ADVERTISEMENT

ಧರ್ಮಸ್ಥಳ ಪ್ರಕರಣ: ತನಿಖೆಗೆ ನಾಲ್ವರು IPS ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 8:40 IST
Last Updated 20 ಜುಲೈ 2025, 8:40 IST
   

ಬೆಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ಸಮಗ್ರ ತನಿಖೆಗೆ ರಾಜ್ಯ ಸರ್ಕಾರವು ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ಮಹಾ ನಿರ್ದೇಶಕ ಪ್ರಣವ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.

ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ರಾಜ್ಯ ಮಹಿಳಾ ಆಯೋಗವು ಜುಲೈ 14ರಂದು ಸರ್ಕಾರಕ್ಕೆ ಪತ್ರ ಬರೆದಿತ್ತು. ಅಲ್ಲದೆ, ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ದಾಖಲಿಸಿದ್ದ ಹೇಳಿಕೆಯ ಆಧಾರದಲ್ಲಿ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ವಕೀಲರು, ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದರು.

ಈ ಸಂಗತಿಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ಜಿ. ಪರಮೇಶ್ವರ ಜೊತೆ ಸಮಾಲೋಚನೆ ನಡೆಸಿ, ಆರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ವಿಶೇಷ ತಂಡ ರಚಿಸುವ ಬಗ್ಗೆಯೂ ಯೋಚಿಸಿದ್ದರು.

ADVERTISEMENT

ಇದೀಗ ವಿಶೇಷ ತನಿಖಾ ತಂಡ ರಚಿಸಿ ಗೃಹ ಇಲಾಖೆಯು ಆದೇಶ ಹೊರಡಿಸಿದೆ. ಆರೋಪ ಕೇಳಿಬಂದ ಪ್ರಕರಣಗಳೂ ಸೇರಿದಂತೆ, ರಾಜ್ಯದ ಇತರೆ ಪೊಲೀಸ್‌ ಠಾಣೆಗಳಲ್ಲಿ ಈ ಸಂಬಂಧ ದಾಖಲಾಗಿರುವ ಮತ್ತು ದಾಖಲಾಗಬಹುದಾದ ಎಲ್ಲ ಅಪರಾಧ ಪ್ರಕರಣಗಳ ತನಿಖೆ ನಡೆಸುವಂತೆ ತಂಡಕ್ಕೆ ನಿರ್ದೇಶನ ನೀಡಲಾಗಿದೆ. ಆರೋಪಗಳ ಕುರಿತಂತೆ ಈಗಾಗಲೇ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಪೊಲೀಸ್‌ ಮಹಾನಿರ್ದೇಶಕರು ತನಿಖಾ ತಂಡಕ್ಕೆ ವರ್ಗಾಯಿಸಿ, ಅಗತ್ಯ ಇರುವ ಅಧಿಕಾರಿ, ಸಿಬ್ಬಂದಿಯನ್ನು ಒದಗಿಸಬೇಕು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಲಭ್ಯ ಇರುವ ಸಂಪನ್ಮೂಲಗಳನ್ನು ತನಿಖಾ ತಂಡ ಬಳಸಿಕೊಳ್ಳಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ತನಿಖೆಗೆ ಸಂಬಂಧಿಸಿದ ಪ್ರಗತಿಯನ್ನು ಪೊಲೀಸ್‌ ಮಹಾನಿರ್ದೇಶಕರಿಗೆ ಆಗಿಂದಾಗ್ಗೆ ವರದಿ ಮಾಡಬೇಕು. ಅಲ್ಲದೆ, ಎಲ್ಲ ಪ್ರಕರಣಗಳ ಸಮಗ್ರ ತನಿಖೆ ನಡೆಸಿ ಆದಷ್ಟು ಬೇಗ ವರದಿಯನ್ನು ಪೊಲೀಸ್‌ ಮಹಾನಿರ್ದೇಶಕರ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು ಎಂದೂ ಗೃಹ ಇಲಾಖೆ ನಿರ್ದೇಶನ ನೀಡಿದೆ.

ಏನಿದು ಪ್ರಕರಣ?

