ಸಾಂದರ್ಭಿಕ ಚಿತ್ರ
ಎ.ಐ ಚಿತ್ರ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಕೊಲೆ ಮಾಡಿ ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯವು ವರದಿ ನೀಡಲು ಎರಡರಿಂದ ಮೂರು ತಿಂಗಳು ಹಿಡಿಯಬಹುದು. ಪ್ರಕರಣದ ಸಂಕೀರ್ಣತೆ ಹಾಗೂ ಒಂದು ವೇಳೆ ಡಿಎನ್ಎ ಪರೀಕ್ಷೆ ಮಾಡಿದರೆ ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು. ಈ ಸಮಯಾವಕಾಶವು ಪ್ರಯೋಗಾಲಯದ ಮೇಲಿರುವ ಕೆಲಸದ ಒತ್ತಡ ಹಾಗೂ ತಾಂತ್ರಿಕ ಸವಾಲುಗಳ ಪ್ರತಿಬಿಂಬ ಎಂದು ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.
ಆದರೆ ಪ್ರಕರಣದ ತುರ್ತು ಗಮನಿಸಿದರೆ ಕೆಲವೇ ವಾರದಲ್ಲಿ ವರದಿ ತಯಾರು ಮಾಡಬಹುದು ಎಂದೂ ಅವರು ಹೇಳಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯದ ಫಲಿತಾಂಶ ತಡವಾಗಲು ಹಲವು ಕಾರಣಗಳಿವೆ. ಹಲವು ಪ್ರಕರಣಗಳ ಪರೀಕ್ಷೆ ಇದ್ದು, ಪ್ರಯೋಗಾಯಗಳು ಒತ್ತಡದಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ವರದಿ ತಡವಾಗುವುದು ಸಾಮಾನ್ಯ ಎಂದು ಎಫ್‌ಎಸ್‌ಎಲ್ ತಂತ್ರಜ್ಞರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತನಿಖೆ ವೇಳೆ ಮೂಳೆ ಅಥವಾ ಇನ್ಯಾವುದೇ ಮಾನವ ದೇಹದ ಅವಶೇಷಗಳು ಸಿಕ್ಕರೆ ಅದರ ವೈಜ್ಞಾನಿಕ ತನಿಖೆಗೆ ಪೊಲೀಸರು ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸುತ್ತಾರೆ. ಸತ್ತವರ ಗುರುತು, ಹೇಗೆ ಸಾವಿಗೀಡಾಗಿದ್ದಾರೆ, ಏನಾದರೂ ಆಚಾತುರ್ಯ ಸಂಭವಿಸಿದೆಯೇ ಎನ್ನುವುದನ್ನು ಪರೀಕ್ಷೆಯಲ್ಲಿ ಪತ್ತೆ ಮಾಡಲಾಗುತ್ತದೆ.
‘ಎಫ್‌ಎಸ್‌ಎಲ್‌ಗೆ ಮಾದರಿಗಳು ಬಂದ ಕೂಡಲೇ ಮೊದಲ ಹೆಜ್ಜೆ, ಅವುಗಳನ್ನು ನೋಂದಣಿ ಮಾಡಿಕೊಂಡು ದಾಖಲೀಕರಣ ಮಾಡುವುದು. ಅವುಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಬಗ್ಗೆ ಹಾಗೂ ಹಸ್ತಕ್ಷೇಪ ತಡೆಯಲು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿರುವುದನ್ನು ತಂತ್ರಜ್ಞರ ತಂಡ ಖಚಿತಪಡಿಸಿಕೊಳ್ಳುತ್ತದೆ. ಮಾದರಿಗಳು ಪೊಲೀಸ್ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳೊಂದಿಗೆ ಬರುತ್ತದೆ’ ಎಂದು ತಂತ್ರಜ್ಞರು ವಿವರಿಸಿದ್ದಾರೆ.
