ADVERTISEMENT

ನಾನೂ ಸರ್ಕಾರಿ ಕಾಲೇಜು ವಿದ್ಯಾರ್ಥಿ: ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ

ಮಂಗಳೂರು ವಿಶ್ವವಿದ್ಯಾಲಯ ಕಾಲೇಜು 150ನೇ ವರ್ಷದ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 14:41 IST
Last Updated 6 ಫೆಬ್ರುವರಿ 2020, 14:41 IST
ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿಗೆ 150ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಹಮ್ಮಿಕೊಂಡ ವಸ್ತು ಪ್ರದರ್ಶನ ಹಾಗೂ ಇತರ ಕಾರ್ಯಕ್ರಮಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದ್ದು ಹೀಗೆ
ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿಗೆ 150ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಹಮ್ಮಿಕೊಂಡ ವಸ್ತು ಪ್ರದರ್ಶನ ಹಾಗೂ ಇತರ ಕಾರ್ಯಕ್ರಮಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದ್ದು ಹೀಗೆ   

ಮಂಗಳೂರು: ‘ನಾನೂ ಸರ್ಕಾರಿ ಕಾಲೇಜು ವಿದ್ಯಾರ್ಥಿ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೆಮ್ಮೆಯಿಂದ ಶಾಲು ಹೆಗಲೇರಿಸಿಕೊಂಡು ಹೇಳಿದರು.

ನಗರದ ವಿಶ್ವವಿದ್ಯಾಲಯ ಕಾಲೇಜು 150ನೇ ವರ್ಷದ ಸಂಭ್ರಮಾಚರಣೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಬೆಂಗಳೂರಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ. ಶ್ರೇಷ್ಠ ಗೋವುಗಳು ಬರುವುದೇ ದೊಡ್ಡಿಯಿಂದ, ಖಾಸಗಿ ಮಾತ್ರವೇ ಶ್ರೇಷ್ಠ ಎಂಬ ಭ್ರಮೆ ಬಿಡಿ’ ಎಂದು ಸರ್ಕಾರಿ ಶಾಲಾ–ಕಾಲೇಜುಗಳನ್ನು ಹೀಯಾಳಿಸುವವರಿಗೆ ತಣ್ಣನೆ ತಿರುಗೇಟು ನೀಡಿದರು.

ADVERTISEMENT

'ಅಧ್ಯಯನಗಳು ಪದೋನ್ನತಿ, ಫಲಿತಾಂಶಕ್ಕೆ ಸೀಮಿತವಾಗಬಾರದು. ಬೌದ್ಧಿಕ ಶಿಕ್ಷಣ ಹಾಗೂ ಕಲ್ಪನಾ ಶಕ್ತಿಯನ್ನು ವಿಸ್ತರಿಸಬೇಕು. ಅಂತಹ ಶ್ರೇಷ್ಠ ಬೋಧಕ ವರ್ಗದ ನಿರ್ಮಾಣವೂ ಆಗಬೇಕು’ ಎಂದರು.

‘ಮೂಗು ಹಿಡಿದು ಔಷಧಿ ನೀಡುವ ಶಿಕ್ಷಣ ಇಂದು ಬೇಕಾಗಿಲ್ಲ. ಬೆತ್ತ, ಬಸ್ಕಿ, ಬೆಂಚಿನ ಮೇಲೆ ನಿಲ್ಲುವುದು, ಕಿವಿ ಹಿಂಡಬೇಕಾಗಿಲ್ಲ. ಸ್ಪೂನ್ ಫೀಡಿಂಗ್ ಆಗಬಾರದು. ಶಿಕ್ಷಕರು ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳು ಬದುಕಿನಲ್ಲಿ ಬೆಳೆಯುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ವಿದೇಶದ ಶಿಕ್ಷಣದಲ್ಲಿ ಮುಕ್ತ ವ್ಯವಸ್ಥೆ ಇದೆ. ವಿದ್ಯಾರ್ಥಿ ತಿಂಡಿ ತಿಂದುಕೊಂಡೇ ಅಧ್ಯಯನ ಮಾಡುತ್ತಾನೆ. ಅಂತಹ ಆಸಕ್ತಿ, ತಲ್ಲೀನತೆ, ಬದ್ಧತೆಗಳನ್ನು ಬೆಳೆಸಬೇಕು’ ಎಂದು ವಿವರಿಸಿದರು.

ಬಳಿಕ ಅವರು 'ವಿಶ್ವ ಪಥ' ಸ್ಮರಣ ಸಂಚಿಕೆ ಹಾಗೂ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೊನೂತನ ಅಂಚೆ ಲಕೋಟೆ ಮತ್ತುಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗೋವಿಂದ ಚೆಟ್ಟೂರು ಅವರ ಆಯ್ದ ಬರಹಗಳ ಕೃತಿಯನ್ನು ಬಿಡುಗಡೆ ಮಾಡಿದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಮಾತನಾಡಿ, ಕಾಲೇಜಿನ ಕೊಡುಗೆಯನ್ನು ಶ್ಲಾಘಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ, ಪ್ರಾಂಶುಪಾಲ ಡಾ.ಉದಯ್ ಕುಮಾರ್ ಎಂ.ಎ., ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ.ರಾಮಕೃಷ್ಣ , ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯ ವಿನಯ್ ರಾಜ್, ಭಾರತೀಯ ಪುರಾತತ್ವ ಇಲಾಖೆ ಅಧೀಕ್ಷಕ ಡಾ.ಶಿವಕಾಂತ್ ಬಾಜಪೇಯಿ ಇದ್ದರು.