‘ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿವೆ. ನನಗೆ ಜೀವಬೆದರಿಕೆ ಒಡ್ಡಿ, ಈ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ’ ಎಂದು ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಜುಲೈ 3ರಂದು ದೂರು ನೀಡಿದ್ದರು. ಈ ಬಗ್ಗೆ ಭಾರತೀಯ ನ್ಯಾಯ ಸಂಹಿತೆಯ ಕಲಂ 211 (ಎ) ಅಡಿಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ಜುಲೈ 4ರಂದು ಪ್ರಕರಣ ದಾಖಲಾಗಿತ್ತು.

ಜುಲೈ 11ರಂದು ವಕೀಲರ ಜತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಅದೇ ದೂರುದಾರ, ಧರ್ಮಸ್ಥಳ ಭಾಗದಲ್ಲಿ ನೂರಾರು ಮೃತದೇಹಗಳನ್ನು ದಫನ ಮಾಡಿರುವುದಾಗಿ ಹೇಳಿಕೆ ನೀಡಿದ್ದರು. ಕಳೆದ ಎರಡು ದಶಕಗಳಲ್ಲಿ ಅತ್ಯಾಚಾರ, ಹತ್ಯೆ ಮತ್ತು ದೌರ್ಜನ್ಯಗಳು ಈ ಭಾಗದಲ್ಲಿ ನಡೆದಿವೆ ಎಂದೂ ಹೇಳಿಕೆ ದಾಖಲಿಸಿದ್ದರು.

ಸಮಗ್ರ ತನಿಖೆಗೆ ಒತ್ತಡ

ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ನೀಡಿದ್ದ ಹೇಳಿಕೆ ಮತ್ತು ಮನುಷ್ಯರೊಬ್ಬರ ತಲೆ ಬುರುಡೆ ದೊರಕಿದ ಸುದ್ದಿ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬದವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದನ್ನು ಉಲ್ಲೇಖಿಸಿ ರಾಜ್ಯ ಮಹಿಳಾ ಆಯೋಗವು ಸರ್ಕಾರಕ್ಕೆ ಪತ್ರ ಬರೆದಿತ್ತು. ಕಳೆದ 20 ವರ್ಷಗಳಿಂದ ನಡೆದಿವೆ ಎನ್ನಲಾದ ಹಲವು ಮಹಿಳೆಯರು ಮತ್ತು ವಿದ್ಯಾರ್ಥಿಗಳ ಮೇಲಿನ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸಾಭ್ವಾವಿಕ ಸಾವು ಮತ್ತು ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದೂ ಆಯೋಗ ಪತ್ರದಲ್ಲಿ ಆಗ್ರಹಿಸಿತ್ತು. 

‘ಧರ್ಮಸ್ಥಳ ಪ್ರದೇಶದಲ್ಲಿ ನೂರಾರು ಅತ್ಯಾಚಾರ, ಹತ್ಯೆ ಮತ್ತು ಕಾಡಿನಲ್ಲಿ ಶವಗಳನ್ನು ಹೂಳಿರುವ ಆರೋಪದ ತನಿಖೆಗೆ ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಸಿ.ಎಸ್‌. ದ್ವಾರಕನಾಥ್, ಎಸ್‌.ಬಾಲನ್‌ ನೇತೃತ್ವದಲ್ಲಿ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ‘ಒಬ್ಬ ಸಾಕ್ಷಿಯು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರಾಗಿ, ಕಳೇಬರದ ಮಾಹಿತಿಯನ್ನು ಸಲ್ಲಿಸಿದ್ದಾನೆ. ಜತೆಗೆ ನೂರಾರು ಶವಗಳು ಇರುವ ಸ್ಥಳವನ್ನು ತೋರಿಸುತ್ತೇನೆ ಎಂದಿದ್ದಾನೆ. ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರವಷ್ಟೇ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಶವಗಳನ್ನು ಹುಡುಕಿ ಹೊರತೆಗೆಯುವ ಕೆಲಸ ಇನ್ನೂ ಆರಂಭವಾಗಿಲ್ಲ. ಈ ಗಂಭೀರ ವಿಷಯದತ್ತ ಗಮನ ಹರಿಸಬೇಕು’ ಎಂದೂ ಕೋರಿದ್ದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರು, ‘ಈ ಪ್ರಕರಣದಲ್ಲಿ ಫಿರ್ಯಾದುದಾರ ಸಾಕ್ಷಿಗೆ ರಾಜ್ಯ ಸರ್ಕಾರ ತಕ್ಷಣವೇ ಭದ್ರತೆ ಒದಗಿಸಬೇಕು. ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು’ ಎಂದು ಒತ್ತಾಯಿಸಿದ್ದರು. ‘ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರವೂ, ತನಿಖೆ ಸರಿಯಾಗಿ ಆಗುತ್ತಿಲ್ಲ. ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ಖಾಲಿ ಹಾಳೆಯಲ್ಲಿ ಗುರುತು ಮಾಡಿಕೊಡು ಎಂದು ಪೊಲೀಸರು ಫಿರ್ಯಾದುದಾರ ಸಾಕ್ಷಿಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಆತ ನೀಡಿರುವ ಹೇಳಿಕೆಗಳು ಆಯ್ದ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದರು.

