವ್ಯಕ್ತಿಗಳಿಗೂ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿರುವ ಮಾಹಿತಿ ಇದ್ದು, ಅವರ ವಿಚಾರಣೆಯೂ ಕ್ರಮವಾಗಿ ನಡೆಯಲಿದೆ.

ಅಮಾಯಕರ ಬಂಧನ: ಹತ್ಯೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆಯೆಂದು ಹೇಳಿದ್ದ ಸಿಬಿಐ, ನೈಜ ಆರೋಪಿಗಳು ಎನ್ನಲಾದ 8 ಮಂದಿಯನ್ನು ಈಗಾಗಲೇ ಬಂಧಿಸಿದೆ. ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿದ್ದು ಏಕೆ? ಯಾರಾದರೂ ಒತ್ತಡ ಹಾಕಿದರಾ? ಹತ್ಯೆ ಹಿಂದೆ ರಾಜಕಾರಣಿಗಳ ಕೈವಾಡ ಇದೆಯಾ? ಎಂಬ ಹಲವು ಪ್ರಶ್ನೆಗಳಿಗೆ ಸಿಬಿಐ ಉತ್ತರ ಪಡೆಯುತ್ತಿದೆ.

ಹತ್ಯೆಯಲ್ಲಿ ಪೊಲೀಸರು ಹಾಗೂ ಸ್ಥಳೀಯ ರಾಜಕಾರಣಿಗಳ ಪಾತ್ರವೂ ಇರುವ ಅನುಮಾನ ಸಿಬಿಐ ಅಧಿಕಾರಿಗಳಿಗೆ ಇದೆ. ಅದೇ ಅಯಾಮದಲ್ಲೂ ತನಿಖೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.