ವೇದಿಕೆ ಸೇರಿದಂತೆ ಇಡೀ ವಾತಾವರಣಕ್ಕೆ ಪಾರಂಪರಿಕ ರೂಪದ ವಿನ್ಯಾಸ, ಅಚ್ಚುಕಟ್ಟುತನವು ಗಮನ ಸೆಳೆಯಿತು. ಸುಮಾರು 1950ರ ದಶಕದಲ್ಲಿನ ಕಾಲೇಜಿನ ಹಳೇ ವಿದ್ಯಾರ್ಥಿಗಳು ಹಾಗೂ ಬೋಧಕರ ಮಾತುಗಳು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ‘ಈ ಕಾಲೇಜಿನ ಬೆಳವಣಿಗೆಗೆ ಕೊಡುಗೆ ನೀಡುತ್ತೇವೆ’ ಎಂದು ಹಲವರು ಪ್ರೀತಿಯಿಂದ ಘೋಷಿಸಿದರು. ‘ನಾನೂ ಸರ್ಕಾರಿ ಕಾಲೇಜು ಹಳೆ ವಿದ್ಯಾರ್ಥಿ’ ಎಂದು ಕೌಂಟರ್‌ನಲ್ಲಿ ನೋಂದಾಯಿಸಿಕೊಳ್ಳುತ್ತಿದ್ದ ದೃಶ್ಯ ಗರಿಮೆ ಮೂಡಿಸುವಂತಿತ್ತು.

ಕಾಲೇಜು ಸಹಯೋಗದಲ್ಲಿ ಪುರಾತತ್ವ ಇಲಾಖೆ ಆಯೋಜಿಸಿದ ವಸ್ತುಪ್ರದರ್ಶನಕ್ಕೆ ಉತ್ತಮ ಶ್ಲಾಘನೆ ವ್ಯಕ್ತವಾಯಿತು. ಸ್ವಯಂ ಸೇವಕರಂತೆ ಆತಿಥ್ಯ ನೀಡಿದ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ವರ್ಗದ ಶ್ರಮವೂ ಯಶಸ್ಸಿಗೆ ಸಾಕ್ಷಿಯಾಯಿತು.

ಅವರ ಮಗ ಫೇಲ್, ನಾನು ಪ್ರಯೋಜನವಿಲ್ಲ

‘ಪೋಷಕರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು’ ಎಂದು ಶಾಸಕ ಯು.ಟಿ.ಖಾದರ್ ಮನವಿ ಮಾಡಿದರು.

ನನ್ನ ಆತ್ಮೀಯರೊಬ್ಬರು ಬಂದು, ‘ನನ್ನ ಮಗ ಫಸ್ಟ್‌ ಪಿಯುಸಿ ಫೇಲ್. ಹೇಗಾದರೂ... ಮಾಡಿಸಿ’ ಎಂದರು. ‘ಅದು ಸಾಧ್ಯವಿಲ್ಲ’ ಎಂದೆ. ಅವರು ನನ್ನನ್ನೇ ಸಂಶಯದಿಂದ ನೋಡಿದರು. ‘ಆಯಿತು. ಹೇಳುತ್ತೇನೆ ನೀವು ಹೋಗಿ’ ಎಂದು ಕಳುಹಿಸಿದೆ.

ಆದರೆ, ಅವರ ಮಗ ಪಾಸಾಗಲೇ ಇಲ್ಲ. ಕೆಲವು ದಿನಗಳ ಬಳಿಕ, ‘ಖಾದರ್‌ ಏನೂ ಪ್ರಯೋಜನ ಇಲ್ಲ’ ಎಂದು ಅವರು ದೂರಿದ್ದರು. ‘ಅವರ ಮಗ ಫೇಲಾದಕ್ಕೆ ನಾನು ಬೈಗುಳ ತಿನ್ನುವಂತಾಯಿತು’ ಎಂದು ಖಾದರ್ ಘಟನೆಯೊಂದನ್ನು ವಿವರಿಸಿದರು.

ಹೂ ಕೊಟ್ಟ ಮೊಯಿಲಿಗೆ ಶಿಕ್ಷಕರ ಪಾಠ!

‘ನನಗೆ ಸಿಕ್ಕಿದ ಹೂವೊಂದು ವ್ಯರ್ಥ ಆಗಬಾರದು ಎಂದು ಹುಡುಗಿಗೆ ನೀಡಿದ್ದೆ. ಇದನ್ನು ತೆರೆಮರೆಯಲ್ಲೇ ಗಮನಿಸಿದ್ದ ಅಧ್ಯಾಪಕರೊಬ್ಬರು ಕರೆದು, ‘ನೀವು ಒಳ್ಳೆ ಹುಡುಗ. ಹೀಗೆಲ್ಲ ಮಾಡಬಾರದು. ಅದಕ್ಕೆ ಬೇರೆ ಅರ್ಥ ಬರುತ್ತೆ’ ಎಂದು ಹಿತವಚನ ಹೇಳಿದ್ದರು. ಹೀಗೆಯೇ... ಈ ಕಾಲೇಜು ನಮಗೆ ತುಂಟತನದ ಜೊತೆ ಬದುಕಿನ ಪಾಠವನ್ನೂ ಕಲಿಸಿತ್ತು. ವ್ಯಕ್ತಿ ಬೆಳವಣಿಗೆಗೆ ಶಿಕ್ಷಣದ ಜೊತೆ ಪರಿಸರವೂ ಮುಖ್ಯ’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.