ಎಸ್‌ಐಟಿಗೆ ವಹಿಸಿರುವ ಪ್ರಕರಣಗಳು ಯಾವುವು?

l ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 39/2025 ಪ್ರಕರಣ

l ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳ ವ್ಯಾಪ್ತಿಯಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ನಾಪತ್ತೆ, ಅಸ್ವಾಭಾವಿಕ ಸಾವು, ಕೊಲೆ, ಅತ್ಯಾಚಾರ, ದೌರ್ಜನ್ಯ ಪ್ರಕರಣ

l ಧರ್ಮಸ್ಥಳದಲ್ಲಿ ನಡದಿದೆ ಎನ್ನಲಾದ ಪ್ರಕರಣಗಳ ಸಂಬಂಧ ರಾಜ್ಯದ ಇತರೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಮತ್ತು ದಾಖಲಾಗಬಹುದಾದ ಎಲ್ಲ ಅಪರಾಧ ಪ್ರಕರಣ

‘ಮುಚ್ಚಿಟ್ಟುಕೊಳ್ಳುವಂಥದ್ದು ಏನೂ ಇಲ್ಲ’

‘ಧರ್ಮಸ್ಥಳದಲ್ಲಿ ಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಪ್ರಕರಣಗಳಲ್ಲಿ ಸರ್ಕಾರ
ಮುಚ್ಚಿಟ್ಟುಕೊಳ್ಳುವಂಥದ್ದು ಅಥವಾ ಯಾರನ್ನೊ ರಕ್ಷಿಸಬೇಕು ಎನ್ನುವಂಥದ್ದು ಏನೂ ಇಲ್ಲ. ನ್ಯಾಯ ಸಿಗಬೇಕು ಅಷ್ಟೆ. ಆ ಕಾರಣಕ್ಕೆ ಉನ್ನತ ಮಟ್ಟದ ತನಿಖೆಗೆ ಎಸ್‌ಐಟಿ ರಚಿಸಿದ್ದೇವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಯುತವಾಗಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇವೆ’ ಎಂದರು.

‘ಈ ಪ್ರಕರಣಗಳ ಬಗ್ಗೆ ಒಬ್ಬ ವ್ಯಕ್ತಿ ದೂರು ಕೊಟ್ಟಿದ್ದಾರೆ. ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ಹೇಳಿಕೆಯೂ ದಾಖಲಾಗಿದ್ದು, ತನಿಖೆಗೆ ಆದೇಶ ನೀಡಲಾಗಿತ್ತು. ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕೆಂದು ಬಹಳಷ್ಟು ಜನ ಒತ್ತಾಯಿಸಿದ್ದರು’ ಎಂದರು.

‘ಮಹಿಳಾ ಆಯೋಗದ ಮನವಿಯಂತೆ ಎಸ್‌ಐಟಿ’

‘ಧರ್ಮಸ್ಥಳ ಪ್ರದೇಶದಲ್ಲಿ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ ಹೀಗೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆದಿರಬಹುದಾಗಿದ್ದು, ಈ ಎಲ್ಲ ಸಾಧ್ಯತೆಗಳನ್ನು ಪರಿಗಣಿಸಿ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆಯೋಗದ ಕೋರಿಕೆ ಮೇರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ. ವಿಶೇಷ ತನಿಖಾ ತಂಡವು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ದೂರು ಸೇರಿದಂತೆ ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ದಾಖಲಾಗುವ ಎಲ್ಲ ಕ್ರಿಮಿನಲ್ ಪ್ರಕರಣಗಳನ್ನು ಸಮಗ್ರವಾಗಿ ತನಿಖೆ ನಡೆಸಿ, ವರದಿ ನೀಡಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.