ಬಳಿಕ ವಿಧಿವಿಜ್ಞಾನ ತಜ್ಞರ ತಂಡ ಮಾದರಿಯ ಭೌತಿಕ ಪರೀಕ್ಷೆ ಮಾಡುತ್ತದೆ. ಮೂಳೆಗಳು ಮನುಷ್ಯನದ್ದೋ, ಪ್ರಾಣಿಯದ್ದೋ ಎಂದು ಪರೀಕ್ಷಿಸುತ್ತಾರೆ. ಎಷ್ಟಿವೆ? ಮಹಿಳೆಯದ್ದೋ, ಪುರುಷನದ್ದೋ ಎನ್ನುವುದನ್ನೂ ನೋಡುತ್ತಾರೆ. ವ್ಯಕ್ತಿಯ ಆಯಸ್ಸು, ಎತ್ತರವನ್ನೂ ಕಂಡು ಹಿಡಿಯುತ್ತಾರೆ. ಕಣ್ಣಿಗೆ ಕಾಣುವ ಗಾಯ, ಸುಟ್ಟ ಗಾಯ, ಮುರಿತದ ಕುರುಹು ಅಥವಾ ಮೂಳೆ ಮುರಿತ ಆಗಿದೆಯೇ ಎನ್ನುವುದನ್ನು ಪರೀಕ್ಷಿಸುತ್ತಾರೆ.
ಸಿಕ್ಕಿರುವ ಅವಶೇಷ ಹಾಗೂ ಪ್ರಕರಣದ ಸ್ವರೂಪನ್ನಾಧರಿಸಿ ತಜ್ಞರು ವಿವಿಧ ಪರೀಕ್ಷೆಗಳನ್ನು ಮಾಡುತ್ತಾರೆ. ವ್ಯಕ್ತಿಯನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ, ವಿಷಶಾಸ್ತ್ರ ಪರೀಕ್ಷೆಗಳು, ಆಸ್ಟಿಯೋಲಾಜಿಕಲ್ ಪರೀಕ್ಷೆ, ಬ್ಯಾಲಿಸ್ಟಿಕ್ ಪರೀಕ್ಷೆಗಳು, ಹಿಸ್ಟೋಪಾಥಾಲಜಿ ಪರೀಕ್ಷೆಗಳು ಕೀಟಶಾಸ್ತ್ರ ಪರೀಕ್ಷೆಗಳು, ಬೆರಳಚ್ಚು ಅಥವಾ ದಂತ ವಿಶ್ಲೇಷಣೆಯಂತಹ ಪರೀಕ್ಷೆಗಳನ್ನು ಮಾಡಲಾಗುತ್ತದೆ.
ವ್ಯಕ್ತಿಯನ್ನು ಗುರುತಿಸುವಲ್ಲಿ ಪೊಲೀಸರಿಗೆ ಸಹಾಯ ಮಾಡಲು ಮೂಳೆಗಳು ಅಥವಾ ಅಂಗಾಂಶಗಳಿಂದ ಡಿಎನ್‌ಎಯನ್ನು ಹೊರತೆಗೆಯಲು ಪ್ರಯತ್ನಿಸಲಾಗುತ್ತದೆ. ಮೂಳೆಯ ತುಂಡನ್ನು (ಸಾಮಾನ್ಯವಾಗಿ ತೊಡೆಯ ಮೂಳೆ ಅಥವಾ ಹಲ್ಲು) ತೆಗೆದುಕೊಂಡು, ಅದನ್ನು ಸ್ವಚ್ಛಗೊಳಿಸಿ, ಡಿಎನ್‌ಎ ಹೊರತೆಗೆಯಲು ಸುಧಾರಿತ ತಂತ್ರಗಳನ್ನು ಬಳಸಲಾಗುತ್ತದೆ. ನಂತರ ಈ ಡಿಎನ್‌ಎಯನ್ನು ಕುಟುಂಬ ಸದಸ್ಯರಿಂದ ತೆಗೆದುಕೊಂಡ ಮಾದರಿಗಳೊಂದಿಗೆ ಹೋಲಿಸಲಾಗುತ್ತದೆ.
ಎಲ್ಲಾ ಪರೀಕ್ಷೆಗಳು ಮುಗಿದ ನಂತರ, ಎಫ್‌ಎಸ್‌ಎಲ್ ವಿವರವಾದ ವರದಿಯನ್ನು SIT ಗೆ ಸಲ್ಲಿಸುತ್ತದೆ. ಮಾಡಿದ ಸಂಶೋಧನೆಗಳು, ಬಳಸಿದ ವಿಧಾನಗಳು ಮತ್ತು ತಜ್ಞರ ಅಭಿಪ್ರಾಯ ವರದಿಯಲ್ಲಿ ವಿವರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.