ADVERTISEMENT

ಧರ್ಮಸ್ಥಳ ಪ್ರಕರಣ | ಮುಸುಕುಧಾರಿ ಬಂಧನ: ಹುಟ್ಟೂರಿನಲ್ಲಿ ಜನರ ಸಂತಸ

ಧರ್ಮಸ್ಥಳಕ್ಕೆ ಕಳಂಕ ತರಲು ಹೋದವನಿಗೆ ತಕ್ಕ ಶಾಸ್ತಿ: ಚಿಕ್ಕಬಳ್ಳಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 14:31 IST
Last Updated 23 ಆಗಸ್ಟ್ 2025, 14:31 IST
   

ಮಂಡ್ಯ: ಧರ್ಮಸ್ಥಳ ಪ್ರಕರಣದ ದೂರುದಾರ ಮುಸುಕುಧಾರಿ ಬಂಧನವಾಗುತ್ತಿದ್ದಂತೆ, ಆತನ ಹುಟ್ಟೂರು ಚಿಕ್ಕಬಳ್ಳಿ ಗ್ರಾಮದ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಶನಿವಾರ ಮುಸುಕುಧಾರಿಯ ಭಾವಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

‘ಧರ್ಮಧ ಮೇಲೆ ಆಪಾದನೆ ಮಾಡಲು ಹೋದವನಿಗೆ ತಕ್ಕ ಶಾಸ್ತಿಯಾಗಿದೆ. ಅದರಲ್ಲೂ ಮಂಜುನಾಥಸ್ವಾಮಿ ಮತ್ತು ಖಾವಂದರಿಗೆ ಕಳಂಕ ತರಲು ಹೊರಟ್ಟಿದ್ದ ತಾನೇ ಸೃಷ್ಟಿಸಿದ ಬಲೆಗೆ ಬಿದ್ದಿದ್ದಾನೆ’ ಎಂದು ಗ್ರಾಮಸ್ಥರು ಪ್ರತಿಕ್ರಿಯಿಸಿದರು. 

ಇದೇ ರೀತಿ ಈತನ ಹಿಂದೆ ಇದ್ದು ಷಡ್ಯಂತ್ರ ರೂಪಿಸಿದವರಿಗೂ ತಕ್ಕ ಶಿಕ್ಷೆ ಆಗಬೇಕು. ಮನೆ–ಮನೆಯಲ್ಲೂ ಮಂಜುನಾಥಸ್ವಾಮಿಯ ಭಕ್ತರಿದ್ದಾರೆ. ಅವರ ಭಾವನೆಗೆ ಧಕ್ಕೆ ತಂದಿದ್ದಾನೆ. ಈತನ ಬಂಧನ ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದು ಹೇಳಿದ್ದಾರೆ. 

ADVERTISEMENT

ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಮಾತನಾಡಿ, ‘ನಮಗೆಲ್ಲರಿಗೂ ನಿಜವಾಗಿ ಮಂಜುನಾಥನ ಮೇಲೆ ದೈವಭಕ್ತಿ ಇದೆ‌. ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಯಾರೋ ಒಬ್ಬ ಅನಾಮಿಕ ಮಾಡಿದ ದೂರಿಗೆ ಸರ್ಕಾರ ಕೂಡ ಪ್ರೋತ್ಸಾಹ ಕೊಟ್ಟಿತು. ಈಗ ಸರ್ಕಾರಕ್ಕೂ ಅರಿವಾಗಿ ಆತನನ್ನು ಬಂಧಿಸಲು ಕ್ರಮ ಕೈಗೊಂಡಿದೆ. ಷಡ್ಯಂತ್ರದ ಹಿಂದಿನವರ ಬಂಧನ ಕೂಡ ಆಗಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ. 

ಮದ್ದೂರಿನಲ್ಲಿ ಆತನ ಜೊತೆ ಕೆಲಸ ಮಾಡಿದ್ದ ರಾಜೀವ್ ಎಂಬಾತ ‘ಮುಸುಕುಧಾರಿ ಹೇಳಿರುವುದೆಲ್ಲ ಸುಳ್ಳು’ ಎಂದು ಹೇಳಿಕೆ ನೀಡಿದ್ದ. ಇದೀಗ ಅನಾಮಿಕನ ಮೊದಲ ಪತ್ನಿಯೂ ಸಹ ‘ಆತ ಹಣಕ್ಕಾಗಿ ಈ ರೀತಿ ಸುಳ್ಳು ಹೇಳುತ್ತಿದ್ದಾನೆ’ ಎಂದು ಮಾಧ್ಯಮದವರೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದರು. 

ಕೊನೆಯ ಮಗ

‘ತಂದೆ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗಿ. ನಾಲ್ವರು ಪುತ್ರರಲ್ಲಿ ಆತನೇ ಕೊನೆಯ ಮಗ. 1994ರವರೆಗೆ ಗ್ರಾಮದಲ್ಲಿದ್ದ ಆತ, ಕೆಲಸ ಮಾಡದೇ ಬೀದಿ ತಿರುಗುತ್ತಿದ್ದ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದ. ಆತನ ಸಹೋದರ ಮೊದಲು ಧರ್ಮಸ್ಥಳಕ್ಕೆ ಹೋಗಿದ್ದ. ಬಳಿಕ ಆತನೂ ಹೋದ. 2014ರಲ್ಲಿ ಮೂರನೇ ಪತ್ನಿಯೊಂದಿಗೆ ವಾಪಸಾಗಿದ್ದ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

‘ಒಂದು ವರ್ಷ ಗ್ರಾಮದಲ್ಲಿ ಸ್ವಚ್ಛತಾ ಕೆಲಸದ ಜೊತೆಗೆ ಇಟ್ಟಿಗೆ ಫ್ಯಾಕ್ಟರಿಯಲ್ಲೂ ಕೆಲಸ ಮಾಡಿಕೊಂಡಿದ್ದ. ಗ್ರಾಮಸ್ಥರೇ ಸೇರಿ ಮನೆ ನಿರ್ಮಿಸಿಕೊಟ್ಟಿದ್ದರು. ಅದನ್ನು ತನ್ನ ಹೆಸರಿಗೆ ಮಾಡಿಕೊಡಬೇಕೆಂದು ಜಗಳವಾಡಿದ್ದ. ಹಸುಗಳನ್ನು ಖರೀದಿಸಲು ಬ್ಯಾಂಕ್‌ನಿಂದ ಕೊಡಿಸಿದ್ದ ಸಾಲವನ್ನೂ ತೀರಿಸಿರಲಿಲ್ಲ. ರಾತ್ರೋರಾತ್ರಿ ಊರು ಬಿಟ್ಟಿದ್ದ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.